ADVERTISEMENT

31ಜನರ ವಿರುದ್ಧ ಮೊಕದ್ದಮೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 7:30 IST
Last Updated 15 ಮಾರ್ಚ್ 2012, 7:30 IST

ವಿರಾಜಪೇಟೆ: ಕಡಂಗ ಗ್ರಾಮದ ಮದೀನಾ ಮಸೀದಿಯಲ್ಲಿ ಮೂರು ದಿನಗಳ ಹಿಂದೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸರು ಒಟ್ಟು 31 ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.

ಭಾನುವಾರ ಸಂಜೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಮತ್ತೊಂದು ಗುಂಪಿನ ವ್ಯಕ್ತಿಯ ಕೈ ತಾಗಿತು ಎನ್ನುವ ಕಾರಣಕ್ಕಾಗಿ ಎಸ್‌ಕೆಎಸ್‌ಎಸ್‌ಎಫ್ ಹಾಗೂ ಎಸ್‌ಎಸ್‌ಎಫ್ ಗುಂಪುಗಳ ನಡುವೆ ಘರ್ಷಣೆ ಉಂಟಾಗಿತ್ತು. ಎರಡು ಗುಂಪುಗಳ ಮುಖಂಡರು ಸೋಮವಾರ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಎಸ್‌ಕೆಎಸ್‌ಎಸ್‌ಎಫ್ ಗುಂಪಿನ 18 ಮಂದಿ ಹಾಗೂ ಎಸ್‌ಎಸ್‌ಎಫ್‌ನ 13 ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ.

ಎಸ್‌ಕೆಎಸ್‌ಎಸ್‌ಎಫ್‌ನ 5 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಇನ್ನಿತರ ಜನರ ಹುಡುಕಾಟದಲ್ಲಿದ್ದಾರೆ.
ಇದಕ್ಕೂ ಮುಂಚೆ ಕಡಂಗ ಗ್ರಾಮದ ಮಸೀದಿಯ ಮದರಸಾ ಪರೀಕ್ಷೆಯಲ್ಲಿ ಮೇಲ್ವಿಚಾರಕರು ವಿದ್ಯಾರ್ಥಿಗಳಿಗೆ ನಕಲು ಮಾಡಲು ಅವಕಾಶ ನೀಡಿದರೆಂಬ ಘಟನೆಯಲ್ಲಿ ಇದೇ ಎರಡು ಗುಂಪುಗಳ ನಡುವೆ ಮಾರಾಮಾರಿ ಉಂಟಾಗಿತ್ತು. ಈ ಎರಡು ಗುಂಪುಗಳ ನಡುವೆ ಅನೇಕ ಬಾರಿ ಘರ್ಷಣೆ ನಡೆದಿರುವುದನ್ನು ಗಮನಿಸಬಹುದಾಗಿದೆ.

ಡಿವೈಎಸ್‌ಪಿ ಎಚ್ಚರಿಕೆ
ಘರ್ಷಣೆ ನಿರಂತರವಾಗಿ ನಡೆಯುತ್ತಿರುವ ಕಾರಣ, ಸಮುದಾಯದ ನೆಮ್ಮದಿಗೆ ಭಂಗ ತರುತ್ತಿರುವ ಹಿನ್ನೆಲೆಯಲ್ಲಿ ಮಸೀದಿಯನ್ನು ಸರ್ಕಾರವೇ ವಹಿಸಿಕೊಳ್ಳುವಂತೆ ಡಿವೈಎಸ್ಪಿ ಅಣ್ಣಪ್ಪ ನಾಯಕ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದ್ದಾರೆ ಎಂದು ತಿಳಿದುಬಂದಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.