ADVERTISEMENT

‘ಜಾಗತೀಕರಣದ ಅರಿವಿಲ್ಲದಿದ್ದರೆ ವೈವಿಧ್ಯ ಕೃತಿ ರಚನೆ ಅಸಾಧ್ಯ’

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 5:56 IST
Last Updated 8 ಜನವರಿ 2014, 5:56 IST

ಮಡಿಕೇರಿ: ವಿಸ್ತಾರವಾದ, ನಿರಂತರವಾದ ಓದು ಹಾಗೂ ಜಾಗತೀಕರಣದ ಅರಿವು ಇಲ್ಲದಿದ್ದರೆ ಜಿಲ್ಲೆಯ ಸಂಸ್ಕೃತಿ, ವೈವಿಧ್ಯತೆಯನ್ನು ಬಿಂಬಿಸುವ ಕೃತಿ ರಚಿಸುವುದು ಸಾಧ್ಯವಿಲ್ಲ ಎಂದು ಡಾ. ಎಂ.ಪಿ. ರೇಖಾ ವಸಂತ್‌ ಅಭಿಪ್ರಾಯಪಟ್ಟರು.

ನಗರದ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಕಾಲೇಜಿನ ಆವರಣದಲ್ಲಿ ನಡೆಯುತ್ತಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಮಾನಾಂತರ ವೇದಿಕೆಯಲ್ಲಿ ಮಂಗಳವಾರ ನಡೆದ ‘ಕೊಡಗು ಮತ್ತು ಕನ್ನಡ’ ಎಂಬ ವಿಷಯದ ಕುರಿತು ನಡೆದ ವಿಚಾರ ಗೋಷ್ಠಿಯಲ್ಲಿ ಅವರು ‘ಕೊಡಗಿನ ಸ್ಮರಣೀಯ ಸಾಹಿತಿಗಳು’ ವಿಷಯದ ಕುರಿತು ಮಾತನಾಡಿದರು.

ಕೊಡಗಿನ ಸಾಹಿತ್ಯವನ್ನು ಶ್ರೀಮಂತವಾಗಿಸುವಲ್ಲಿ ಹಲವು ಸಾಹಿತಿಗಳ ಪಾತ್ರವಿದೆ. ಕನ್ನಡ, ಕೊಡವ ಹಾಗೂ ಅರೆ ಭಾಷೆಯಲ್ಲಿ ಸಾಕಷ್ಟು ಸಾಹಿತ್ಯ ಕೃಷಿ ಆಗಿದ್ದು, ಸಾಹಿತ್ಯದಲ್ಲಿ ಉತ್ತಮ ಕೃತಿ ಮೂಡಿಬರುವ ಅಗತ್ಯವಿದೆ ಎಂದರು.

ಸಾಮಾಜಿಕ ಪಿಡುಗುಗಳ ಬಗ್ಗೆ ಬೆಳಕು ಚೆಲ್ಲಿದ ಕೊಡಗಿನ ಗೌರಮ್ಮ ಅವರ ಕಥೆಗಳು, ಕೊಡಗಿನಲ್ಲಿ ಸ್ವಾತಂತ್ರ್ಯದ ನಂತರ ಆದ ಬದಲಾವಣೆಗಳನ್ನು ಚಿತ್ರಿಸುವ ಭಾರತೀಸುತರ ಕಾದಂಬರಿಗಳು, ಬಿ.ಎಂ. ಕೃಷ್ಣಯ್ಯ ಅವರ ಕೊಡಗಿನ ಇತಿಹಾಸ, ಪಂಜೆ ಮಂಗೇಶರಾಯರ ಹುತ್ತರಿ ಹಾಡು ಸೇರಿದಂತೆ ಹಲವು ಕೃತಿಗಳು, ಕೂತಂಡ ಪಾರ್ವತಿ ಪೂವಯ್ಯ, ನಡಿಕೇರಿಯಂಡ ಚಿಣ್ಣಪ್ಪ, ಡಾ. ಐ.ಮಾ. ಮುತ್ತಣ್ಣ, ಮುಂತಾದವರು ಕೊಡಗಿನ ಸಾಹಿತ್ಯವನ್ನು ಶ್ರೀಮಂತವಾಗಿಸಿದ್ದಾರೆ ಎಂದರು.

ಕೊಡಗು ಮಾತ್ರವಲ್ಲದೆ ಹೊರ ಜಿಲ್ಲೆಯವರು ಕೂಡ ಕೊಡಗಿನ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಕೊಡಗಿನಲ್ಲಿ ಸಂಸ್ಕೃತಿ ಕುರಿತಾದ ಚಿಂತನೆಗಳಿಗೆ ಹೆಚ್ಚಿನ ಆಸಕ್ತಿ ವಹಿಸಬೇಕಾಗಿದೆ ಎಂದರು.

