ADVERTISEMENT

ಉತ್ತರ ಕೊಡಗಿನಲ್ಲಿ ರಸ್ತೆ ದುರಾವಸ್ಥೆ

ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾದರೂ ಅನುಮತಿ ದೊರೆತಿಲ್ಲ, ಭೂಮಿಪೂಜೆ ನಡೆದರೂ ಕಾಮಗಾರಿ ಆರಂಭವೇ ಆಗಿಲ್ಲ

ಡಿ.ಪಿ.ಲೋಕೇಶ್
Published 24 ಫೆಬ್ರುವರಿ 2025, 7:55 IST
Last Updated 24 ಫೆಬ್ರುವರಿ 2025, 7:55 IST
ಸೋಮವಾರಪೇಟೆ ತಾಲ್ಲೂಕಿನ ಹಿರಿಸಾವೆ, ಬಿಳಿಗೇರಿ ಮತ್ತು ಚೆಟ್ಟಳ್ಳಿ ರಾಜ್ಯ ಹೆದ್ದಾರಿ ಕಿರಿದಾಗಿರುವುದು
ಸೋಮವಾರಪೇಟೆ ತಾಲ್ಲೂಕಿನ ಹಿರಿಸಾವೆ, ಬಿಳಿಗೇರಿ ಮತ್ತು ಚೆಟ್ಟಳ್ಳಿ ರಾಜ್ಯ ಹೆದ್ದಾರಿ ಕಿರಿದಾಗಿರುವುದು   

ಸೋಮವಾರಪೇಟೆ: ಮಳೆಗಾಲ ಮುಗಿಯಿತು, ಚಳಿಗಾಲವೂ ಮುಗಿಯಿತು. ಬೇಸಿಗೆಯೂ ಬಂದಾಯಿತು. ಮತ್ತೊಂದು ಮಳೆಗಾಲಕ್ಕೆ ಕೆಲವೇ ತಿಂಗಳಷ್ಟೇ ಬಾಕಿ ಇದೆ. ಆದರೂ, ಉತ್ತರ ಕೊಡಗಿನ ಪ್ರಮುಖ ರಸ್ತೆಗಳು ಅಭಿವೃದ್ದಿಯಾಗದೇ ಜನರು ನಿರಾಶರಾಗಿದ್ದಾರೆ. ಇನ್ನು ಬೇಸಿಗೆ ಮುಗಿದು ಮಳೆ ಶುರುವಾದರೆ ಮಳೆಗಾಲ ಮುಗಿಯುವವರೆಗೂ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಹಾಗಾಗಿ, ಆದಷ್ಟು ಬೇಗ ಈ ಬಜೆಟ್‌ನಲ್ಲಾದರೂ ಈ ಭಾಗದ ಸಮಗ್ರ ರಸ್ತೆಗಳ ಅಭಿವೃದ್ಧಿಗೆ ಸರ್ಕಾರದಿಂದ ಇಂತಿಷ್ಟು ಹಣ ತೆಗೆದಿರಿಸಿಕೊಡಬೇಕೆಂಬುದು ಈ ಭಾಗದ ಜನರ ಒತ್ತಾಯವಾಗಿದೆ.

ಪ್ರಮುಖವಾಗಿ, ಹಿರಿಸಾವೆ, ಬಿಳಿಗೇರಿ ಮತ್ತು ಚೆಟ್ಟಳ್ಳಿ ರಾಜ್ಯ ಹೆದ್ದಾರಿ. ಇದು ರಾಜ್ಯಹೆದ್ದಾರಿಯಾಗಿ ಹಲವು ವರ್ಷಗಳಾಗಿವೆ. ಆದರೆ, ಇಂದಿಗೂ ಯಾವುದೇ ಅಭಿವೃದ್ಧಿ ಕಾಣದೆ, ಇದ್ದ ರಸ್ತೆಯ ನಿರ್ವಹಣೆಯನ್ನೂ ಮಾಡದೇ ಇರುವುದರಿಂದ ಈ ಭಾಗದ ಗ್ರಾಮೀಣ ಜನರು ಇನ್ನಿಲ್ಲದ ಪರದಾಟ ಅನುಭವಿಸುತ್ತಿದ್ದಾರೆ. ಈ ರಸ್ತೆ ಅಭಿವೃದ್ಧಿಗೆ ಈಗಾಗಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ₹ 30 ಕೋಟಿ ಪ್ರಸ್ತಾವ ಸಲ್ಲಿಸಿದ್ದಾರೆ. ಆದರೆ, ಸರ್ಕಾರ ಮಾತ್ರ ಬಿಡುಗಡೆಗೆ ಮೀನಾಮೇಷ ಎಣಿಸುತ್ತಿದೆ.

