ಪ್ರಜಾವಾಣಿ ವಾರ್ತೆ
ಮಡಿಕೇರಿ: ಬಾಲಕಿಗೆ ಜನಿಸಿದ ನವಜಾತ ಶಿಶುವನ್ನು ನಾಪತ್ತೆ ಮಾಡಿದ ಆರೋಪದ ಮೇರೆಗೆ ಜಿಲ್ಲೆಯ ಠಾಣೆಯೊಂದರಲ್ಲಿ ತಂದೆ– ತಾಯಿಯ ವಿರುದ್ಧ ಪ್ರಕರಣ ದಾಖಲಾಗಿದೆ.
‘15 ವರ್ಷದ ಬಾಲಕಿಯು ಗರ್ಭಿಣಿಯಾದ ವಿಷಯ ಬೆಳಕಿಗೆ ಬಂದ ಬಳಿಕ, 14 ವರ್ಷದ ಬಾಲಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಬಾಲಕಿ ಪೋಷಕರೊಂದಿಗೇ ಇದ್ದಳು. ಮಕ್ಕಳ ಕಲ್ಯಾಣ ಘಟಕಾಧಿಕಾರಿಗಳು ತಾಯಿಕಾರ್ಡ್ ಕೊಡಿಸಿದ್ದರು. ಪ್ರತಿ ತಿಂಗಳೂ ಆರೋಗ್ಯ ಕಾರ್ಯಕರ್ತೆಯರು ಬಾಲಕಿಗೆ ಔಷಧ ನೀಡುತ್ತಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ನಿರೀಕ್ಷಿತ ಹೆರಿಗೆ ದಿನ ಶೂಶ್ರೂಷಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆಗೆ ತೆರಳಿದಾಗ ಬಾಲಕಿಗೆ 2 ದಿನಗಳ ಹಿಂದೆಯೇ ಹೆರಿಗೆಯಾಗಿತ್ತು ಎಂಬ ಸಂಗತಿ ಬೆಳಕಿಗೆ ಬಂತು. ಆದರೆ, ಬಾಲಕಿಯ ತಾಯಿ ಮಾತ್ರ ಮಗಳು ಗರ್ಭಿಣಿಯಾಗಿಲ್ಲ ಎಂದು ಹೇಳಿ, ಶಿಶುವಿನ ಕುರಿತು ಮಾಹಿತಿ ನೀಡಲಿಲ್ಲ’ ಎಂದು ಹೇಳಿದ್ದಾರೆ.
‘ಬಾಲಕಿಯ ಸ್ಥಿತಿ ಗಂಭೀರವಾಗಿದ್ದುದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಶುವಿನ ಬಗ್ಗೆ ಮಾಹಿತಿ ನೀಡದ ಸಂಬಂಧ ಪೋಷಕರ ವಿರುದ್ಧ ಬಿಎನ್‌ಎಸ್ 94ರ ಅಡಿ ಪ್ರಕರಣ ದಾಖಲಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.