ADVERTISEMENT

ಕ್ರೀಡಾಶಾಲೆಯಲ್ಲಿ ಹ್ಯಾಮರ್ ಥ್ರೋ ಕಾಗೋ

ಕೂಡಿಗೆ: ₹ 5 ಲಕ್ಷ ವೆಚ್ಚದಲ್ಲಿ ನಿರ್ಮಾಣ, ಕ್ರೀಡಾಪಟುಗಳಿಗೆ ಅನುಕೂಲ

ರಘು ಹೆಬ್ಬಾಲೆ
Published 18 ಜನವರಿ 2018, 10:57 IST
Last Updated 18 ಜನವರಿ 2018, 10:57 IST
ಕ್ರೀಡಾಶಾಲೆಯ ಹ್ಯಾಮರ್ ಥ್ರೋ ಕಾಗೋ
ಕ್ರೀಡಾಶಾಲೆಯ ಹ್ಯಾಮರ್ ಥ್ರೋ ಕಾಗೋ   

ಕುಶಾಲನಗರ: ರಾಜ್ಯದಲ್ಲಿಯೇ ಪ್ರಥಮವಾಗಿ ಕೊಡಗಿನ ಕೂಡಿಗೆಯಲ್ಲಿ ಆರಂಭವಾದ ಕ್ರೀಡಾ ವಸತಿ ಶಾಲೆಯಲ್ಲಿ ಇದೀಗ ಜಿಲ್ಲೆಯ ಮೊದಲ ಹ್ಯಾಮರ್ ಥ್ರೋ ಕಾಗೋ (ಸುತ್ತಿಗೆ ಪಂಜರ) ನಿರ್ಮಾಣವಾಗಿದೆ.

2016–17ನೇ ಸಾಲಿನಲ್ಲಿನಲ್ಲಿ ಹ್ಯಾಮರ್ ಥ್ರೋ ಕಾಗೋವನ್ನು ₹ 5 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಈ ಕ್ರೀಡಾಶಾಲೆ ಮಾದರಿ ಶಾಲೆಯಾಗಿ ರೂಪುಗೊಂಡಿದೆ.

ಕಳೆದ ವರ್ಷದಿಂದ ಆರಂಭಿಸಿರುವ ಹ್ಯಾಮರ್ ಥ್ರೋ ಕ್ರೀಡಾ ಚಟುವಟಿಕೆಯಲ್ಲಿ ಶಾಲೆ ಮೂವರು ಕ್ರೀಡಾಪಟುಗಳು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಬ್ಬರು ಬಾಲಕಿಯರು ಹಾಗೂ ಒಬ್ಬ ಬಾಲಕ ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವ ಮೂಲಕ ಹೊಸ ಭಾಷ್ಯ ಬರೆಯಲು ಸಜ್ಜಾಗಿದ್ದಾರೆ.

ADVERTISEMENT

ಈ ಕ್ರೀಡಾಂಗಣ ಹ್ಯಾಮರ್ ಥ್ರೋ ಪಂದ್ಯಾವಳಿ ಸಂದರ್ಭ ಅಪಾಯವನ್ನು ತಪ್ಪಿಸುತ್ತದೆ. ಕ್ರೀಡಾಪಟು ಹ್ಯಾಮರ್ ಥ್ರೋ ಅನ್ನು ತಿರುಗಿಸುತ್ತಿರುವ ವೇಳೆಯಲ್ಲಿ ಕೈಜಾರಿದರೆ ಸರಪಳಿ ಚೆಂಡಅನ್ನು ಕಾಗೋ ತಡೆಯುತ್ತದೆ. ಇದರಿಂದ ವೀಕ್ಷಕರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಕ್ರೀಡಾ ತರಬೇತುದಾರ ಅಂಥೋಣಿ ಡಿಸೋಜ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿವಂಗರ ಆರ್. ಗೂಂಡುರಾವ್ ಅವರ ವಿಶೇಷ ಪ್ರಯತ್ನದಿಂದ 1982-83ನೇ ಸಾಲಿನಲ್ಲಿ ಆರಂಭವಾದ ಈ ಕ್ರೀಡಾಶಾಲೆಯು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರುವ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ.

ರಾಜ್ಯದಲ್ಲಿ 22 ಕ್ರೀಡಾ ಶಾಲೆಗಳಿದ್ದು ಈ ಪೈಕಿ ಕೂಡಿಗೆ ಕ್ರೀಡಾ
ಶಾಲೆಯು ಪ್ರತಿಷ್ಠಿತ ಸಂಸ್ಥೆಯಾಗಿ ರೂಪುಗೊಂಡಿದೆ. ಸರ್ಕಾರ ಸುಮಾರು ₹ 10 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಮೂಲ ಸೌಲಭ್ಯವನ್ನು ಒದಗಿಸಿದೆ.
ಪ್ರೌಢಶಾಲಾ ವಿಭಾಗವನ್ನು ಹೊಂದಿರುವ ಈ ಶಾಲೆಯಲ್ಲಿ 113 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಹಾಕಿ, ಅಥ್ಲೆಟಿಕ್ಸ್‌, ಜಿಮ್ನಾಸ್ಟಿಕ್‌, ಹಾಗೂ ಹ್ಯಾಮರ್ ಥ್ರೋ ಕ್ರೀಡೆಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ.

ಹಾಕಿಯಲ್ಲಿ 47 ಬಾಲಕರು, 21 ಬಾಲಕಿಯರು, ಅಥ್ಲೆಟಿಕ್ಸ್‌ನಲ್ಲಿ 16 ಬಾಲಕರು, 12 ಬಾಲಕಿಯರು, ಜಿಮ್ನಾಸ್ಟಿಕ್ಟ್‌ನಲ್ಲಿ 9 ಬಾಲಕರು, 11 ಬಾಲಕಿಯರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಬಹುತೇಕ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಹುಮಾನಗಳಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಕ್ರೀಡಾಶಾಲೆ ಸ್ಥಾಪನೆಯಗಿದೆ. ಆರ್.ಗುಂಡೂರಾವ್ ಅವರ ನೆನಪಿಗಾಗಿ ಒಳಾಂಗಣ ಕ್ರೀಡಾಂಗಣಕ್ಕೆ ಅವರ ಹೆಸರನ್ನೇ ಇಡಲಾಗಿದೆ.

ವಿವಿಧ ಜಿಲ್ಲೆಗಳ ಕ್ರೀಡಾಪಟುಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇಲ್ಲಿನ ಎಲ್ಲ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಹಾಕಿ ಕ್ರೀಡೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ತಂಡವನ್ನು ಪ್ರತಿನಿಧಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ ಎನ್ನುತ್ತಾರೆ ಶಿಕ್ಷಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.