ಮಡಿಕೇರಿ: ಬೂಕರ್ ಪ್ರಶಸ್ತಿ ಪಡೆದ ಅನುವಾದಕಿ ದೀಪಾ ಭಾಸ್ತಿ ಅವರನ್ನು ಒಂದೇ ವೇದಿಕೆಯಲ್ಲಿ 51 ಸಂಘಟನೆಗಳು, ಸಂಘ, ಸಂಸ್ಥೆಗಳು ಅಭಿನಂದಿಸಿದ ಅಪರೂಪದ ಗಳಿಗೆಗೆ ನೂರಾರು ಮಂದಿ ಸಾಕ್ಷಿಯಾದರು.
ಕೊಡಗು ಪತ್ರಕರ್ತರ ಸಂಘದ ವತಿಯಿಂದ ಇಲ್ಲಿ ನಡೆದ ‘ಅಭಿವಂದನಾ ದೀಪ’ ಕಾರ್ಯಕ್ರಮದಲ್ಲಿ ಸಾಲು ಸಾಲಾಗಿ ನಿಂತು ಜನರು ಶಾಲು ಹೊದಿಸಿ, ಕಾಣಿಕೆ ನೀಡಿ ಅಭಿನಂದಿಸಿದರು.
ಮಡಿಕೇರಿ ನಗರಸಭೆ, ಮಡಿಕೇರಿ ವಕೀಲರ ಸಂಘ, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್, ಕೊಡಗು ಹೋಟೆಲ್ ರೆಸಾರ್ಟ್ ಅಸೋಸಿಯೇಷನ್, ಮಡಿಕೇರಿ ನಗರಾಭಿವೃದ್ದಿ ಪ್ರಾಧಿಕಾರ, ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ, ಕೊಡಗು ವಿದ್ಯಾಲಯ, ಬ್ರಾಹ್ಮಣ ವಿದ್ಯಾಭಿವೖದ್ದಿ ನಿಧಿ ಕೊಡಗು, ಕೊಡವ ಸಮಾಜ, ಮಡಿಕೇರಿ, ಗೌಡ ಸಮಾಜ ಮಡಿಕೇರಿ, ಕೊಡಗು ಗೌಡ ಸಮಾಜಗಳ ಒಕ್ಕೂಟ, ಮಡಿಕೇರಿ, ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್, ಕೊಡಗು ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್, ಜಿಲ್ಲಾ ಕಾಂಗ್ರೆಸ್ ಸಮಿತಿ, ಬಿಜೆಪಿ, ಜೆಡಿಎಸ್, ಪೊಮ್ಮಕ್ಕಡ ಕೂಟ ಮಡಿಕೇರಿ, ವಿರಾಜಪೇಟೆ, ಲಯನ್ಸ್ ಕ್ಲಬ್ ಮಡಿಕೇರಿ, ರೋಟರಿ ಮಡಿಕೇರಿ ಮಿಸ್ಟಿ ಹಿಲ್ಸ್, ರೋಟರಿ ಮಡಿಕೇರಿ ವುಡ್ಸ್, ಇನ್ನರ್ ವೀಲ್ ಮಡಿಕೇರಿ, ಭಾರತೀಯ ರೆಡ್ ಕ್ರಾಸ್, ಕೊಡಗು ಘಟಕ, ಮಹದೇವಪೇಟೆ ಮಹಿಳಾ ಸಹಕಾರ ಸಂಘ, ಕೊಡಗು ಜಿಲ್ಲಾ ಕುಲಾಲ ಸಮಾಜ, ಹಿಂದೂ ಮಲಯಾಳಿ ಸಂಘ,, ಕೊಡಗು ಬಿಲ್ಲವ ಸಮಾಜ, ಕೊಡಗು ಜಿಲ್ಲಾ ಬಂಟರ ಸಂಘ, ಕೊಡಗು ಜಿಲ್ಲಾ ಮೊಗೇರ ಸಮಾಜ, ಭಾರತೀಯ ಮೆಡಿಕಲ್ ಅಸೋಸಿಯೇಷನ್, ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘ, ಕೊಡಗು ದಲಿತ ಸಂಘರ್ಷ ಸಮಿತಿ, ಬ್ಯಾರಿ ವೆಲ್ಫೇರ್ ಟ್ರಸ್ಟ್, ಕೊಡಗು ಕ್ರೈಸ್ತರ ಸೇವಾ ಸಂಘ, ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್, ವೀರಶೈವ ಸಮಾಜ, ಕೊಡಗು ಜಿಲ್ಲಾ ಜಮಾತ್ ಎ ಇಸ್ಲಾಂ ಹಿಂದ್, ಗೌಡ ಮಹಿಳಾ ಒಕ್ಕೂಟ, ಚೇರಂಬಾಣೆ, ಸಮರ್ಥ ಕನ್ನಡಿಗರು ಸಂಸ್ಥೆ, ಕನ್ನಡ ಸಿರಿ ಸ್ನೇಹಬಳಗ, ಸಂಸ್ಕೃತಿ ಸಿರಿ ಬಳಗ ಟ್ರಸ್ಟ್, ಕೊಡಗು ಕನ್ನಡ ಭವನ ಮತ್ತು ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಕೊಡಗು ಮತ್ತು ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಮಹಿಳಾ ಒಕ್ಕೂಟದ ಪ್ರತಿನಿಧಿಗಳು ಸನ್ಮಾನಿಸಿದರು.
