ADVERTISEMENT

ಫುಟ್‌ಬಾಲ್‌ ಸುಗ್ಗಿಗೆ ಅಣಿಯಾದ ವೇದಿಕೆ

ಸುಂಟಿಕೊಪ್ಪದಲ್ಲಿ ಇಂದಿನಿಂದ ಮೇ 25ರವರೆಗೆ ಡಿ.ಶಿವಪ್ಪ ಸ್ಮರಣಾರ್ಥ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 16 ಮೇ 2025, 6:17 IST
Last Updated 16 ಮೇ 2025, 6:17 IST
ಫುಟ್‌ಬಾಲ್ ಟೂರ್ನಿಗಾಗಿ ಮೈದಾನ ಸಜ್ಜುಗೊಂಡಿರುವುದು
ಫುಟ್‌ಬಾಲ್ ಟೂರ್ನಿಗಾಗಿ ಮೈದಾನ ಸಜ್ಜುಗೊಂಡಿರುವುದು   

ಸುಂಟಿಕೊಪ್ಪ: ಇಲ್ಲಿನ ಬ್ಲೂ ಬಾಯ್ಸ್ ಯುವಕ ಸಂಘದ ವತಿಯಿಂದ ಜಿಎಂಪಿ ಶಾಲಾ ಮೈದಾನದಲ್ಲಿ ಮೇ 16ರಿಂದ 25ರವರೆಗೆ ನಡೆಯಲಿರುವ 26ನೇ ವರ್ಷದ ಡಿ.ಶಿವಪ್ಪ ಸ್ಮರಣಾರ್ಥ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿಗೆ ಅಂತಿಮ ಸಿದ್ಧತೆ ಪೂರ್ಣಗೊಂಡಿದೆ.

ಈ ವರ್ಷ ಈ ಗೋಲ್ಡ್ ಕಪ್‌ಗೆ 26ರ ಸಂಭ್ರಮ. ತಮಿಳುನಾಡು, ಕೊಚ್ಚಿನ್, ಕೇರಳ, ಉಪ್ಪಳ, ಮಂಗಳೂರು, ಕುಂಬ್ಳೆ, ಮೈಸೂರು, ದಾವಣಗೆರೆ, ಬೆಂಗಳೂರು, ಊಟಿ ಸೇರಿದಂತೆ ಕೊಡಗಿನ ತಂಡಗಳು ಈ ಬಾರಿ ಗೋಲ್ಡ್ ಕಪ್‌ಗಾಗಿ ಸೆಣಸಾಡಲಿವೆ.

‘ಕೊಡಗಿನ ಫುಟ್‌ಬಾಲ್ ತವರು’ ಎಂದೇ ಹೆಸರಾಗಿರುವುದು ಸುಂಟಿಕೊಪ್ಪದಲ್ಲಿ ಫುಟ್‌ಬಾಲ್‌ ಅನ್ನು ಸುಂಟಿಕೊಪ್ಪ ಕ್ರೀಡಾಪಟುಗಳಿಗೆ ಪರಿಚಯಿಸಿದ್ದೆ ರಿಕ್ವೆಶನ್ ಕ್ಲಬ್. ಮುಂದೆ ಕೊಡಗು ಸೇರಿದಂತೆ ಹೊರ ರಾಜ್ಯಕ್ಕೂ ಪರಿಚಯವಾದ ಕ್ಲಬ್ ಯುವ ಪಡೆಯನ್ನು ಹುಟ್ಟು ಹಾಕಿತು. ಬಳಿಕ, ಬ್ಲೂ ಬಾಯ್ಸ್ ಯುವಕ ಸಂಘ ಫುಟ್‌ಬಾಲ್‌ ಲೋಕಕ್ಕೆ ತನ್ನದೇ ಆದ ಕಾಣಿಕೆ ನೀಡುತ್ತಾ ಬರುತ್ತಿದೆ.

