ADVERTISEMENT

ಅಂಬೇಡ್ಕರ್ ತತ್ವಾದರ್ಶ ಪಾಲಿಸಿ: ಜ್ಞಾನಪ್ರಕಾಶ ಸ್ವಾಮೀಜಿ ಕರೆ

​ಪ್ರಜಾವಾಣಿ ವಾರ್ತೆ
Published 16 ಮೇ 2025, 14:23 IST
Last Updated 16 ಮೇ 2025, 14:23 IST
ಮೈಸೂರಿನ ಉರಿಲಿಂಗಪೆದ್ದಿ ಮಠದ ಪೀಠಾಧಿಪತಿ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿದರು
ಮೈಸೂರಿನ ಉರಿಲಿಂಗಪೆದ್ದಿ ಮಠದ ಪೀಠಾಧಿಪತಿ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿದರು   

ಮಡಿಕೇರಿ: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಜ್ಞಾನದ ಜಯಂತಿಯಾಗಬೇಕು. ಅವರನ್ನು ಬೀದಿಯಲ್ಲಿ ನಿಲ್ಲಿಸುವ ಬದಲು ಮನೆಯೊಳಗೆ ಕರೆದುಕೊಂಡು ಹೋಗಬೇಕು. ಅವರ ತತ್ವಾದರ್ಶಗಳನ್ನು ಪಾಲನೆ ಮಾಡಬೇಕು ಎಂದು ಮೈಸೂರಿನ ಶಿವಯೋಗಿ ಉರಿಲಿಂಗ ಪೆದ್ದಿ ಮಠದ ಪೀಠಾಧಿಪತಿ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು. 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪುತ್ತೂರು ವಿಭಾಗದ ಮಡಿಕೇರಿ ಘಟಕದ ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರ ಸಂಘದ ವತಿಯಿಂದ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಶುಕ್ರವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್‌ ಪುಸ್ತಕಗಳಲ್ಲಿದ್ದಾರೆ. ಮಕ್ಕಳಿಗೆ ಅವರ ಪುಸ್ತಕಗಳನ್ನು ಪರಿಚಯಿಸಬೇಕು. ಅವರು ನೀಡಿದ ಸಂವಿಧಾನವೇ ಭಾರತ ದೇಶ ಇಷ್ಟು ಸದೃಢವಾಗಿರಲು ಕಾರಣವಾಗಿದೆ ಎಂದರು.

‘ಬಸ್‌ ಚಾಲಕರ ಮಕ್ಕಳು ಉನ್ನತ ಹುದ್ದೆಗೇರಲು ಅವರು ನೀಡಿದ ಸಂವಿಧಾನ ಕಾರಣ ಎನ್ನುವುದನ್ನು ಮರೆಯಬಾರದು. ಅಂಬೇಡ್ಕರ್ ತ್ಯಾಗದಿಂದ ನಾವು ಇಷ್ಟರಮಟ್ಟಿಗೆ ಬೆಳವಣಿಗೆ ಸಾಧಿಸಿದ್ದೇವೆ. ಇನ್ನಾದರೂ ನಾವು ಗುಲಾಮಗಿರಿಯಿಂದ ಹೊರಬರಬೇಕು’ ಎಂದರು.

ADVERTISEMENT

ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ‘ಅಂಬೇಡ್ಕರ್ ಅವರ ಕೆಲಸವನ್ನು ಸದಾ ಸ್ಮರಿಸಿಕೊಳ್ಳಬೇಕು. ಅವರ ಕನಸನ್ನು ನನಸು ಮಾಡುವ ಕೆಲಸ ಮಾಡಬೇಕು. ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿ ಸ್ವಾವಲಂಬಿಗಳಾಗುವಂತೆ ಮಾಡಿ ಅಂಬೇಡ್ಕರ್ ಅವರಿಗೆ ಗೌರವ ದೊರಕುವ ಕೆಲಸ ನಮ್ಮಿಂದಾಗಬೇಕು’ ಎಂದರು. ಕುಶಾಲನಗರ ಹಾಗೂ ಮಡಿಕೇರಿಯಲ್ಲಿಯೂ ಅಂಬೇಡ್ಕರ್ ಭವನ ನಿರ್ಮಾಣ ಆಗುತ್ತದೆ ಎಂದು ತಿಳಿಸಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಫ್.ಎಚ್.ಜಕ್ಕಪ್ಪ ಮಾತನಾಡಿ, ‘ಡಾ.ಬಿ.ಆರ್.ಅಂಬೇಡ್ಕರ್ ಅವರಂತೆ ನಾವು ವಿದ್ಯಾವಂತರಾಗಬೇಕು. ಇಷ್ಟೆಲ್ಲ ಯೋಜನೆ ಇದ್ದರೂ ಹಿಂದುಳಿಯುತ್ತಿರುವುದು ಬೇಸರ ತರಿಸುತ್ತಿದೆ. ಕೀಳರಿಮೆ ಒಡೆದು ಹಾಕದಿದ್ದರೆ ಮುಂದೆ ಬರಲು ಸಾಧ್ಯವಿಲ್ಲ’ ಎಂದರು.

