ADVERTISEMENT

ಗುಡ್ಡೆಹೊಸೂರು: ಕಲುಷಿತ ನೀರು ಹರಿಸುವ ಹೋಟೆಲ್, ಬಾರ್‌ಗಳ ವಿರುದ್ಧ ಕ್ರಮ

ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 6:04 IST
Last Updated 29 ಜುಲೈ 2025, 6:04 IST
ಕುಶಾಲನಗರ ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯತಿ ಸಾಮಾನ್ಯ ಸಭೆ ಪಂಚಾಯತಿ ಅಧ್ಯಕ್ಷೆ ಸೌಮ್ಯ ಭರತ್ ಅಧ್ಯಕ್ಷತೆಯಲ್ಲಿ ನಡೆಯಿತು
ಕುಶಾಲನಗರ ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯತಿ ಸಾಮಾನ್ಯ ಸಭೆ ಪಂಚಾಯತಿ ಅಧ್ಯಕ್ಷೆ ಸೌಮ್ಯ ಭರತ್ ಅಧ್ಯಕ್ಷತೆಯಲ್ಲಿ ನಡೆಯಿತು   

ಕುಶಾಲನಗರ: ಕಾವೇರಿ ನದಿಗೆ ಕಲುಷಿತ ನೀರು ಹರಿಸುತ್ತಿರುವ ಹೋಟೆಲ್, ಬಾರ್‌ಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಗುಡ್ಡೆಹೊಸೂರು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ಅಧ್ಯಕ್ಷೆ ಸೌಮ್ಯ ಭರತ್ ಅಧ್ಯಕ್ಷತೆಯಲ್ಲಿ ನಡೆದ ಸಭೆ ಆರಂಭದಲ್ಲಿ ‘ಕಲುಷಿತ ನೀರು ಹರಿಸುತ್ತಿರುವ ಹೋಟೆಲ್, ಬಾರ್‌ಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸದಸ್ಯ ಶಿವಪ್ಪ ಒತ್ತಾಯಿಸಿ ಈ ಬಗ್ಗೆ ಹಲವು ಬಾರಿ ಸಭೆಯಲ್ಲಿ ಪ್ರಸ್ತಾಪಿಸಿದರೂ ಇದುವರೆಗೆ ಕ್ರಮವಹಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಇತರೆ ಸದಸ್ಯರು ಧ್ವನಿಗೂಡಿಸಿದರು. ಅಲ್ಲದೇ ಅಧ್ಯಕ್ಷ, ಪಿಡಿಒ ಅವರನ್ನು ಆಗ್ರಹಿಸಿದರು. ಸದಸ್ಯ ಒತ್ತಾಯ ಮೇರೆಗೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲು ಕ್ರಮವಹಿಸುವುದಾಗಿ ಪಿಡಿಒ ಸುಮೇಶ್ ಭರವಸೆ ನೀಡಿದರು.

ADVERTISEMENT

ಕಂದಾಯ, ತೆರಿಗೆ ವಸೂಲಾತಿ ಕಾರ್ಯ ಕಾಲಕಾಲಕ್ಕೆ ಸಮರ್ಪಕವಾಗಿ ಕೈಗೊಳ್ಳುವಂತೆ ಸದಸ್ಯ ಪ್ರದೀಪ್ ಸಲಹೆ ನೀಡಿದರು.
ಗ್ರಾಮ ಪಂಚಾಯತಿನಲ್ಲಿ ಒಬ್ಬನೇ ಪೌರಕಾರ್ಮಿಕ ಇರುವ ಕಾರಣ ಸ್ವಚ್ಚತಾ ಕಾರ್ಯ ಕುಂಠಿತಗೊಂಡಿದೆ. ಹೆಚ್ಚುವರಿ ಪೌರಕಾರ್ಮಿಕರನ್ನು ನೇಮಿಸಿಕೊಳ್ಳಿ‌ ಅಥವಾ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಶೀಘ್ರದಲ್ಲೇ ಕ್ರಮವಹಿಸಬೇಕು ಎಂದು ಸದಸ್ಯ ಪ್ರದೀಪ್, ಶಿವಪ್ಪ, ರುಕ್ಮಿಣಿ, ಉಷಾ, ಚಿದಾನಂದ ಒತ್ತಾಯಿಸಿದರು.

ತ್ಯಾಜ್ಯ ನಿರ್ವಹಣೆ ವಿಚಾರದ ಕುರಿತು ಗಂಭೀರ ಚರ್ಚೆ ನಡೆಯಿತು. ನೇಮಕಾತಿಗೆ ಇರುವ ಸರ್ಕಾರದ ಮಾನದಂಡಗಳ ಬಗ್ಗೆ ಪಿಡಿಒ ಸಭೆಗೆ ಮಾಹಿತಿ‌ ಒದಗಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪ್ರವೀಣ್ ಎಂ.ಕೆ. ಕುಮಾರ್, ಸದಸ್ಯರು, ಸಿಬ್ಬಂದಿ ಭಾಗವಹಿಸಿದ್ದರು.

‘ಅಂಗಡಿ ಮಳಿಗೆಗಳಲ್ಲಿ ಕನ್ನಡ ಕಡ್ಡಾಯ’ 

ಪಂಚಾಯತಿ ವ್ಯಾಪ್ತಿಯ ಅಂಗಡಿ‌ ಮಳಿಗೆಗಳಲ್ಲಿ ಸರ್ಕಾರದ ಮಾನದಂಡದಂತೆ ಕನ್ನಡ ಭಾಷೆ ಕಡ್ಡಾಯ ಬಳಕೆ ಪರವಾನಗಿ ನವೀಕರಣ ಮೂಲಸೌಕರ್ಯವನ್ನು ಸಮರ್ಪಕವಾಗಿ ಒದಗಿಸುವುದು‌ ಜಮಾ ಖರ್ಚುಗಳ ಕುರಿತು ಚರ್ಚೆಗಳು ನಡೆಯಿತು. ರಸ್ತೆ ಬದಿಯ ಅಪಾಯಕಾರಿ ಮರಗಳ ತೆರವಿಗೆ ಕ್ರಮವಹಿಸಲು ಸದಸ್ಯರು ಆಗ್ರಹಿಸಿದರು. ಮಳೆಹಾನಿ ಪ್ರಕರಣಗಳು ತೆರಿಗೆ ಸಂಗ್ರಹಾತಿ 9/11 ಪರಿಷ್ಕರಣೆ ಸಾರ್ವಜನಿಕ ಅರ್ಜಿಗಳ ಕುರಿತು ಪಿಡಿಒ ಸಭೆಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.