ADVERTISEMENT

ಸಮಾಜದಲ್ಲಿ ಶಾಂತಿ, ಸಾಮರಸ್ಯ ನೆಲೆಸಲು ಸಹಕರಿಸಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2018, 10:10 IST
Last Updated 31 ಜನವರಿ 2018, 10:10 IST
ಸೋಮವಾರಪೇಟೆ ಪುಟ್ಟಪ್ಪ ವೃತ್ತದಲ್ಲಿ ಮಂಗಳವಾರ ‘ಸೌಹಾರ್ದ ಕರ್ನಾಟಕ- ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಧ್ಯೇಯವಾಕ್ಯದಡಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಾನವ ಸರಪಳಿ ರಚಿಸಲಾಯಿತು
ಸೋಮವಾರಪೇಟೆ ಪುಟ್ಟಪ್ಪ ವೃತ್ತದಲ್ಲಿ ಮಂಗಳವಾರ ‘ಸೌಹಾರ್ದ ಕರ್ನಾಟಕ- ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಧ್ಯೇಯವಾಕ್ಯದಡಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಾನವ ಸರಪಳಿ ರಚಿಸಲಾಯಿತು   

ಸೋಮವಾರಪೇಟೆ: ಕರ್ನಾಟಕ ಸೌಹಾರ್ದ ವೇದಿಕೆ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ‘ಸೌಹಾರ್ದ ಕರ್ನಾಟಕ- ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಧ್ಯೇಯವಾಕ್ಯದಡಿ ಸಮಾಜದ ಜಾಗೃತಿ ಮೂಡಿಸುವ ಉದ್ದೇಶದಿಂದ ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಲಾಯಿತು.

ವೇದಿಕೆಯ ತಾಲ್ಲೂಕು ಸಂಚಾಲಕ ಬಿ.ಈ. ಜಯೇಂದ್ರ ಮಾತನಾಡಿ, ಸಮಾಜದ ಎಲ್ಲಾ ಪ್ರಗತಿಪರ ಸಂಘಟನೆಗಳು ಒಟ್ಟಾಗಿ ಸೌಹಾರ್ದತೆಯ ರಾಜ್ಯ ನಿರ್ಮಾಣದ ಸಂಕಲ್ಪದೊಂದಿಗೆ ಮಾನವ ಸರಪಳಿ ರಚಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಸಮಾಜದಲ್ಲಿ ಅಶಾಂತಿ ತೊಲಗಿ ಶಾಂತಿ ಮತ್ತು ಸಾಮರಸ್ಯ ನೆಲೆಗೊಳಿಸುವ ಉದ್ದೇಶದಿಂದ ಮಹಾತ್ಮಾ ಗಾಂಧಿ ಅವರನ್ನು ನಾಥೂರಾಮ್ ಗೂಡ್ಸೆ ಹತ್ಯೆಗೈದ ದಿನವಾದ ಜ. 30ರಂದು ಸೌಹಾರ್ದ ಕರ್ನಾಟಕ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ADVERTISEMENT

ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ಡಿ.ಎಸ್. ನಿರ್ವಾಣಪ್ಪ ಮಾತನಾಡಿ, ರಾಜ್ಯ ಮತ್ತು ದೇಶದಲ್ಲಿ ಕೋಮುವಾದ ವಿಜೃಂಭಿಸುತ್ತಿದೆ. ಧರ್ಮಗಳ ನಡುವೆ ಘರ್ಷಣೆ ನಡೆಯುತ್ತಿದೆ. ಕೊಲ್ಲುವ ಸಂಸ್ಕೃತಿ ಹೆಚ್ಚಾಗಿದ್ದು, ಕರಾವಳಿ ಭಾಗವೇ ಇದಕ್ಕೆ ಸಾಕ್ಷಿ. ಇಂತಹ ಘಟನೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಕೋಮು ದಳ್ಳುರಿಗಳಿಂದ ಅಮಾಯಕರು, ದಲಿತರು, ದುಡಿಯುವ ವರ್ಗ ಬಲಿಯಾಗುತ್ತಿದೆ. ಸಮಾಜದಲ್ಲಿ ನಿರ್ಭೀತಿ ವಾತಾವರಣ ಇಲ್ಲದಂತಾಗಿದೆ. ಈ ಹಿನ್ನೆಲೆ ಸಮಾಜದಲ್ಲಿ ಜನರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಈ ಸಂದರ್ಭ ಪ.ಪಂ. ಸದಸ್ಯ ಕೆ.ಎ. ಆದಂ. ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ ಬ್ಲಾಕ್ ಅಧ್ಯಕ್ಷ ಬಿ.ಜಿ. ಇಂದ್ರೇಶ್, ಐಗೂರು ಗ್ರಾ.ಪಂ. ಸದಸ್ಯ ಕೆ.ಪಿ. ದಿನೇಶ್, ಪ್ರಮುಖರಾದ ಎಚ್.ಬಿ. ಜಯಮ್ಮ, ಶೀಲಾ ಡಿಸೋಜಾ, ಎಸ್.ಎಂ. ಡಿಸಿಲ್ವ, ಮಂಜುನಾಥ್ , ಜಯಪ್ಪ ಹಾನಗಲ್ಲು, ಎಚ್.ಎಂ. ಸೋಮಪ್ಪ, ಸುರೇಶ್‌ ಶೆಟ್ಟಿ, ರಫಿಕ್‌ ಪಾಲ್ಗೊಂಡಿದ್ದರು.

ಸಹಬಾಳ್ವೆಗೆ ಕಾಪಾಡಿ

ಕುಶಾಲನಗರ: ಶಾಂತಿ, ಸ್ನೇಹ, ಸೌಹಾರ್ದತೆ, ಸಹಬಾಳ್ವೆಗೆ ಬದ್ಧರಾಗಿ ಕೋಮು ಸಾಮರಸ್ಯವನ್ನು ನಾವು ಕಾಪಾಡುತ್ತೇವೆ ಎಂಬ ಧ್ಯೇಯದೊಂದಿಗೆ ಸೌಹಾರ್ದ ಕರ್ನಾಟಕ ವೇದಿಕೆ ವತಿಯಿಂದ ಪಟ್ಟಣದಲ್ಲಿ ಮಂಗಳವಾರ ಮಾನವ ಸರಪಳಿ ನಿರ್ಮಿಸಿದರು.

ಸೌಹಾರ್ದ ಕರ್ನಾಟಕ ವೇದಿಕೆ ಮುಖಂಡ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಹೋಬಳಿ ವಿವಿಧ ಸಂಘಟನೆಗಳ ಕಾರ್ಯಕರ್ತರು, ಜನಪ್ರತಿನಿಧಿಗಳು ಸೇರಿದಂತೆ ನೂರಾರು ಜನರು ಪಟ್ಟಣದ ಕಾರ್ಯಪ್ಪ ವೃತ್ತದಿಂದ ಟಿಎಂಸಿ ವೃತ್ತದವರೆಗೆ ಪರಸ್ಪರ ಕೈಹಿಡಿದು ಅರ್ಧತಾಸಿಗೂ ಹೆಚ್ಚು ಕಾಲ ಮಾನವ ಸರಪಳಿ ಸೌಹಾರ್ದ ಸಂದೇಶ ಸಾರಿದರು.

ವೇದಿಕೆ ಮುಖಂಡ ವಿ.ಪಿ.ಶಶಿಧರ್ ಮಾತನಾಡಿ, ಭಾರತೀಯ ಪ್ರಜೆಗಳಾದ ನಾವು ಸೌಹಾರ್ದತೆಗಾಗಿ ಮಾನವ ಸರಪಳಿಯನ್ನು ರಚಿಸುವ ಮೂಲಕ ಸಾವಿರಾರು ವರುಷಗಳ ಕರ್ನಾಟಕದ ಪರಂಪರೆಯನ್ನು ಸ್ಮರಿಸುತ್ತೇವೆ ಎಂದರು.

ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಧರ್ಮನಿರಪೇಕ್ಷತೆ, ಸಾಮಾಜಿಕ ನ್ಯಾಯ, ಜನತೆಯ ಸಾರ್ವಭೌಮತ್ವವನ್ನು ಹಾಗೂ ಉದಾತ್ತ ಮೌಲ್ಯಗಳನ್ನು ಹೊಂದಿರುವ ನಮ್ಮ ಸಂವಿಧಾನದ ಆಶಯಗಳನ್ನು ದೃಢವಾಗಿ ಪ್ರತಿಪಾದಿಸುತ್ತೇವೆ ಎಂದರು.

ಮುಖಂಡರಾದ ಎಂ.ಎಚ್.ನಜೀರ್ ಅಹಮ್ಮದ್, ರೇವರೆಂಟ್ ಫಾದರ್ ಜೋ, ವಕೀಲ ಆರ್.ಕೆ.ನಾಗೇಂದ್ರ ಬಾಬು, ಪ.ಪಂ ಸದಸ್ಯ ಪ್ರಮೋದ್, ಕರಿಯಪ್ಪ, ಮಾಜಿ ಸದಸ್ಯ ಖಾದರ್, ದಸಂಸ ಸಂಚಾಲಕ ಕೆ.ಬಿ.ರಾಜು, ನೆಲ್ಲಿಹುದಿಕೇರಿ ಪಿ.ಆರ್.ಭರತ್, ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಿ, ಕಂಬಿಬಾಣೆ ಗ್ರಾ.ಪಂ ಅಧ್ಯಕ್ಷ ಕೃಷ್ಣ, ಜೋಸೆಫ್ ವಿಕ್ಟರ್ ಸೋನ್ಸ್, ಅಬ್ಬಾಸ್, ಕಾವಲು ಪಡೆ ಕೃಷ್ಣ ಮತ್ತಿತರರು ಇದ್ದರು.

ಶಾಂತಿ ಸಂದೇಶ ಸಾರಿದರು...

ವಿರಾಜಪೇಟೆ: ನಾಡಿನ ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಗಾಗಿ ಪಟ್ಟಣದ ಗಡಿಯಾರ ಕಂಬದ ಬಳಿ ಮಂಗಳವಾರ ಜಾತ್ಯತೀತ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಮಾನವ ಸರಪಳಿ ರಚಿಸಿ ಶಾಂತಿಯ ಸಂದೇಶವನ್ನು ಸಾರಲಾಯಿತು.

ಮಹಾತ್ಮ ಗಾಂಧೀಜಿ ಹುತಾತ್ಮರಾದ ದಿನವಾದ ಇಂದು ನಾಡಿನ ಸೌಹಾರ್ದತೆ ಹಾಗೂ ಶಾಂತಿಯನ್ನು ಉಳಿಸಿಕೊಳ್ಳುವ ಅಂಗವಾಗಿ ಮಾನವ ಸರಪಳಿ ರಚಿಸಿ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು.

ಗಡಿಯಾರ ಕಂಬದಿಂದ ಬದ್ರಿಯಾ ಜಂಕ್ಷನ್‌ವರೆಗೆ ಮಾನವ ಸರಪಳಿ ರಚಿಸಲಾಯಿತು. ಈ ಸಂದರ್ಭ ಸಂಘಟನೆಯ ತಾಲ್ಲೂಕು ಸಂಚಾಲಕ ಎಂ. ಸಂಕೇತ್‌ ಪೂವಯ್ಯ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದರು.

ತಾಲ್ಲೂಕು ಸಂಚಾಲಕರಾದ ಕೇಶವ ಕಾಮತ್‌, ಮತ್ತೀನ್‌, ಜಿಲ್ಲಾ ಸಮಿತಿಯ ಅಬ್ದುಲ್‌ ರೆಹಮಾನ್‌, ಸಾಬು, ಕಾರ್ಮಿಕ ಮುಖಂಡ ಕುಟ್ಟನ್‌, ಮಹಾದೇವ್‌ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.