ADVERTISEMENT

ದುಡಿಯದಿದ್ದರೆ ಮನಸ್ಸಿಗೆ ನೆಮ್ಮದಿ ಇಲ್ಲ

ಮೂದರವಳ್ಳಿ ರೈತ ಎಂ.ಎಂ.ರಾಜಪ್ಪ ಮನದಾಳದ ಮಾತು; 40 ವರ್ಷಗಳಿಂದ ವ್ಯವಸಾಯ

ಶ.ಗ.ನಯನತಾರಾ
Published 22 ಮೇ 2019, 19:55 IST
Last Updated 22 ಮೇ 2019, 19:55 IST
ಎಂ.ಕೆ.ಮುತ್ತಪ್ಪ 
ಎಂ.ಕೆ.ಮುತ್ತಪ್ಪ    

ಶನಿವಾರಸಂತೆ: ‘ಕೃಷಿ ನಮ್ಮ ಹುಟ್ಟು ಕಸುಬು. ಕೃಷಿ ಬದುಕಿನಲ್ಲಿ ಖುಷಿ ತಂದಿದೆ. ನಿತ್ಯ ದುಡಿಯದಿದ್ದರೆ ಮನಸ್ಸಿಗೆ ನೆಮ್ಮದಿ ಇಲ್ಲ...’

–ಸಮೀಪದ ಮೂದರವಳ್ಳಿ ಗ್ರಾಮದ ರೈತ ಎಂ.ಎಂ.ರಾಜಪ್ಪ- ಹೊನ್ನಮ್ಮ ದಂಪತಿ ನುಡಿ.

ಮೂದರವಳ್ಳಿ ಕೃಷಿಕರೇ ಅಧಿಕ ಸಂಖ್ಯೆಯಲ್ಲಿರುವ ಆಧುನಿಕತೆಯ ಗಾಳಿ ಅಷ್ಟಾಗಿ ಬೀಸದ ಒಂದು ಗ್ರಾಮ. ಇಲ್ಲಿರುವ ‘ಕಾವೇರಿ ಮಾತೆ ಸಾವಯವ ಸಂಸ್ಥೆ’ಯಡಿ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಾ ಸಂಸ್ಥೆಯ ಮಾರ್ಗದರ್ಶನದಲ್ಲಿ ಗ್ರಾಮದ ರೈತರು ಕೃಷಿಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಅವರಲ್ಲಿ ರಾಜಪ್ಪ ಒಬ್ಬರು. ರಾಜ್ಪಪ್ಪ ಅವರಂತೆಯೇ ಹಲವರು ಈ ಗ್ರಾಮದಲ್ಲಿ ಪ್ರಗತಿ ಪರ ಕೃಷಿಕರಿದ್ದಾರೆ. ಅವರಿಗೆ ಕೃಷಿಯೇ ಖುಷಿ...

ADVERTISEMENT

ಅಷ್ಟೇನು ವಿದ್ಯಾವಂತ ರಲ್ಲದ ರಾಜಪ್ಪ ಮೂರೂವರೆ ಎಕರೆ ಜಮೀನು ಹೊಂದಿದ್ದಾರೆ. ಚಿಕ್ಕಂದಿನಿಂದಲೂ ಕೃಷಿಯತ್ತಲೇ ಒಲವು. 40 ವರ್ಷಗಳ ನಿರಂತರ ದುಡಿಮೆ. ಜಮೀನಿನಲ್ಲಿ ಒಂದು ಎಕರೆ ಕಾಫಿ ತೋಟ. ಕಾಫಿಯೊಂದಿಗೆ ಕಾಳು ಮೆಣಸು, ಕಿತ್ತಳೆ ಬೆಳೆಯುತ್ತಾರೆ. ಎರಡೂವರೆ ಎಕರೆ ಗದ್ದೆಯಿದ್ದು, ಹೈಬ್ರಿಡ್‌ ಒಂಟಿಕಾಳು ಭತ್ತ ಹಾಗೂ ಬಿ.ಆರ್.ಭತ್ತ ಬೆಳೆಯುತ್ತಾರೆ.

ಭತ್ತದ ವ್ಯವಸಾಯ ಮುಗಿದ ಕೂಡಲೇ ಬೇಸಿಗೆ ಬೇಸಾಯ ಆರಂಭ. ಹಸಿರು ಮೆಣಸಿನಕಾಯಿ ಬೆಳೆಯೊಂದಿಗೆ ಶುಂಠಿ ಬೆಳೆಯುತ್ತಾರೆ. ಮುಕ್ಕಾಲು ಭಾಗ ಸಾವಯವ ಗೊಬ್ಬರ, ಮನೆ ದನದ ಗೊಬ್ಬರ, ಸ್ವಲ್ಪ ರಾಸಾಯನಿಕ ಗೊಬ್ಬರ ಬಳಸುತ್ತಾರೆ. ಆಳು–ಕಾಳುಗಳ ಗೋಳಿಲ್ಲ. ಸ್ವಂತ ದುಡಿಮೆ. ಪತಿ- ಪತ್ನಿಯೇ ಬೆಳಿಗ್ಗೆಯಿಂದ ಸಂಜೆಯವರೆಗೂ ದುಡಿಯುತ್ತಾರೆ.

