ನಾಪೋಕ್ಲು: ಆಹಾರ ಅರಸಿ ಬಂದ ಕಾಡಾನೆಯೊಂದು ಕರಡ ಗ್ರಾಮದಲ್ಲಿ ಮಂಗಳವಾರ ರಾತ್ರಿ ಶೌಚಾಲಯದ ಗುಂಡಿಗೆ ಬಿದ್ದು, ಬೆಳಿಗ್ಗೆ ಪಾರಾಗಿ ಓಡಿ ಹೋಗಿದೆ. ತಾಯಿಯನ್ನು ಕಳೆದುಕೊಂಡ ಮರಿಯಾನೆಯು ಅತಂತ್ರವಾಗಿದೆ.
ಇಲ್ಲಿಗೆ ಸಮೀಪದ ಚೇಲಾವರ ಗ್ರಾಮದ ನಿವಾಸಿ ಪಟ್ರಪಂಡ ಜಗದೀಶ್ ಎಂಬುವವರಿಗೆ ಸೇರಿದ ರೆಸಾರ್ಟ್ ಸಮೀಪ ಮರಿಯೊಂದಿಗೆ ಅಡ್ಡಾಡುತ್ತಿದ್ದ ತಾಯಿ ಆನೆಯು ಶೌಚಾಲಯದ ಗುಂಡಿಯ ಸ್ಲಾಬ್ ಮುರಿದು ಗುಂಡಿಗೆ ಬಿದ್ದಿತ್ತು. ರಾತ್ರಿಯಿಡೀ ಗುಂಡಿಯಲ್ಲೇ ಒದ್ದಾಡಿದ ಆನೆಗೆ ಮೇಲೆರಲು ಸಾಧ್ಯವಾಗಿರಲಿಲ್ಲ. ಬುಧವಾರ ಬೆಳಿಗ್ಗೆ ಅದನ್ನು ಕಂಡ ನಾಯಿಗಳು ಬೊಗಳಿದ ವೇಳೆ, ಮರಿ ಆನೆಯ ರಕ್ಷಣೆಗೆ ಇನ್ನಿಲ್ಲದ ಪ್ರಯತ್ನಪಟ್ಟು ಗುಂಡಿಯಿಂದ ಮೇಲೇರಿ ಓಡಿಹೋಯಿತು.
ತಾಯಿ ಮತ್ತು ಮರಿಯಾನೆ ಈಗ ಬೇರೆ ಬೇರೆಯಾಗಿದ್ದು, ತಾಯಿ ಆನೆ ಕೀಮಲೆಕಾಡಿನ ಮೇಲೆ ಬೆಪ್ಪುಡಿಯಂಡ ಕಾಡಿನಲ್ಲಿ ಸುತ್ತಾಡುತ್ತಿದೆ. ಇತ್ತ ಚೇಲಾವರ ಬಾಚಮಂಡ ಕುಟುಂಬಸ್ಥರ ತೋಟದಲ್ಲಿ ಮರಿ ಆನೆ ತಾಯಿಗಾಗಿ ಹಂಬಲಿಸಿ ಗೀಳಿಡುತ್ತಾ ರಸ್ತೆಯಲ್ಲಿ ಓಡಾಡುತ್ತಿದೆ. ಅವುಗಳ ಓಡಾಟದಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಅರಣ್ಯ ಸಿಬ್ಬಂದಿ ಬೆಳಿಗ್ಗೆ ಸ್ಥಳಕ್ಕೆ ಬಂದು ಪರಿಶೀಲಿಸಿ, ಎರಡೂ ಆನೆಗಳು ಒಂದಾಗಬಹುದೆಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿ ಹಿಂತಿರುಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.