ADVERTISEMENT

ಕೊಡಗು | ವಿಶೇಷ ಮಕ್ಕಳ 'ಆಶಾಕಿರಣ' ಶಿಕ್ಷಕಿ ಗಂಗಾ ಚಂಗಪ್ಪ

ಸ್ವತಂತ್ರ ಬದುಕಿಗೆ ತರಬೇತಿ, ಕೇರಳದಲ್ಲೂ ಸೇವೆ

ಜೆ.ಸೋಮಣ್ಣ
Published 8 ಮಾರ್ಚ್ 2025, 9:11 IST
Last Updated 8 ಮಾರ್ಚ್ 2025, 9:11 IST
<div class="paragraphs"><p>ಗಂಗಾ ಚೆಂಗಪ್ಪ</p></div>

ಗಂಗಾ ಚೆಂಗಪ್ಪ

   

ಗೋಣಿಕೊಪ್ಪಲು: ಅಂಗವೈಕಲ್ಯ ಮತ್ತು ಬುದ್ಧಿಮಾಂದ್ಯ ಮಕ್ಕಳ ಪಾಲಿನ ನಿಜತಾಯಿ, ಶಿಕ್ಷಕಿ ಕಾಕಮಾಡ ಗಂಗಾ ಚಂಗಪ್ಪ.

ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪದಲ್ಲಿರುವ ಟಾಟಾಕಾಫಿ ಕಂಪನಿಯ ಬುದ್ಧಿಮಾಂದ್ಯ ಮಕ್ಕಳ ‘ಸ್ವಸ್ಥ’ ಶಾಲೆಯ ಮುಖ್ಯಸ್ಥೆ. 70ರ ಇಳಿವಯಸ್ಸಿನಲ್ಲೂ ಅವರು ಉತ್ಸಾಹದ ಚಿಲುಮೆ. ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಶಾಲೆಯಲ್ಲಿ 125 ಮಕ್ಕಳಿದ್ದಾರೆ.

ADVERTISEMENT

ಪೋಷಕರ ಮಮತೆಯಿಂದ ವಂಚಿತರಾಗಿರುವ ಬುದ್ಧಿಮಾಂದ್ಯ ಮಕ್ಕಳು ಇಲ್ಲಿ ಬೆಳೆದು ಸ್ವತಂತ್ರ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಕೆಲವರು ಅದೇ ಶಾಲೆಯಲ್ಲಿಯೇ ದುಡಿದು ಕುಟುಂಬವನ್ನು ಮುನ್ನಡೆಸುತ್ತಿದ್ದಾರೆ. ಮತ್ತೆ ಕೆಲವರು, ಟಾಟಾ ಕಾಫಿ ಕಂಪನಿಗೆ ಪೇಪರ್ ಕವರ್, ಬ್ಯಾಗ್, ಸ್ಕ್ರೀನ್ ಪ್ರಿಂಟಿಂಗ್, ಕರಕುಶಲ ವಸ್ತುಗಳನ್ನೂ ಪೂರೈಸುತ್ತಿದ್ದಾರೆ.

ಪೊನ್ನಂಪೇಟೆ ತಾಲ್ಲೂಕಿನ ಬಿರುನಾಣಿಯ ಗಂಗಾ, ಮೈಸೂರಿನ ಮಾನಸಗಂಗೋತ್ರಿಯಲ್ಲಿ ಇಂಗ್ಲಿಷ್‌ ಎಂ.ಎ ಪದವಿ ಪಡೆದಿದ್ದಾರೆ. ಕೇರಳದ ಕಣ್ಣನ್ ಟೀ ಎಸ್ಟೇಟ್‌ನಲ್ಲಿ ಪ್ರಧಾನ ವ್ಯವಸ್ಥಾಪಕರಾಗಿದ್ದ ಚಂಗಪ್ಪ ಅವರನ್ನು ಮದುವೆಯಾಗಿದ್ದು ಅವರ ಸೇವಾ ಬದುಕಿಗೆ ಉತ್ತಮ ತಿರುವನ್ನು ನೀಡಿತು.

ಅವರ ಇಂಗ್ಲಿಷ್‌ ‌ಜ್ಞಾನವನ್ನು ಕಂಡ ಟಾಟಾ ಕಾಫಿ ಸಂಸ್ಥೆಯು, ತನ್ನ ಸಮಾಜ ಸೇವೆಯ ಭಾಗವಾಗಿ
ಬುದ್ಧಿಮಾಂದ್ಯ ಶಾಲೆ ತೆರೆಯುವ ಉದ್ದೇಶದಿಂದ ಕೋಲ್ಕತ್ತಾದಲ್ಲಿ ತರಬೇತಿ ಕೊಡಿಸಿತ್ತು. ಬಳಿಕ ಅವರು, ಮುನ್ನಾರ್‌ನಲ್ಲಿ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಮುಖ್ಯಸ್ಥೆಯಾಗಿದ್ದರು. ಅವರ ಉಸ್ತುವಾರಿಯಲ್ಲಿ 7 ಬುದ್ದಿಮಾಂದ್ಯ ಶಾಲೆಗಳು ಕಾರ್ಯನಿರ್ವಹಿಸಿವೆ.

ಚಂಗಪ್ಪ ಸ್ವಯಂ ನಿವೃತ್ತಿ ಪಡೆದು ಕೊಡಗಿಗೆ ಬಂದ ಬಳಿಕ, ಗಂಗಾ ಅವರನ್ನು ಮತ್ತೆ ಸಂಸ್ಥೆಯು ಸುಂಟಿಕೊಪ್ಪದಲ್ಲಿ ಸ್ವಸ್ಥ ಶಾಲೆ ತೆರೆಯುವಂತೆ ಪ್ರೇರೇಪಿಸಿತ್ತು. ಪ್ರಿತಿಯಿಂದ ಒಪ್ಪಿಕೊಂಡ ಅವರು 2003ರಲ್ಲಿ ಶಾಲೆ ತೆರೆದರು. ಅಂದಿನಿಂದ ಅವರು ನೂರಾರು ಮಕ್ಕಳಿಗೆ ಆಸರೆಯಾಗಿದ್ದಾರೆ.

ಈ ಸೇವೆಗಾಗಿಯೇ 2014ರಲ್ಲಿ ಅವರಿಗೆ ರಾಷ್ಟ್ರಪತಿ ಪ್ರಶಸ್ತಿ ದೊರಕಿತ್ತು. ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿದೆ. ವಾರ್ತಾ ಇಲಾಖೆಯು ಅವರ ಕುರಿತು ಸಾಕ್ಷ್ಯ ಚಿತ್ರವನ್ನೂ ನಿರ್ಮಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.