ಮಡಿಕೇರಿ: ಆಶಾ ಕಾರ್ಯಕರ್ತೆಯರ ಪ್ರತಿಭಟನೆ 2ನೇ ದಿನವಾದ ಬುಧವಾರವೂ ಮುಂದುವರಿಯಿತು.
ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಜೊತೆ ಸಂಯೋಜಿತವಾಗಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಇಲ್ಲಿನ ಗಾಂಧಿ ಮೈದಾನದಲ್ಲಿ ಸೇರಿದ ನೂರಾರು ಮಂದಿ ಆಶಾ ಕಾರ್ಯಕರ್ತೆಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮಡಿಕೇರಿ ತಾಲ್ಲೂಕಿನ ಚಂದ್ರಾವತಿ ಮಾತನಾಡಿ, ‘ಜನವರಿಯಲ್ಲಿ ಅಹೊರಾತ್ರಿ ಹೋರಾಟ ಮಾಡಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಸಿಕ ₹ 10 ಸಾವಿರ ಗೌರವಧನ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಅದನ್ನು ನಂಬಿ ನಾವು ಹೋರಾಟವನ್ನು ವಾಪಸ್ ಪಡೆದಿದ್ದೆವು. ಆದರೆ, 6 ತಿಂಗಳು ಕಳೆದರೂ ನಮಗೆ ₹ 10 ಸಾವಿರ ಬಂದಿಲ್ಲ. ಹೀಗಾಗಿ, ಪ್ರತಿಭಟನೆ ಅನಿವಾರ್ಯವಾಗಿದೆ’ ಎಂದು ಹೇಳಿದರು.
ವಿರಾಜಪೇಟೆ ತಾಲ್ಲೂಕು ಕಾರ್ಯದರ್ಶಿ ಪ್ರಮಿತಾ ಮಾತನಾಡಿ, ‘ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮತ್ತೆ ನೇಮಕ ಮಾಡಿಕೊಳ್ಳಬೇಕು. ನಿವೃತ್ತಿ ಹೊಂದಿದ ಆಶಾ ಕಾರ್ಯಕರ್ತೆಯರಿಗೆ ಇಡುಗಂಟನ್ನು ನೀಡಬೇಕು’ ಎಂದು ಒತ್ತಾಯಿಸಿದರು.
ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ರಾಜ್ಯ ಸಮಿತಿ ಸದಸ್ಯ ಟಿ.ಆರ್.ಸುನಿಲ್ ಭಾಗವಹಿಸಿದ್ದರು. ಆ. 14ರಂದು ಗಾಂಧಿ ಮೈದಾನದಲ್ಲಿ ಪ‍್ರತಿಭಟನೆ ನಡೆಯಲಿದ್ದು, ಸಂಘದ ರಾಜ್ಯ ಘಟಕದ ಉಪಾಧ್ಯಕ್ಷೆ ಎಂ.ಉಮಾದೇವಿ ಹಾಗೂ ಎಐಯುಟಿಯುಸಿಯ ರಾಜ್ಯ ಸಮಿತಿ ಸದಸ್ಯ ಬಿ.ರವಿ ಭಾಗವಹಿಸಲಿದ್ದಾರೆ ಎಂದು ಸುನಿಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.