ಜಾನಪದ ಪರಿಷತ್ತಿನ ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷ ಹಾಗೂ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ.ಅನಿಲ್ ಮಾತನಾಡಿ, ‘ದೀಪಾ ಭಾಸ್ತಿ ಅವರಿಗೆ ಬೂಕರ್ ಪ್ರಶಸ್ತಿ ಬಂದಿದ್ದು, ಕನ್ನಡ ಸಾಹಿತ್ಯದ ಪಥ ಬದಲಾಗುವಂತಾಗಿದೆ. ವಿಶ್ವ ಮಟ್ಟದಲ್ಲಿ ಕತ್ತಲಲ್ಲಿದ್ದ ಕನ್ನಡ ಸಾಹಿತ್ಯವನ್ನು ಇದು ಬೆಳಕಿಗೆ ತಂದಿದೆ’ ಎಂದು ಶ್ಲಾಘಿಸಿದರು.
ಪ್ರತಿಭಾ ಮಧುಕರ್ ಅವರು ‘ಜಗವ ಬೆಳಗಲಿ ದೀಪಾ’ ಎಂದು ಪ್ರಾರ್ಥಿಸಿದರು. ಜಾನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮದ್ ಅವರು ಸಾಹಿತ್ಯಾತ್ಮಕವಾಗಿ ನಿರೂಪಣೆ ಮಾಡಿದರು. ಸಂಘದ ಸುರೇಶ್ ಬಿಳಿಗೇರಿ ವಂದಿಸಿದರು.
ಒಂದೇ ವೇದಿಕೆಯಲ್ಲಿ ಸೇರಿದ ರಾಜಕೀಯ ಪಕ್ಷಗಳು ಹಲವು ಸಂಘ, ಸಂಸ್ಥೆಗಳಿಂದ ಗೌರವ ಸಮರ್ಪಣೆ ಕಿಕ್ಕಿರಿದು ತುಂಬಿದ್ದ ಸಭಾಂಗಣ
ದೀಪಾ ಭಾಸ್ತಿ ಅವರು ಬೂಕರ್ ಪ್ರಶಸ್ತಿಯನ್ನು ಪಡೆದಿದ್ದು ಈ ನೆಲದ ಭಾಷೆ ಶ್ರೀಮಂತ ಸಂಸ್ಕೃತಿಗಳಿಗೆ ಜಾಗತಿಕ ಮನ್ನಣೆ ದೊರಕುವಂತಾಗಿದೆ.
-ಎಂ.ಪಿ.ಸುಜಾ ಕುಶಾಲಪ್ಪ ವಿಧಾನ ಪರಿಷತ್ ಸದಸ್ಯ.
ಕೊಡಗಿನ ಮಗಳು ದೀಪಾ ಭಾಸ್ತಿ ಅವರು ಅಂತರರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿಗೆ ಪಾತ್ರರಾಗಿರುವುದು ಸರ್ವ ಜನತೆಗೆ ಸಂಭ್ರಮವನ್ನು ಉಂಟು ಮಾಡಿದೆ
-ಕಲಾವತಿ ಮಡಿಕೇರಿ ನಗರಸಭಾ ಅಧ್ಯಕ್ಷೆ.
ನಡಿಕೇರಿಯಂಡ ಚಿಣ್ಣಪ್ಪ ಅವರ ‘ಪಟ್ಟೋಲೆ ಪಳಮೆ’ ಕೃತಿ ಕೊಡಗಿನ ಪ್ರತಿ ಮನೆ ಮನೆಗಳಲ್ಲಿ ಇರಬೇಕಾದ ಪುಸ್ತಕ. ದೀಪಾಭಾಸ್ತಿ ಅವರ‘ಹಾರ್ಟ್ ಲ್ಯಾಂಪ್’ ಸಹ ಎಲ್ಲರ ಮನೆಗಳಲ್ಲಿ ಇರಬೇಕು.
-ಅಜ್ಜಿನಿಕಂಡ ಮಹೇಶ್ ನಾಚಯ್ ಕರ್ನಾಟಕ ಕೊಡವ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ.
ಬೂಕರ್ ಪ್ರಶಸ್ತಿ ಎನ್ನುವುದು ಅನುವಾದ ಕೃತಿಗೆ ಇರುವ ವಿಶ್ವದ ಅತ್ಯುನ್ನತ ಪ್ರಶಸ್ತಿ. ಇದನ್ನು ಪಡೆಯುವ ಮೂಲಕ ದೀಪಾ ಭಾಸ್ತಿ ಅವರು ಕನ್ನಡ ಭಾಷಾ ಸಂಸ್ಕೃತಿಗೆ ವಿಶೇಷ ಗೌರವವನ್ನು ತಂದಿದ್ದಾರೆ
-ಸದಾನಂದ ಮಾವಾಜಿ ಕರ್ನಾಟಕ ಅರೆಭಾಷಾ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ.
