ADVERTISEMENT

3 ಕ್ಷೇತ್ರಗಳಲ್ಲಿ ಶೇ 70 ಮತದಾನ

ಗ್ರಾಮ ಪಂಚಾಯಿತಿ ಉಪಚುನಾವಣೆ;

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 8:19 IST
Last Updated 5 ಆಗಸ್ಟ್ 2013, 8:19 IST

ಮಡಿಕೇರಿ:  ವಿವಿಧ ಕಾರಣಗಳಿಂದ ತೆರವಾಗಿದ್ದ ನಾಲ್ಕು ಗ್ರಾಮ ಪಂಚಾಯಿತಿ ಸ್ಥಾನಗಳ ಪೈಕಿ ಮೂರು ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆದಿದ್ದು, ಒಟ್ಟಾರೆಯಾಗಿ ಶೇ 70ರಷ್ಟು ಮತದಾನ ನಡೆದಿದೆ. ಮತದಾನ ಪ್ರಕ್ರಿಯೆಯು ಶಾಂತಿಯುತವಾಗಿತ್ತು.

ಮಡಿಕೇರಿ ತಾಲ್ಲೂಕಿನ ಕಾರಗುಂದ, ಚೆಂಬು, ಯರವನಾಡು ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಒಟ್ಟು 3,112 ಮತದಾರರ ಪೈಕಿ 2,176 ಮತದಾರರು (ಶೇ 70) ತಮ್ಮ ಹಕ್ಕು ಚಲಾಯಿಸಿದ್ದಾರೆ. ಬೆಳಿಗ್ಗೆ 7ಗಂಟೆಯಿಂದ ಸಂಜೆ 5ಗಂಟೆಯವರೆಗೆ ಮತ ಚಲಾವಣೆಯಾಗಿತ್ತು.

ಕಾರಗುಂದ ಕ್ಷೇತ್ರ:  ಮಡಿಕೇರಿ ತಾಲ್ಲೂಕಿನ ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಕಾರಗುಂದ ಕ್ಷೇತ್ರದಲ್ಲಿ 1,078 ಮತಗಳು ಚಲಾವಣೆಯಾಗಿದ್ದು, ಶೇ 68ರಷ್ಟು ಮತದಾನವಾಗಿದೆ.

ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕೆ.ಪಳಂಗಪ್ಪ ಎನ್ನುವವರು ರಾಜೀನಾಮೆ ನೀಡಿದ್ದರ ಪರಿಣಾಮವಾಗಿ ಇದು ತೆರವುಗೊಂಡಿತ್ತು. ಈ ಕ್ಷೇತ್ರವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಟಿ.ಪ್ರತಾಪ್ ಕಾರ್ಯಪ್ಪ ಹಾಗೂ ಕೆ.ತೀರ್ಥಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.

ಯರವನಾಡು ಕ್ಷೇತ್ರ:  ಯರವನಾಡು ಕ್ಷೇತ್ರದಲ್ಲಿ 730 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ 72ರಷ್ಟು ಮತದಾನವಾಗಿದೆ.
ಹಿಂದೆ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸದಸ್ಯ ಕೃಷ್ಣಕುಮಾರ್ ಕಳೆದ ವರ್ಷ ನಿಧನರಾದ ಹಿನ್ನೆಲೆಯಲ್ಲಿ ಮರುಚುನಾವಣೆ ನಡೆಯುತ್ತಿದೆ. ಈ ಕ್ಷೇತ್ರವು ಹಿಂದುಳಿದ ವರ್ಗ `ಅ' ವರ್ಗಕ್ಕೆ ಮೀಸಲಾಗಿದೆ. ಈ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ ಬಿ.ಎಲ್. ತಿರುಮಲಾ ಹಾಗೂ ಬಿ.ಕೆ.ರವಿ ನಾಮಪತ್ರ ಸಲ್ಲಿಸಿದ್ದಾರೆ.

ಚೆಂಬು ಕ್ಷೇತ್ರ:  ಚೆಂಬು ಕ್ಷೇತ್ರದಲ್ಲಿ 1,304 ಮತದಾರರು ಮತ ಚಲಾಯಿಸಿದ್ದು, ಶೇ 70ರಷ್ಟು ಮತದಾನವಾಗಿದೆ.
ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸದಸ್ಯರು ಮರಣ ಹೊಂದಿದ ಹಿನ್ನೆಲೆಯಲ್ಲಿ ಮರುಚುನಾವಣೆ ನಡೆಸಲಾಗುತ್ತಿದೆ. ಈ ಕ್ಷೇತ್ರವು ಹಿಂದುಳಿದ `ಬ' ವರ್ಗಕ್ಕೆ ಮೀಸಲಾಗಿದೆ. ಈ ಸ್ಥಾನದ ಆಕಾಂಕ್ಷಿಗಳಾದ ಪಿ.ಆರ್. ದಿನೇಶ್ ಹಾಗೂ ಕೆ.ಸಿ. ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ.

ಮತ ಎಣಿಕೆ:  ಮಡಿಕೇರಿಯ ನಗರಸಭೆ ಮಳಿಗೆಗಳಲ್ಲಿ ಭದ್ರತಾ ಕೊಠಡಿಯನ್ನು ತೆರೆಯಲಾಗಿದ್ದು, ಇಲ್ಲಿ ಮತಪೆಟ್ಟಿಗೆಗಳನ್ನು ಸುರಕ್ಷಿತವಾಗಿ ಇಡಲಾಗಿದೆ. ಆಗಸ್ಟ್ 7ರಂದು ಬೆಳಿಗ್ಗೆ ಮತ ಎಣಿಕೆ ಕಾರ್ಯವು ನಡೆಯಲಿದೆ.

ನಾಮಪತ್ರವೇ ಸಲ್ಲಿಕೆಯಾಗಿಲ್ಲ:  ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಹಳ್ಳಿ ಗ್ರಾಮ ಪಂಚಾಯಿತಿಯ ಕೊತ್ನಳ್ಳಿ ಕ್ಷೇತ್ರಕ್ಕೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಕಳೆದ ವರ್ಷ ನಡೆದ ಚುನಾವಣೆಯಲ್ಲೂ ಈ ಕ್ಷೇತ್ರದಿಂದ          ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ ಎನ್ನುವುದು ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.