ಇದಕ್ಕೂ ಮುನ್ನ ಕೆಎಸ್‌ಆರ್‌ಟಿಸಿ ಬಸ್‌ ಡಿಪೊದಿಂದ ಬಸ್ ನಿಲ್ದಾಣದವರೆಗೆ ನಡೆದ ಅಂಬೇಡ್ಕರ್ ಪ್ರತಿಮೆ ಮೆರವಣಿಗೆಗೆ ಕೆಎಸ್‌ಆರ್‌ಟಿಸಿಯ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಅಮಲಿಂಗಯ್ಯ ಬಿ.ಹೊಸಪೂಜಾರಿ ಚಾಲನೆ ನೀಡಿದರು.

ಮಂಡ್ಯದ ಅಂಬೇಡ್ಕರ್ ವಿಚಾರವಾದಿ ರವಿಕೀರ್ತಿ ನಾಗಪುರ, ಕಾರ್ಮಿಕ ಕಲ್ಯಾಣಾಧಿಕಾರಿ ಕೆ.ಕೆ.ಸೋಮಶೇಖರ್, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಣರಣಪ್ಪ, ಖಜಾಂಜಿ ವೆಂಕಟೇಶಮೂರ್ತಿ, ಸಂಘಟನಾ ಕಾರ್ಯದರ್ಶಿಗಳಾದ ಶ್ರೀನಿವಾಸ್, ಎಂ.ರವಿಪ್ರಕಾಶ್, ಉಪಾಧ್ಯಕ್ಷೆ ಬಿ ಸುಂದರಮ್ಮ, ಬೆಂಗಳೂರು ಅಧ್ಯಕ್ಷ ಮುನಿನಾರಾಯಣಸ್ವಾಮಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ವೈ.ರಾಜೇಶ್, ನಗರಸಭಾ ಮಾಜಿ ಅಧ್ಯಕ್ಷ ಎಚ್.ಎಂ.ನಂದಕುಮಾರ್, ಮಡಿಕೇರಿ ಘಟಕ ವ್ಯವಸ್ಥಾಪಕ ಮೆಹಬೂಬ್ ಅಲಿ, ಶಾಂತಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಬಿ.ಜಯೇಂದ್ರ, ದಲಿತ ಸಂಘಟನೆಯ ಮುಖಂಡರಾದ ಜಯಪ್ಪ ಹಾನಗಲ್ಲು, ಕೆ.ಬಿ.ರಾಜು, ಎಚ್.ಎಲ್.ದಿವಾಕರ್  ಭಾಗವಹಿಸಿದ್ದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪುತ್ತೂರು ವಿಭಾಗದ ಮಡಿಕೇರಿ ಘಟಕದ ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರ ಸಂಘದ ವತಿಯಿಂದ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಶುಕ್ರವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಶಾಸಕ ಡಾ.ಮಂತರ್‌ಗೌಡ ಉದ್ಘಾಟಿಸಿದರು

ಡಿಸೆಂಬರ್‌ಗೆ ಬಸ್‌ ಡಿಪೊ ಉದ್ಘಾಟನೆ; ಶಾಸಕ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ.ಮಂತರ್‌ಗೌಡ ‘ಕುಶಾಲನಗರದಲ್ಲಿ ಬಸ್ ಡಿಪೊ ಕಾಮಗಾರಿ ಭರದಿಂದ ನಡೆಯುತ್ತಿದ್ದು ಡಿಸೆಂಬರ್‌ನಲ್ಲಿ ಉದ್ಘಾಟನೆಯಾಗಲಿದೆ. ಶನಿವಾರಸಂತೆಯಲ್ಲಿ ಬಸ್‌ನಿಲ್ದಾಣ ನಿರ್ಮಾಣವಾಗುತ್ತಿದೆ. ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿಯನ್ನು ಜಿಲ್ಲೆಗೆ ತರುವ ಪ್ರಯತ್ನ ನಡೆಯುತ್ತಿದೆ’ ಎಂದರು. ಬಸ್‌ ಸಂಚಾರದಲ್ಲಿ ಸಮಯ ಪಾಲನೆ ಮಾಡುವುದು ಕಡ್ಡಾಯಗೊಳ್ಳಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.