ತೋಟದಲ್ಲಿ ಕಳೆ, ಚಿಗುರು ತೆಗೆಯುವುದು, ಗೊಬ್ಬರ ಹಾಕುವುದು, ಗದ್ದೆಯಲ್ಲಿ ಭತ್ತದ ಬೀಜ ಬಿತ್ತನೆ, ಬದು ಕಡಿಯುವುದು, ಗದ್ದೆ ನಾಟಿ ಬಳಿಕ ಕಳೆ ತೆಗೆಯುವುದು... ಹೀಗೆ ಎಲ್ಲವನ್ನೂ ದಂಪತಿಯೇ ಮಾಡುತ್ತಾರೆ. ನಾಟಿ, ಕೊಯ್ಲಿನ ಸಮಯದಲ್ಲಿ ಮಾತ್ರ ಕೂಲಿಯಾಳುಗಳನ್ನು ಕರೆದುಕೊಳ್ಳುತ್ತಾರೆ. ದನಕರುಗಳಿದ್ದರೂ ಸಮಯ, ಶ್ರಮದ ಉಳಿತಾಯಕ್ಕೆ ಟ್ರಾಕ್ಟರ್, ಟಿಲ್ಲರ್ ಬಾಡಿಗೆಗೆ ತಂದು ಬಳಸುತ್ತಾರೆ.

‘ಹಳ್ಳಿಗಳಲ್ಲಿ ಅವಿದ್ಯಾವಂತರಿಗೆ, ಅಲ್ಪಸ್ವಲ್ಪ ವಿದ್ಯೆ ಕಲಿತವರಿಗೆ ಕೃಷಿಯ ಹೊರತಾಗಿ ಜೀವನವೇ ಇಲ್ಲ. ರೈತ ಕೃಷಿಯನ್ನು ಬಿಟ್ಟರೆ ಪಟ್ಟಣ, ನಗರ ಪ್ರದೇಶದವರ ಜೀವನವೂ ನಿಂತಂತೆ’ ಎನ್ನುತ್ತಾರೆ ರಾಜಪ್ಪ.

ಮೂದರವಳ್ಳಿ ಗ್ರಾಮದ ರೈತರು ಮಳೆಯನ್ನೇ ಅವಲಂಬಿಸಿ ವ್ಯವಸಾಯ ಮಾಡುತ್ತಾರೆ. ಬೇಸಿಗೆಯಲ್ಲಿ ನಾಲೆಯಲ್ಲಿ ಹರಿದು ಬರುವ ಹೊಳೆ ನೀರನ್ನೇ ನಂಬಿ ಹಸಿರು ಮೆಣಸಿನಕಾಯಿ, ಶುಂಠಿ, ರಾಗಿ, ಜೋಳ, ತರಕಾರಿ ಬೆಳೆಯುತ್ತಾರೆ. ಮುಂಗಾರು ಮಳೆ ಆರಂಭವಾಗುವರೆಗೂ ಹೊಳೆ ನೀರು ಕೃಷಿಗೆ ಅನುಕೂಲ ಕಲ್ಪಿಸುತ್ತದೆ.

ಗ್ರಾಮದಲ್ಲಿರುವ ಕಾವೇರಿ ಮಾತೆ ಸಾವಯವ ಸಂಸ್ಥೆಯಿಂದ ಕೃಷಿಕರಿಗೆ ದೊರೆಯುವ ಗೊಬ್ಬರ, ಬೇವಿನ ಗೊಬ್ಬರ, ಸೆಣಬಿನ ಬೀಜ, ಅಜೋಲ, ಬಿತ್ತನೆ ಬೀಜ, ಹಣ್ಣಿನ ಗಿಡ, ಕೋಳಿ... ಹೀಗೆ ವಿವಿಧ ಸೌಲಭ್ಯಗಳನ್ನು ರಾಜಪ್ಪ ಪಡೆದಿದ್ದಾರೆ. ಸಂಸ್ಥೆಯ ಅಧ್ಯಕ್ಷ ಎಂ.ಕೆ. ಮುತ್ತಪ್ಪ ಅವರ ಮಾರ್ಗದರ್ಶನದಲ್ಲಿ ಕೃಷಿ ಮಾಡುತ್ತಾ ಮಾದರಿ ರೈತರೆನಿಸಿದ್ದಾರೆ. ದುಡಿಮೆಯಲ್ಲಿ ಸಂತೃಪ್ತಿ ಕಾಣುತ್ತಾ ಕೃಷಿ ಬದುಕನ್ನು ಸಾರ್ಥಕ ಪಡಿಸಿಕೊಂಡಿದ್ದಾರೆ.

ಈ ವರ್ಷ ಒಳ್ಳೆಯ ಆದಾಯ

‘ಬೇಸಿಗೆಯಲ್ಲಿ ಪ್ರತಿವರ್ಷ ತಪ್ಪದೇ ಹಸಿರು ಮೆಣಸಿನಕಾಯಿ ಬೆಳೆಯುತ್ತೇನೆ. ಬೆಳೆಗೆ ಮಾಡಿದ ಖರ್ಚು ಕಳೆದು ₹30 ಸಾವಿರದಿಂದ 40 ಸಾವಿರ ಉಳಿತಾಯವಾಗುತ್ತದೆ. ಸಂಸಾರದ ಖರ್ಚು ಸರಿದೂಗಿಸಲು ಆಗುತ್ತದೆ. ಕಾಫಿ, ಭತ್ತದ ಆದಾಯದ ಜತೆ ಈ ವರ್ಷ ಮೆಣಸಿನಕಾಯಿಗೆ ಒಳ್ಳೆಯ ಬೆಲೆ ಸಿಕ್ಕಿದ್ದರಿಂದ ಆದಾಯ ಚೆನ್ನಾಗಿದೆ’ ಎಂದು ಎಂ.ಎಂ.ರಾಜಪ್ಪಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.