ADVERTISEMENT

ಸನಾತನ ಧರ್ಮ ಉಳಿವಿಗೆ ಕಂಕಣ ಬದ್ಧರಾಗಿ: ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 14:40 IST
Last Updated 10 ಮಾರ್ಚ್ 2025, 14:40 IST
<div class="paragraphs"><p>ಕುಶಾಲನಗರ ಸಮೀಪದ ಬ್ಯಾಡಗೊಟ್ಟ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ ಮುನೇಶ್ವರ ಸ್ವಾಮಿ ಮತ್ತು ಚೌಡೇಶ್ವರಿ ದೇವರ ವಾರ್ಷಿಕ ಮಹಾಪೂಜೆ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ‌ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿದರು</p></div>

ಕುಶಾಲನಗರ ಸಮೀಪದ ಬ್ಯಾಡಗೊಟ್ಟ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ ಮುನೇಶ್ವರ ಸ್ವಾಮಿ ಮತ್ತು ಚೌಡೇಶ್ವರಿ ದೇವರ ವಾರ್ಷಿಕ ಮಹಾಪೂಜೆ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ‌ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿದರು

   

ಕುಶಾಲನಗರ: ಸಮೀಪದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರದ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ ಮುನೇಶ್ವರ ಸ್ವಾಮಿ ಮತ್ತು ಚೌಡೇಶ್ವರಿ (ಮಠದಮ್ಮ) ದೇವರ ವಾರ್ಷಿಕ ಮಹಾಪೂಜೆ ಸೋಮವಾರ ಶ್ರದ್ಧಾಭಕ್ತಿಯಿಂದ ನಡೆಯಿತು.

ಎರಡು ದಿನ ನಡೆಯುವ ಪೂಜಾ‌ ಮಹೋತ್ಸವದಲ್ಲಿ ಅಖಿಲ‌ ಭಾರತ ಸಂತ ಸಮಿತಿ ರಾಜ್ಯ ಪ್ರಧಾನ‌ ಕಾರ್ಯದರ್ಶಿ ರಾಜೇಶ್‌ನಾಥ್ ಗುರೂಜೀ ಆಶೀರ್ವಚನ ನೀಡಿ, ‘ದಿಡ್ಡಳ್ಳಿ ನಿರಾಶ್ರಿತರು ಈ ಶಿಬಿರಕ್ಕೆ ಬರುವ ಮುನ್ನವೇ ಮುನೇಶ್ವರ ಹಾಗೂ ಚೌಡೇಶ್ವರಿ ದೇವಿ ಒಡಮೂಡಿ‌ ನಿಮ್ಮನ್ನು ಸ್ವಾಗತಿಸಿದ್ದಾರೆ. ಶಿಬಿರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಕೈಗೊಂಡು ಹಿಂದೂ ಧರ್ಮದ ಬೆಳವಣಿಗೆಯಲ್ಲಿ ತಾವೆಲ್ಲರೂ ಪಾತ್ರ ವಹಿಸಬೇಕಿದೆ’ ಎಂದರು.

ADVERTISEMENT

ಸೋಮವಾರಪೇಟೆ ವಿರಕ್ತ ‌ಮಠದ ನಿಶ್ಚಲ ನಿರಂಜನ ದೇಶಿಕೇಂದ್ರ ಮಹಾಸ್ವಾಮಿ ಮಾತನಾಡಿ, ‘ಧಾರ್ಮಿಕವಾಗಿ‌ ಹಿಂದೂ‌ ಧರ್ಮ ಶ್ರೇಷ್ಠ ಧರ್ಮ. ಸಂಸ್ಕಾರಯುತ ಹಿಂದೂ ಧರ್ಮದ ಉಳಿವಿಗೆ ಎಲ್ಲರೂ ಕಟಿಬದ್ಧರಾಗಬೇಕಿದೆ. ಜೀವನದೊಂದಿಗೆ ಧರ್ಮದ ಅಭಿವೃದ್ಧಿಗೆ ಕೂಡ ಎಲ್ಲರೂ ಮುಂದಾಗಬೇಕಿದೆ. ಮೌಲ್ಯಗಳು ಅಡಕಗೊಂಡಿರುವ ಹಿಂದೂ ಧರ್ಮ ಹೊರತುಪಡಿಸಿ‌ ಇತರೆ ಧರ್ಮದತ್ತ ಮುಖ ಮಾಡದಂತೆ’ ಸಲಹೆ ನೀಡಿದರು.

ಮಾಜಿ ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ‘ಹಿಂದೂಗಳ ನೆಮ್ಮದಿಯ ಜೀವನಕ್ಕೆ ಸನಾತನ ಧರ್ಮ ಉಳಿಯಬೇಕಿದೆ. ‘ಹಸಿರು ಉಳಿದರೆ ಉಸಿರು‌’ ಎನ್ನುವ ನಾಣ್ಣುಡಿ ಇಂದು ದೇಶದೆಲ್ಲೆಡೆ ಅತ್ಯಗತ್ಯವಾಗಿದೆ. ಆದರೆ, ಹಿಂದೂಗಳು ನದಿ, ಮರ ಪರಿಸರವನ್ನು ಪ್ರೀತಿಸಿ ಉಳಿಸುವ ಕೆಲಸ‌ ಅನಾದಿ ಕಾಲದಿಂದ ನಡೆಸಿಕೊಂಡು ಬಂದಿದ್ದಾರೆ. ಬೇರೆ ಧರ್ಮಗಳಿಗೆ‌ ಮಾರು ಹೋಗಬಾರದು. ಜೀವನದ ಉನ್ನತಿಗೆ ತಂದೆ ತಾಯಿಯ, ಗುರು ಹಿರಿಯರ ಆಶೀರ್ವಾದ ಸದಾ ಅಗತ್ಯ ಎಂದ ಅವರು, ಮುಂದಿನ‌ ದಿನಗಳಲ್ಲಿ ಪೂಜೋತ್ಸವ ಮತ್ತಷ್ಟು ವಿಜೃಂಭಣೆಯಿಂದ ನಡೆಯಲಿ‌ ಎಂದು ಹಾರೈಸಿದರು. ಕಡ್ಡಾಯವಾಗಿ ಎಲ್ಲರೂ ಶಿಕ್ಷಣಕ್ಕೆ ಒತ್ತು ನೀಡುವಂತೆ ಅವರು ದಿಡ್ಡಳ್ಳಿ ನಿವಾಸಿಗಳಿಗೆ’ ಸಲಹೆ ನೀಡಿದರು.

ಕೂಡಿಗೆಯ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ನವೀನ್ ಭಟ್ ತಂಡದವರು ಪೂಜಾ ವಿಧಿ ನೆರವೇರಿಸಿತು.

ಈ ಸಂದರ್ಭ ಶ್ರೀ ಚೌಡೇಶ್ವರಿ ಸೇವಾ ಸಮಿತಿಯ ಅಧ್ಯಕ್ಷ ಸಿದ್ದು ಪಿ.ಸಿ., ಪ್ರಮುಖರಾದ ರವಿ, ಮುತ್ತಣ್ಣ, ಮಂಜೇಶ್, ಭೋಜ, ವನವಾಸಿ ಕಲ್ಯಾಣದ ತಾಲ್ಲೂಕು ಕಾರ್ಯದರ್ಶಿ ಎಂ.ಬಿ.ಹರ್ಷ, ಉದ್ಯಮಿ ಸುಗುರಾಜ್ ಭಾಗವಹಿಸಿದ್ದರು.

ನಂತರ ಸಮಿತಿ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.