ಜಿಲ್ಲೆಯ ಇತಿಹಾಸದಲ್ಲೆ ಐತಿಹಾಸಿಕ ಸಾಧನೆ; ಶಾಸಕ ‘ಭಾನು ಮುಷ್ತಾಕ್ ಅವರ ಕೃತಿಯನ್ನು ಇಂಗ್ಲೀಷ್‌ಗೆ ಅನುವಾದಿಸಿ ಬೂಕರ್ ಪ್ರಶಸ್ತಿಯನ್ನು ದೀಪಾ ಭಾಸ್ತಿ ಪಡೆದಿರುವುದು ಜಿಲ್ಲೆಯ ಇತಿಹಾಸದಲ್ಲೇ ಐತಿಹಾಸಿಕ ಸಾಧನೆ’ ಎಂದು ಶಾಸಕ ಡಾ.ಮಂತರ್‌ಗೌಡ ಬಣ್ಣಿಸಿದರು ‘ಪ್ರಸ್ತುತ ಡಿಜಿಟಲ್ ಮಾಧ್ಯಮ ಕಂಪ್ಯೂಟರ್‌ಗಳ ಆಳಕ್ಕೆ ಇಳಿದಿರುವ ನಮ್ಮ ತಿಳಿವಳಿಕೆಯನ್ನು ಅದರಿಂದ ಹೊರ ತಂದು ಪುಸ್ತಕಗಳನ್ನು ಓದುವ ಸಾಹಿತ್ಯದೆಡೆಗೆ ಆಸಕ್ತಿಯನ್ನು ಹೊಂದುವ ಮನಸ್ಥಿತಿಯನ್ನು ದೀಪಾ ಭಾಸ್ತಿ ಅವರು ತಮ್ಮ ಅನುವಾದ ಕೃತಿಯ ಮೂಲಕ ಮಾಡಿದ್ದಾರೆ’ ಎಂದೂ ಅವರು ಹೇಳಿದರು.
ಅನುವಾದ ಇಲ್ಲದಿದ್ದರೆ ವಿಶ್ವದ ಜ್ಞಾನ ಬರಡು; ದೀಪಾ ಭಾಸ್ತಿ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ದೀಪಾ ಭಾಸ್ತಿ ‘ಅನುವಾದ ಇಲ್ಲದಿದ್ದರೆ ವಿಶ್ವದ ಜ್ಞಾನವೇ ಬರಡು. ಅನುವಾದಕರನ್ನು ಅಸಡ್ಡೆಯಿಂದ ಕಾಣುವ ಮನಸ್ಥಿತಿಯನ್ನು ಹೊರಬಂದು ಅನುವಾದಕರನ್ನು ಪ್ರೋತ್ಸಾಹಿಸುವ ಅಗತ್ಯತೆ ಇದೆ’ ಎಂದು ಪ್ರತಿಪಾದಿಸಿದರು. ಅನುವಾದವೆಂದರೆ ಅದೊಂದು ದೊಡ್ಡ ವಿಷಯವಲ್ಲ ಎನ್ನುವ ಮನಸ್ಥಿತಿಯಿಂದ ಹೊರ ಬರಬೇಕಾಗಿದೆ. ಅನುವಾದವೆನ್ನುವುದು ಒಂದು ಪದವನ್ನು ಮತ್ತೊಂದು ಭಾಷೆಯ ಪದಕ್ಕೆ ತರ್ಜುಮೆ ಮಾಡುವುದಲ್ಲ. ಪದ ಪದಗಳ ತರ್ಜುಮೆ ಎಂದಿಗೂ ಒಳ್ಳೆಯ ಅನುವಾದವಾಗಲಾರದು ಎಂದು ಹೇಳಿದರು. ‘ನಾನು ಇದೀಗ ಅನುವಾದಕ್ಕೆ ಕೈಗೆತ್ತಿಕೊಂಡಿರುವ ಶಿವಮೊಗ್ಗದ ಸಾಹಿತಿ ಸಮುದ್ಯತಾ ಅವರ ‘ಇದೇ ಅಂದರೆ ಇದೆ ಇಲ್ಲ ಅಂದರೆ ಇಲ್ಲ’ ಎನ್ನುವ ಕೃತಿಯಲ್ಲಿ ಬರುವ ಕನ್ನಡದ ಸುಂದರ ಪದ ‘ಗೋಧೂಳಿ’ ಎನ್ನುವುದಕ್ಕೆ ಇಂಗ್ಲೀಷ್‌ನಲ್ಲಿ ಸೂಕ್ತ ಪದ ದೊರಕಿಲ್ಲ. ಇದಕ್ಕೆ ಸರಿಸಮಾನವಾದ ಪದ ಇದ್ದರೆ ತಿಳಿಸಿ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.