ಗೋಣಿಕೊಪ್ಪಲು: ಇಲ್ಲಿನ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ರಿಫ್ಲೆಕ್ಷನ್ ತಂಡದ ನೃತ್ಯ ಸಭಿಕರ ಮನ ಸೂರೆಗೊಂಡಿತು.
ಸ್ಥಳೀಯ ಕಲಾವಿದರಿಂದಲೇ ಕೂಡಿದ್ದ ನೃತ್ಯಗಾರರ ಕಾರ್ಯಕ್ರಮ ನೋಡಲು ಸಭಿಕರು ಕಿಕ್ಕಿರಿದು ತುಂಬಿದ್ದರು.
ಮಧ್ಯರಾತ್ರಿವರೆಗೂ ನಡೆದ ನೃತ್ಯವನ್ನು ಸಭಿಕರು ಮನಸಾರೆ ನೋಡಿ ಆನಂದಿಸಿದರು. ಯುವ ನೃತ್ಯಗಾರರು ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿ ನೋಡುಗರ ಚಿತ್ತ ಸೂರೆಗೊಂಡರು. ಝಗಮಗಿಸುವ ವಿದ್ಯುತ್ ದೀಪಗಳ ವೇದಿಕೆಯಲ್ಲಿ ದೇಸಿ ಮತ್ತು ಪಾಶ್ಚಾತ್ಯ ಸಂಗೀತಗಳಿಗೆ ಸುಂದರವಾಗಿ ನೃತ್ಯ ಮಾಡಿದರು.
ಆರಂಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಥಳೀಯ ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಐ.ಕೆ.ಬಿದ್ದಪ್ಪ,‘ದಸರಾದಲ್ಲಿ ಯುವ ದಸರಾ, ಮಹಿಳಾ ದಸರಾ ಆಚರಿಸುವಂತೆ ದೇಶ ಕಾಯುವ ಯೋಧರ ದಸರಾ ಆಚರಿಸಬೇಕು’ ಎಂದು ಸಲಹೆ ನೀಡಿದರು.
‘ಕೊಡಗಿನಲ್ಲಿ ಮಾತ್ರ ಯೋಧರ ದಸರಾ ಆಚರಿಸಲು ಸಾಧ್ಯ. ಇದರಿಂದ ಯುವಕರು ಸೇನೆ ಸೇರಲು ಪ್ರೇರಣೆ ನೀಡಿದಂತಾಗುತ್ತದೆ. ಜತೆಗೆ ಯೋಧರಿಗೂ ಗೌರವ ಸಲ್ಲಿಸಿದಂತಾಗುತ್ತದೆ’ ಎಂದು ಅಭಿಪ್ರಾಯಿಸಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ,‘ದೇಶಕ್ಕೆ ಅನ್ನ ಕೊಡುವ ರೈತನ ದಸರಾ ಆಚರಿಸಬೇಕು. ಇದು ಕೂಡ ಅನ್ನದಾತನಿಗೆ ನೀಡುವ ಗೌರವ. ಜತೆಗೆ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ’ ಎಂದು ನುಡಿದರು.
ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕಂದ ದೇವಯ್ಯ, ಕಾರ್ಯಕ್ರಮ ಸಂಯೋಜಕ ಚಂದನ್ ಕಾಮತ್, ಮಹಿಳಾ ದಸರಾ ಅಧ್ಯಕ್ಷೆ ಮಂಜುಳಾ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ದಿಲನ್ ಚಂಗಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.