ADVERTISEMENT

ಸರ್ಕಾರದ ಮೇಲೆ ಆರೋಪ ಸರಿಯಲ್ಲ: ಅಪ್ಪಚ್ಚು ರಂಜನ್‌

ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 16:55 IST
Last Updated 6 ಅಕ್ಟೋಬರ್ 2019, 16:55 IST
ಎಂ.ಪಿ.ಅಪ್ಪಚ್ಚು ರಂಜನ್
ಎಂ.ಪಿ.ಅಪ್ಪಚ್ಚು ರಂಜನ್   

ಮಡಿಕೇರಿ: ‘ನೆರೆ ಸಂತ್ರಸ್ತರ ವಿಚಾರದಲ್ಲಿ ಸರ್ಕಾರವು ಸೂಕ್ತವಾಗಿ ಸ್ಪಂದಿಸಿದೆ. ಸುಖಾಸುಮ್ಮನೇ ಆರೋಪ ಮಾಡುವುದು ಸರಿಯಲ್ಲ’ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಹೇಳಿದರು.

ನಗರದಲ್ಲಿ ಭಾನುವಾರ ಮಾತನಾಡಿದ ಅವರು, ‘ಕೊಡಗಿನಲ್ಲಿ ಪಕ್ಷಾತೀತವಾಗಿ ನೆರೆ ಸಂತ್ರಸ್ತರಿಗೆ ನೆರವಾಗಿದ್ದೇವೆ. ಉತ್ತರ ಕರ್ನಾಟಕ ಜಿಲ್ಲೆಯ ನೆರೆ ಸಂತ್ರಸ್ತರಿಗೆ ನೆರವಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ದೂರುವ ಶಾಸಕರದ್ದೇ ತಪ್ಪು. ಆಯಾ ಜಿಲ್ಲಾಧಿಕಾರಿ ಅವರ ಖಾತೆಯಲ್ಲಿ ₹ 15ರಿಂದ ₹ 20 ಕೋಟಿ ಹಣವಿದೆ. ಆಯಾ ಶಾಸಕರು, ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿ ಹಣ ಬಳಕೆ ಮಾಡಿಕೊಳ್ಳಬಹುದಿತ್ತು. ಅದನ್ನು ಬಿಟ್ಟು ಮಾಧ್ಯಮದ ಮುಂದೆ ಹೋಗುವುದು ತಪ್ಪು’ ಎಂದು ಶಾಸಕ ಬಸವನಗೌಡ ಪಾಟೀಲ್‌ಗೆ ರಂಜನ್‌ ತಿರುಗೇಟು ನೀಡಿದರು.

‘ರಾಜ್ಯದಿಂದ ನೆರೆ ಸಂತ್ರಸ್ತರಿಗೆ ₹ 3,500 ನೆರವು ಬಿಡುಗಡೆ ಮಾಡಲಾಗಿದೆ. ಕೇಂದ್ರವು ₹ 1,200 ಕೋಟಿ ನೆರವು ಘೋಷಿಸಿದೆ. ಕೊಡಗಿಗೆ ರಾಜ್ಯ ಸರ್ಕಾರ ₹ 532 ಕೋಟಿ ಪ್ಯಾಕೇಜ್‌ ಘೋಷಿಸಿದೆ. ಅದರಲ್ಲಿ ₹ 100 ಕೋಟಿ ಬಿಡುಗಡೆ ಮಾಡಿದೆ. ಜಿಲ್ಲಾ ಪಂಚಾಯಿತಿಗೆ ₹ 40 ಕೋಟಿ, ಲೋಕೋಪಯೋಗಿ ಇಲಾಖೆ ₹ 30 ಕೋಟಿ, ನಗರ ಸ್ಥಳೀಯ ಸಂಸ್ಥೆಗಳಿಗೆ ₹ 20 ಕೋಟಿ ನಿಗದಿ ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

‘ಕಳೆದ ವರ್ಷ ನಿರಾಶ್ರಿತರ ಕುಟುಂಬಕ್ಕೆ ತುರ್ತಾಗಿ ₹ 3,800 ನೆರವು ನೀಡಲಾಗಿತ್ತು. ಅದೇ ಈ ವರ್ಷ ಪ್ರತಿ ಕುಟುಂಬಕ್ಕೆ ₹ 10 ಸಾವಿರ ನೀಡಲಾಗಿದೆ. ಕಳೆದ ವರ್ಷದ ನೆರೆ ಹಾಗೂ ಭೂಕುಸಿತದಿಂದ ಮನೆ ಕಳೆದುಕೊಂಡ ಕುಟುಂಬಕ್ಕೆ ಮನೆ ನಿರ್ಮಾಣ ಪ್ರಗತಿಯಲ್ಲಿದೆ. 2018ರಿಂದ ಇಲ್ಲಿಯ ತನಕ ಒಟ್ಟು ₹ 7.36 ಕೋಟಿ ಬಾಡಿಗೆಯನ್ನೇ ವಿತರಿಸಲಾಗಿದೆ. ಮುಂದಿನ ತಿಂಗಳೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೊಡಗಿಗೆ ಆಗಮಿಸಿ, ಮನೆ ಹಸ್ತಾಂತರ ಮಾಡಲಿದ್ದಾರೆ’ ಎಂದು ಹೇಳಿದರು.

‘ಕಳೆದ ವರ್ಷದ ಸಂತ್ರಸ್ತರಿಗೆ ₹ 9.85 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಅನಾಹುತ ಸಂಭವಿಸಿದ ಕಾರಣಕ್ಕೆ ಈ ವರ್ಷದ ಸಂತ್ರಸ್ತರಿಗೆ ₹ 5 ಲಕ್ಷದ ಮನೆ ನಿರ್ಮಿಸಲಾಗುವುದು. ತಮ್ಮದೇ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಮುಂದಾದ ಸಂತ್ರಸ್ತರಿಗೆ ₹ 5 ಲಕ್ಷ ಅನುದಾನ ನೀಡಲಾಗುವುದು ಹೊಳೆ ದಂಡೆಯ ಜನರನ್ನು ಈ ಬಾರಿ ಸ್ಥಳಾಂತರ ಮಾಡಲಾಗುವುದು’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ರಾಬಿನ್‌ ದೇವಯ್ಯ, ಪಿ.ಡಿ.ಪೊನ್ನಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.