ADVERTISEMENT

ಮತ್ತೆ 6 ಸಂಚಾರಿ ತಾರಾಲಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 9:48 IST
Last Updated 19 ಫೆಬ್ರುವರಿ 2018, 9:48 IST

ಮಡಿಕೇರಿ: ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ‘ಸಂಚಾರಿ ಡಿಜಿಟಲ್ ತಾರಾಲಯ’ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಭಾನುವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಖಗೋಳ ಶಾಸ್ತ್ರ ಹಾಗೂ ವಿಜ್ಞಾನದ ಕುರಿತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಅಗತ್ಯವಾಗಿದೆ. ಆ ದಿಸೆಯಲ್ಲಿ ಪ್ರೌಢ ಶಾಲಾ ಪಠ್ಯ ಕ್ರಮದ ಅನುಸಾರವಾಗಿ ಸಂಚಾರಿ ತಾರಾಲಯದಲ್ಲಿ ಪ್ರಯೋಗ ಪ್ರದರ್ಶನ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

‘ಶಾಲಾ ಆವರಣಕ್ಕೆ ತಾರಾಲಯ’ ಎಂಬ ಘೋಷಣೆಯೊಂದಿಗೆ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೆ ಸಂಚರಿಸುತ್ತಿರುವ ವಾಹನ ಕೊಡಗು ಜಿಲ್ಲೆಯ ಕೆಲವು ಸರ್ಕಾರಿ ಪ್ರೌಢ ಶಾಲೆಗಳಿಗೆ ಭೇಟಿ ನೀಡಲಿದೆ. ಎಲ್ಲ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸೀತಾರಾಂ ಮನವಿ ಮಾಡಿದರು.

ADVERTISEMENT

ಕಳೆದ ಆಗಸ್ಟ್ ತಿಂಗಳಲ್ಲಿ ₹ 6 ಕೋಟಿ ವೆಚ್ಚದಲ್ಲಿ 5 ಸಂಚಾರಿ ವಾಹನಗಳನ್ನು ಖರೀದಿಸಲಾಗಿತ್ತು. ಇದರಿಂದ 1 ಲಕ್ಷ 50 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಯ ಮಕ್ಕಳು ವೀಕ್ಷಿಸಲು ನೆರವಾಯಿತು. ಈ ಬಾರಿಯ ಬಜೆಟ್‌ನಲ್ಲಿ ಮತ್ತೆ ರಾಜ್ಯ ಸರ್ಕಾರ 6 ನೂತನ ಸಂಚಾರಿ ತಾರಾಲಯಗಳನ್ನು ಖರೀದಿಸಲು ಮುಂದಾಗಿದ್ದು, ಇದರಿಂದ ಮುಂದಿನ 1 ವರ್ಷದಲ್ಲಿ ರಾಜ್ಯದಲ್ಲಿ 5 ಲಕ್ಷಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಸಚಿವ ಸೀತಾರಾಂ ತಿಳಿಸಿದರು. ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಪಿ.ಐ. ಶ್ರೀ ವಿದ್ಯಾ, ಎಸ್‌.ಪಿ ರಾಜೇಂದ್ರ ಪ್ರಸಾದ್‌ ಹಾಜರಿದ್ದರು.

ವಿದ್ಯಾರ್ಥಿಗಳ ಗಮನ ಸೆಳೆದ ತಾರಾಲಯ: ದೊಡ್ಡದಾದ ಕಪ್ಪು ಬಣ್ಣದ ಬಲೂನ್‌ ದೂರದಿಂದ ನೋಡಿದಾಕ್ಷಣ ಏನಿರಬಹುದು ಎಂದು ಕುತೂಹಲದಿಂದ ವೀಕ್ಷಿಸಿದ ವಿದ್ಯಾರ್ಥಿಗಳು ತಾರಾಲೋಕವೇ ಸೃಷ್ಟಿಯಾದ ಅನುಭವಗಳನ್ನು ಒಬ್ಬರಿಗೊಬ್ಬರು ಹಂಚಿಕೊಂಡರು.

ಭೂಗೋಳಶಾಸ್ತ್ರದಲ್ಲಿ ಸೂರ್ಯ, ಚಂದ್ರ, ಗ್ರಹಣ, ಹಗಲು, ರಾತ್ರಿ, ರಾಕೆಟ್‌ ಲಾಂಚ್‌, ಋುತುಗಳ ಬದಲಾವಣೆ ಹೀಗೆ ವಿವಿಧ ಬಗೆಯ ತಂತ್ರಜ್ಞಾನಗಳ ಕುರಿತು 20 ನಿಮಿಷ ಪ್ರಯೋಗ ಪ್ರದರ್ಶನವನ್ನು ಸಚಿವ ಸೀತಾರಾಂ ಅವರೊಂದಿಗೆ ತಾರಾಲಯದಲ್ಲಿ ವೀಕ್ಷಿಸಿ ವಿದ್ಯಾರ್ಥಿಗಳು ಸಂಭ್ರಮಿಸಿದರು. ಇನ್ನೆರಡೂ ದಿನ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪ್ರದರ್ಶನ ನಡೆಯಲಿದೆ.

ತಿಂಗಳ ಅಂತ್ಯದೊಳಗೆ ಬಸ್‌ ನಿಲ್ದಾಣ ಕಾಮಗಾರಿ ಪೂರ್ಣ

ನಗರದ ಖಾಸಗಿ ಬಸ್‌ ನಿಲ್ದಾಣ ಕಾಮಗಾರಿಯನ್ನು ಫೆಬ್ರುವರಿ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಜಿಲ್ಲಾ ಉಸ್ತುವರಿ ಸಚಿವ ಸೀತಾರಾಂ ಸೂಚಿಸಿದರು.

ಖಾಸಗಿ ಬಸ್ ನಿಲ್ದಾಣಕ್ಕೆ ಭಾನುವಾರ ಭೇಟಿ ನೀಡಿದ ಅವರು,  ಫೆ.25ರ ವೇಳೆಗೆ ಮತ್ತೆ ಪರಿಶೀಲನೆಗೆ ಬರುವುದಾಗಿ ಗುತ್ತಿಗೆದಾರ ನಾಗರಾಜುಗೆ ತಿಳಿಸಿದರು. ಇಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಫೆ. 28 ರಂದು ಚಾಲನೆ ನೀಡಲಾಗುವುದು ಎಂದು ಸೀತಾರಾಂ ತಿಳಿಸಿದರು. ಜಿಲ್ಲಾಧಿಕಾರಿ ಶ್ರೀವಿದ್ಯಾ, ಪೌರಾಯುಕ್ತೆ ಬಿ.ಶುಭಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.