ಕನ್ನಡದ ಬೆಳವಣಿಗೆಯಲ್ಲಿ ಕೊಡಗು ಎದುರಿಸುತ್ತಿರುವ ಸವಾಲುಗಳು ಎಂಬ ವಿಷಯ ಮಂಡನೆ ಮಾಡಿದ ಡಾ. ಯು.ಎಸ್‌. ಶ್ರೀಧರ ಆರಾಧ್ಯ, ಬಹುಭಾಷೆ, ಸಂಸ್ಕೃತಿ ಆಚಾರ ವಿಚಾರ, ಕಠಿಣವಾದ ಪ್ರಾಕೃತಿಕ ಸನ್ನಿವೇಶದಿಂದಾಗಿ ಕೊಡಗು ಜಿಲ್ಲೆ ಸಾಹಿತ್ಯಕವಾಗಿ ಬೆಳೆದಿಲ್ಲ.

ಜಿಲ್ಲೆಯಲ್ಲಿ ಭಾಷೆ ವಿಕಾಸ ವಾಗುತ್ತಿಲ್ಲ, ಕ್ಷೀಣವಾಗುತ್ತಿದೆ. ಗೌರವ ಮಾನ್ಯತೆಗಳಿಲ್ಲದ ಯಾವುದೇ ಭಾಷೆ ಬೆಳೆಯುವುದಿಲ್ಲ ಮತ್ತು ಅದು ಕಿರಿಯರ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಜಿಲ್ಲೆಯಲ್ಲಿ ಪ್ರತಿಭೆಗಳಿದ್ದರೂ ಪ್ರತಿಭೆ ಬೆಳೆಯಲು ವಾತಾವರಣವಿಲ್ಲ.

ಪ್ರತಿಭೆಯನ್ನು ಪೋಷಿಸಬೇಕಾದ ಅಗತ್ಯವಿದೆ. ವಿಕಾಸಕ್ಕೆ ಪೂರಕವಾದ ಪರಿಸರದಲ್ಲಿ ಹೋಗಿ ಬೆಳೆಯುತ್ತೇನೆ ಎಂಬ ಭಾವನೆ ಯುವ ಜನರಲ್ಲಿ ಬೇರೂರಿದೆ. ಇಂಗ್ಲಿಷ್‌ ಭಾಷೆಯ ಬಗ್ಗೆ ಜನರಲ್ಲಿ ಮೋಹ ಹೆಚ್ಚುತ್ತಿದೆ. ಇಂಗ್ಲಿಷ್‌ ಪೋಷಕ ಶಕ್ತಿಯಾಗಬೇಕೇ ಹೊರತು ಭಕ್ಷಕ ಆಗಬಾರದು ಎಂದರು.
ಕನ್ನಡ ಭಾಷೆ ಬೆಳವಣಿಗೆಗೆ ಪೂರಕವಾಗಿ ಮಕ್ಕಳ ಬೌದ್ಧಿಕ ಮಟ್ಟಕ್ಕೆ ತಕ್ಕದಾದ ಪುಸ್ತಕಗಳಿರುವ ಗ್ರಂಥಾಲಯ ವನ್ನು ಸ್ಥಾಪಿಸುವುದು. ಪುಸ್ತಕ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸುವ ಅಗತ್ಯವಿದೆ. ಶಾಲೆಗಳಲ್ಲಿ ಭಾಷಾ ಸಂಘಗಳ ಮೂಲಕ ಭಾಷೆಯ ಬೆಳವಣಿಗೆ ಆಗಬೇಕಿದೆ ಎಂದರು.

‘ಕೊಡಗಿನ ಕನ್ನಡದ ಬೆಳವಣಿಗೆಯಲ್ಲಿ ಕ್ರೈಸ್ತ ಮಿಷನರಿಗಳ ಪಾತ್ರ’ ಎಂಬ ವಿಷಯದ ಕುರಿತು ಡಾ. ಗ್ಲಾಡ್ಸ್‌ನ್‌ ಜತ್ತನ್ನ ಮಾತನಾಡಿದರು.
ಸಾಹಿತಿ, ಸಂಶೋಧಕ ಎಂ. ಜಿ. ನಾಗರಾಜು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಡಾ. ಲಿಂಗರಾಜ ಅಂಗಡಿ ಸ್ವಾಗತಿಸಿದರು. ಡಾ. ವಿಜಯಕುಮಾರ್‌ ಕಟಗಿಹಳ್ಳಿಮಠ ವಂದಿಸಿದರು. ರಾಜ್ಯ ಕಸಾಪ ಕಾರ್ಯಕಾರಿ ಸಮಿತಿ ಮಂಡಳಿ ಸದಸ್ಯರಾದ ಬಿ.ಟಿ. ಲಲಿತಾ ನಾಯಕ್‌, ಸಂಗಮೇಶ ಬಾಳವಾಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.