ADVERTISEMENT

ಕುಶಾಲನಗರ: ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 6:19 IST
Last Updated 3 ಜುಲೈ 2025, 6:19 IST
ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾಮದ ಯೋಧ ಹಾನರಿ ಲೆಫ್ಟಿನೆಂಟ್ ಎಚ್.ಎಸ್. ಕೃಷ್ಣಪ್ಪ ಹಾಗೂ ಕುಟುಂಬವನ್ನು ಗ್ರಾಮಸ್ಥರು ಸನ್ಮಾನಿಸಿದರು
ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾಮದ ಯೋಧ ಹಾನರಿ ಲೆಫ್ಟಿನೆಂಟ್ ಎಚ್.ಎಸ್. ಕೃಷ್ಣಪ್ಪ ಹಾಗೂ ಕುಟುಂಬವನ್ನು ಗ್ರಾಮಸ್ಥರು ಸನ್ಮಾನಿಸಿದರು   

ಕುಶಾಲನಗರ: ಭಾರತೀಯ ಸೇನೆಯ ಮದ್ರಾಸ್ ರೆಜಿಮೆಂಟ್‌ನಲ್ಲಿ 30 ವರ್ಷ ಸೇವೆ ಸಲ್ಲಿಸಿ ಜೂನ್‌ 30ರಂದು ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧ ಹಾನರಿ ಲೆಫ್ಟಿನೆಂಟ್ ಎಚ್.ಎಸ್.ಕೃಷ್ಣಪ್ಪ ಅವರಿಗೆ ಹೆಬ್ಬಾಲೆ ಗ್ರಾಮದಲ್ಲಿ ಬುಧವಾರ ಭವ್ಯ ಸ್ವಾಗತ ಕೋರಲಾಯಿತು.

ಗ್ರಾಮದ ಸಿದ್ದಪ್ಪ ಹಾಗೂ ದಿ.ಪುಟ್ಟಗೌರಮ್ಮ ದಂಪತಿಯ ಕಿರಿಯ ಪುತ್ರರಾಗಿರುವ ಕೃಷ್ಣಪ್ಪ ಹಾಗೂ ಕುಟುಂಬಸ್ಥರಿಗೆ ಗ್ರಾಮಸ್ಥರು, ಕೃಷ್ಣಪ್ಪ ಗೆಳೆಯರ ಬಳಗ ಶಾಲಾ ಮಕ್ಕಳು ಹಾಗೂ ಅಭಿಮಾನಿಗಳು ಪುಷ್ಪಮಳೆಗೆರೆದರು. ನೆನಪಿನ ಕಾಣಿಕೆ ನೀಡುವ‌ ಮೂಲಕ ಗೌರವಿಸಿದರು.

ಬೃಹತ್ ಹೂವಿನ ಹಾರಗಳನ್ನು ಹಾಕಿ ಗೌರವ ಸಲ್ಲಿಸಿದರು. ಇದೇ ವೇಳೆ ಯೋಧ ಹಾಗೂ ದೇಶದ ಪರವಾಗಿ ಘೋಷಣೆ ಕೂಗುವ ಮೂಲಕ‌ ಯುವಕರು ದೇಶಾಭಿಮಾನ ಪ್ರದರ್ಶಿಸಿದರು. ಹೆಬ್ಬಾಲೆ ಸರ್ಕಲ್‌ನಲ್ಲಿ ಪಟಾಕಿ ಸಿಡಿಸಿ ನೆರೆದಿದ್ದ ಸಾರ್ವಜನಿಕರಿಗೆ, ಮಕ್ಕಳಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.

ADVERTISEMENT

ಅಲಂಕೃತ ವಾಹನದಲ್ಲಿ ಮೆರವಣಿಗೆ: ಕೃಷ್ಣಪ್ಪ ಹಾಗೂ ದಂಪತಿಯನ್ನು ಗ್ರಾಮದ ಮುಖ್ಯ ಸರ್ಕಲ್‌ನಿಂದ ಊರಿನ ಪ್ರಮುಖ ಬೀದಿಗಳಲ್ಲಿ ಅಲಂಕೃತ ವಾಹನದಲ್ಲಿ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯುದ್ದಕ್ಕೂ ಅಭಿಮಾನಿಗಳು ಜಯಘೋಷ ಹಾಕಿದರು. ಮನೆಗೆ‌ ಆಗಮಿಸಿದ ಯೋಧರ ಕುಟುಂಬವನ್ನು ಸಂಬಂಧಿಕರು ಮಂಗಳಾರತಿ ಮಾಡಿ ಬರಮಾಡಿಕೊಂಡರು.

ಶಾಲಾ ಮಕ್ಕಳಿಗೆ ಟೀಶರ್ಟ್ ವಿತರಣೆ: ಹೆಬ್ಬಾಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ‌ ಮಕ್ಕಳಿಗೆ ಕೃಷ್ಣಪ್ಪ ಹಾಗೂ ಪೂರ್ಣಿಮಾ ಕೃಷ್ಣಪ್ಪ ಅವರು ಎಲ್ಲಾ ಮಕ್ಕಳಿಗೂ ಉಚಿತ ಟೀ ಶರ್ಟ್ ವಿತರಿಸಿದರು.

ವಿದ್ಯಾಭ್ಯಾಸ ಮಾಡಿದ ಪ್ರಾಥಮಿಕ ಶಾಲೆಗೆ ಕೃಷ್ಣಪ್ಪ ಭೇಟಿ ನೀಡಿದರು. ವಿದ್ಯಾರ್ಥಿಗಳು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಗುರುಗಳಾದ ಎಚ್.ಎನ್.ನಾಗಾಚಾರಿ ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎಚ್.ಎಂ. ವೆಂಕಟೇಶ್ ಅವರನ್ನು ಗೌರವಿಸಿದರು. ಶಾಲಾ ಆವರಣದಲ್ಲಿ ಗಿಡನೆಟ್ಟು ನೀರು ಹಾಕುವ ಮೂಲಕ ಕೃಷ್ಣಪ್ಪ ಪರಿಸರ ಕಾಳಜಿ ಪ್ರದರ್ಶಿಸಿದರು.

ಯೋಧ ಕೃಷ್ಣಪ್ಪ ಅಭಿಮಾನಿ ಬಳಗದ ಎಚ್.ಎಲ್. ರಮೇಶ್, ಎಚ್.ಆರ್.ಶ್ರೀನಿವಾಸ್, ಲೋಕೇಶ್, ಮಹಾದೇಶ, ಕಾಸರಗೋಡು ಬೀದಿ ರಮೇಶ್, ವಿಶ್ವನಾಥ್, ರಘು,ಯೋಗೇಶ್ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.