ADVERTISEMENT

1955ರಲ್ಲಿ ಕಾರ್ಮಿಕ ತಮಿಳು ಮಾಣಿಕ್ಯ, ಆತೂರು ತೋಟದ ಬಾಲರಾಜು, ಸೋಮನಾಥನ್, ಸ್ವಾಮಿನಾಥನ್, ಜೆನಿ ಕ್ಲಾಸ್, ವಿಜಯನ್, ಸುಂದರರಾಜು, ಸುಂಟಿಕೊಪ್ಪದ ರಾಮರಾಜ ನಾಯ್ಡು, ಬಾರ್ಬಾರ್ ಕುಂಞ ರಾಮನ್, ಎಮ್ಮೆಗುಂಡಿಯ ಜೇಮ್ಸ್ ರಾಡ್ರಿಗಸ್, ಟೆಲಿಫೋನ್ ರಾಮಣ್ಣ ಅವರು ಸೇರಿ ಪುಟ್ಟ ಮೈದಾನದಲ್ಲಿ ಬಟ್ಟೆಯಿಂದ ತಯಾರಿಸಿದ ಚೆಂಡಿನಿಂದ ಆಟವನ್ನು ಆರಂಭಿಸಿದರು. ಇದನ್ನು ಕಂಡ ಅಂದಿನ ದಾನಿಯೊಬ್ಬರು ಚೆಂಡನ್ನು ನೀಡಿ ಪ್ರೋತ್ಸಾಹ ನೀಡಿದರು.

ಈ ಆಟವನ್ನು ಇನ್ನಷ್ಟು ಬೆಳೆಸುವ ನಿಟ್ಟಿನಲ್ಲಿ ರಿಕ್ವೆಶನ್ ಕ್ಲಬ್, ಯೂನಿಯನ್ ಕ್ಲಬ್, ಕಾಮಧೇನು ಎಂಬ ಹೆಸರಿನಲ್ಲಿ ಕ್ಲಬ್‌ಗಳನ್ನು ಆರಂಭಿಸಲಾಯುತು.

ಎಂ.ಎ‌.ಗಂಗಾಧರ್, ಬಿ.ಎಸ್.ಮುತ್ತಪ್ಪ, ನೊಬ್ಬಿ‌, ಟಿ‌.ವಿ.ಪ್ರಸನ್ನ, ಜಿ.ಎಲ್.ನಾಗರಾಜು, ನಾಗೇಶ್, ರಾಮಚಂದ್ರ, ನಾಗರಾಜ, ರಾಮಚಂದ್ರ, ವಹೀದ್ ಜಾನ್ ಎಂಬುವವರು ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಈ ನಡುವೆ ಆರ್.ಪಿಲಿಫ್ ಅವರ ನಾಯಕತ್ವದಲ್ಲಿ ಭಾರತ್  ಫುಟ್‌ಬಾಲ್‌ ಕ್ಲಬ್ ಸಹ ಜನ್ಮ ಪಡೆಯಿತು. ಕೆಲವು ಸಂಘಗಳು ನಾನಾ ಕಾರಣಕ್ಕೆ ತಟಸ್ಥವಾದವು.

1980ರಲ್ಲಿ ‘ಬ್ಲೂ ಬಾಯ್ಸ್ ಯುವಕ ಸಂಘ’ ಸ್ಥಾಪನೆಯಾಯಿತು. ಜೆರ್ಮಿ ಡಿಸೋಜಾ ಅವರ ನೇತೃತ್ವದಲ್ಲಿ ಪ್ಯಾಟ್ರಿಕ್ ಇನ್ನಿತರರನ್ನು ಸೇರಿಸಿಕೊಂಡು ಸಂಘವನ್ನು ಬೆಳೆಸಿದರು. ಸಂಘದ ಮಾರ್ಗದರ್ಶನದಲ್ಲಿ ಬೆಳೆದ ಹಲವು ಆಟಗಾರರು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಿದ್ದಾರೆ.

ಇವೆಲ್ಲವನ್ನೂ ಗಮನಿಸಿದ ಇಲ್ಲಿನ ಬೆಟಗೇರಿ ತೋಟದ ಮಾಲೀಕರಾದ ವಿನೋದ್ ಶಿವಪ್ಪ ಅವರು ತಮ್ಮ ತಂದೆಯಾದ ಡಿ.ಶಿವಪ್ಪ ಅವರ ಜ್ಞಾಪಕಾರ್ಥವಾಗಿ ರಾಜ್ಯಮಟ್ಟದ ಗೋಲ್ಡ್ ಕಪ್ ಪಂದ್ಯವನ್ನು ಕಳೆದ 25 ವರ್ಷಗಳಿಂದ ಬ್ಲೂ ಬಾಯ್ಸ್ ಯುವಕ ಸಂಘದ ನೇತೃತ್ವದಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ.

ಫುಟ್‌ಬಾಲ್ ಟೂರ್ನಿಗಾಗಿ ಮೈದಾನ ಸಜ್ಜುಗೊಂಡಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.