ADVERTISEMENT

ವೇತನ ಬಾಕಿ: 24ರಿಂದ ಜಿ.ಪಂ ಕಚೇರಿ ಎದುರು ಧರಣಿ

ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಪಿ.ಆರ್.ಭರತ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 20:15 IST
Last Updated 20 ಫೆಬ್ರುವರಿ 2020, 20:15 IST

ಮಡಿಕೇರಿ: ರಾಜ್ಯದ ‘ಎ’ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಬಾಕಿಯಿರುವ ₹382 ಕೋಟಿಯನ್ನು ಬಜೆಟ್‌ನಲ್ಲಿ ಸೇರಿಸಲು ಒತ್ತಾಯಿಸಿ, ಫೆ.24ರಿಂದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಪಿ.ಆರ್.ಭರತ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 6,024 ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು 55 ಸಾವಿರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ವಾರ್ಷಿಕ ಸಂಬಳಕ್ಕೆ ₹900 ಕೋಟಿ ಹಣಬೇಕಾಗುತ್ತದೆ. ಕಳೆದ ನಾಲ್ಕೈದು ತಿಂಗಳಿಂದ ಕೆಲವು ಸಿಬ್ಬಂದಿಗಳ ವೇತನ ಬಾಕಿ ಉಳಿದಿದೆ. ಈ ಹಿನ್ನೆಲೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ, ಅನಿರ್ಧಿಷ್ಟ ಧರಣಿ ನಡೆಸಿ ಜಿ.ಪಂ ಸಿಇಒ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರದ ಯಾವ ಆದೇಶವನ್ನು ಜಾರಿ ಮಾಡುತ್ತಿಲ್ಲ. ಜತೆಗೆ ಗ್ರಾ.ಪಂ ಆಡಳಿತ ಅವಧಿ ಮುಗಿಯುತ್ತಿರುವುದರಿಂದ ಹೆಚ್ಚಿನ ಹಣ ದುರುಪಯೋಗವಾಗುತ್ತಿದೆ. 15ರಿಂದ 20 ವರ್ಷ ಸೇವೆ ಸಲ್ಲಿಸಿದರೂ ಬಿಲ್ ಕಲೆಕ್ಟರ್‌ಗಳಿಗೆ ಬಡ್ತಿ ಸಿಗುತ್ತಿಲ್ಲ. ಜತೆಗೆ, ಜಿಲ್ಲಾ ಪಂಚಾಯಿತಿಗಳಲ್ಲಿ ಬಡ್ತಿ ಪಟ್ಟಿ ಸಿದ್ಧತೆ ಮಾಡದೆ ಕಾಲ ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗಳಲ್ಲಿ ಗ್ರಾ.ಪಂ ನೌಕರರ ಸಮಸ್ಯೆ, ಬೇಡಿಕೆಗಳ ಕುರಿತು ಚರ್ಚೆ ನಡೆಸುತ್ತಿಲ್ಲ ಎಂದು ದೂರಿದ ಅವರು, ಪಂಚಾಯಿತಿಗಳಲ್ಲಿ ಅಧಿಕಾರಿಗಳು ಕಾಟಾಚಾರದ ಕೆಲಸ ಮಾಡುತ್ತಿದ್ದಾರೆ. ಕೆಲವು ಗ್ರಾ.ಪಂ ಅಧ್ಯಕ್ಷರು ಇಲ್ಲಸಲ್ಲದ ಆರೋಪಗಳನ್ನು ನೌಕರರ ಮೇಲೆ ಹೇರುವುದರ ಜತೆಗೆ ನೌಕರರನ್ನು ಕೆಲಸದಿಂದ ತೆಗೆಯುವ ಪ್ರವೃತ್ತಿ ನಡೆಯುತ್ತಿದೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಗ್ರಾ.ಪಂ ಮುಂಭಾಗ ಪ್ರತಿಭಟನೆ:ಫೆ.25 ಕೂಡುಮಂಗಳೂರು ಗ್ರಾ.ಪಂ ಎದುರು ನೌಕರರು ಗ್ರಾಮದ ಕಸ ವಿಲೇವಾರಿ ಮಾಡದೇ ಪ್ರತಿಭಟಿಸಲಿದ್ದಾರೆ. ಫೆ.29 ಹಂಡ್ಲಿ ಗ್ರಾ.ಪಂಯಲ್ಲಿ ಪ್ರತಿಭಟನೆ ನಡೆಸಲಿದ್ದು, ಮುಂದಿನ ದಿನಗಳಲ್ಲಿ ಇದೇ ರೀತಿಯಲ್ಲಿ ಸಂಘದ ವತಿಯಿಂದ ನೌಕರರೊಡನೆ ವಿವಿಧ ಭೇಡಿಕೆ ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಸಂತ್, ಎಂ.ಬಿ.ಹರೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.