ಮಳೆ ಹೆಚ್ಚಾಗಿ ಸುರಿಯುವುದರಿಂದ ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿಗಳಿಲ್ಲದಿರುವುದರಿಂದ, ಮಳೆ ನೀರು ರಸ್ತೆ ಬದಿಯಲ್ಲಿ ಹರಿಯುತ್ತಿದ್ದು, ರಸ್ತೆ ಕಿರಿದಾಗುತ್ತಾ ಹೋಗುತ್ತಿದೆ. ಇಲ್ಲಿ ಒಂದು ವಾಹನ ಮಾತ್ರ ಸಂಚರಿಸಲು ಅವಕಾಶ ಇದೆ. ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಹೆಚ್ಚಾಗಿ ಈ ಭಾಗದಲ್ಲಿಯೇ ಸಂಚರಿಸುವುದರಿಂದ ಎರಡೂ ಬದಿಯಲ್ಲಿ ವಾಹನಗಳು ಬಂದಾಗ, ಒಂದು ವಾಹನವನ್ನು ರಸ್ತೆ ಬದಿಯ ಗುಂಡಿಗೆ ಇಳಿಸಿ ನಿಲ್ಲಬೇಕಾಗುತ್ತದೆ. ತಪ್ಪಿದಲ್ಲಿ ಎರಡೂ ವಾಹನಗಳಿಗೆ ಘರ್ಷಣೆಗಳಾಗುತ್ತಿರುತ್ತವೆ ಎಂದು ಸ್ಥಳೀಯರು ದೂರಿದರು.

ADVERTISEMENT

ಅದರಲ್ಲೂ ಇತ್ತೀಚೆಗೆ ಮಕ್ಕಳಗುಡಿ ಬೆಟ್ಟ, ಮಲ್ಲಳ್ಳಿ ಜಲಪಾತವನ್ನು ಗೂಗಲ್‌ ಮ್ಯಾಪ್‌ನಲ್ಲಿ ಹಾಕಿದರೆ ಇದೇ ಮಾರ್ಗವನ್ನು ತೋರಿಸುತ್ತದೆ. ಇದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಕೂಡಲೇ ರಸ್ತೆ ವಿಸ್ತರಣೆ ಮಾಡಬೇಕಿದೆ ಅಥವಾ ಅಭಿವೃದ್ಧಿಪಡಿಸಬೇಕಿದೆ ಈ ಭಾಗದ ಜನರು ಒತ್ತಾಯಿಸುತ್ತಾರೆ.

ಈ ಭಾಗದಲ್ಲಿ ಸಾಕಷ್ಟು ಕಾಫಿ ತೋಟಗಳಿದ್ದು, ಇಲ್ಲಿಯೇ ಟಿಂಬರ್ ತುಂಬಿದ ಲಾರಿಗಳು ಹಾಗೂ ಬಸ್‌ಗಳು ಸಂಚರಿಸುತ್ತಿವೆ. ಗುಡ್ಡಗಾಡು ಪ್ರದೇಶವಾಗಿರುವುದರಿಂದ ಕಷ್ಟದಲ್ಲಿಯೇ ವಾಹನಗಳನ್ನು ಚಾಲನೆ ಮಾಡಬೇಕಿದೆ. ಟಿಂಬರ್ ಸಾಗಿಸುವ ಸಂದರ್ಭ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಆದರೂ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದರ ಸುಧಾರಣೆಗೆ ಮುಂದಾಗದಿರುವುದು ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಮನು, ಪ್ರಶಾಂತ್, ರಮೇಶ್ ದೂರುತ್ತಾರೆ.

ದುಸ್ಥಿತಿಯಲ್ಲಿವೆ ಗ್ರಾಮೀಣ ರಸ್ತೆಗಳು

ಸೋಮವಾರಪೇಟೆ ತಾಲ್ಲೂಕಿನ ಹಲವು ಗ್ರಾಮೀಣ ರಸ್ತೆಗಳು ಇಂದಿಗೂ ದುಸ್ತಿತಿಯಲ್ಲಿರುವುದರಿಂದ ಜನರು ಪಡಬಾರದ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ.

ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡ‌ಂತೆ ಸ್ವಲ್ಪ ದೂರ ಮಾತ್ರ ಹೆಚ್ಚಿನ ರಸ್ತೆಗಳನ್ನು ಸರಿಪಡಿಸಿ, ಉಳಿದ ರಸ್ತೆಯನ್ನು ಹಾಗೆಯೇ ಬಿಡಲಾಗುತ್ತಿದೆ. ಇದರಿಂದ ಗ್ರಾಮಕ್ಕೆ ಪ್ರವೇಶಿಸಿವ ಹೆಚ್ಚಿನ ರಸ್ತೆಗಳಲ್ಲಿ ವಾಹನಗಳು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಇಂತಹ ಗ್ರಾಮಗಳಿಗೆ ಯಾವುದೇ ಬಾಡಿಗೆ ವಾಹನಗಳು ಬರುವುದಿಲ್ಲ. ಹೆಚ್ಚಿನ ಬಾಡಿಗೆ ನೀಡಿ ಹೋಗಲು ಸಾಧ್ಯವಾಗದೆ, ನಡೆದುಕೊಂಡೇ ಮುಖ್ಯ ರಸ್ತೆಗಳನ್ನು ತಲುಪಬೇಕಾಗಿದೆ ಎಂದು ಗ್ರಾಮಸ್ಥರ ದೂರಾಗಿದೆ.

ಕಳೆದ ಎರಡು ದಶಕಗಳಿಂದ ಐತಿಹಾಸಿಕ ಹೊನ್ನಮ್ಮನ ಕೆರೆಯಿಂದ ಸುತ್ತಮುತ್ತಲ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ಗುಂಡಿ ಬಿದ್ದಿವೆ. ದೊಡ್ಡಮಳ್ತೆ ಹೊನ್ನಮ್ಮನ ಕೆರೆ ಮಾರ್ಗವಾಗಿ ಸುಳಿಮಳ್ತೆ, ದೊಡ್ಡಮಳ್ತೆ, ಮೂಕನ ಕಟ್ಟೆ, ಬಳಗೇರಿ ಬಸವಣ್ಣ ದೇವಾಲಯ ಸಂಪರ್ಕ ರಸ್ತೆಗಳು ತೀರಾ ಹಾಳಾಗಿದ್ದು, ರಸ್ತೆಯ ಡಾಂಬರು ಕಿತ್ತು ಬಂದಿದೆ. ಬಾಡಿಗೆ ವಾಹನಗಳು ಈ ರಸ್ತೆಗಾಗಿ ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಜನಸಾಮಾನ್ಯರಿಗೆ ತೊಂದರೆ ಆಗಿದೆ. ಬಾಡಿಗೆ ದುಬಾರಿ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರ ಆರೋಪವಾಗಿದೆ.

ಹಳೆಯ ರಸ್ತೆಗಳ ದುರಸ್ಥಿ ಹಾಗೂ ನೂತನ ರಸ್ತೆ ನಿರ್ಮಾಣ ಮಾಡಲು ಭೂಮಿಪೂಜೆ ನಡೆಸಲಾಗಿದೆ. ಆದರೆ, ಹಲವು ಕಾಮಗಾರಿಗಳು ಪ್ರಾರಂಭವೇ ಆಗಿಲ್ಲ. 2–3 ತಿಂಗಳಿನಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಯಲಿದೆ. ಅಲ್ಲದೆ, ಈ ಬಾರಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈಗ ರಸ್ತೆ ಕಾಮಗಾರಿ ನಡೆಸಲು ಆಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಷ್ಟವಾಗುತ್ತದೆ. ಮಳೆ ಪ್ರಾರಂಭಗೊಂಡರೆ, ಇದ್ದ ರಸ್ತೆಗಳು ಇನ್ನಷ್ಟು ಗುಂಡಿಗಳಾಗಿ ಸಂಚಾರಕ್ಕೆ ಸಾಧ್ಯವಿಲ್ಲದಂತಾಗುತ್ತದೆ.

ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಯ ದುಸ್ಥಿತಿ

ಪ್ರತಿಕ್ರಿಯೆಗಳು

2020ರಿಂದಲೂ ಮನವಿ ಮಾಡುತ್ತಲೇ ಇದ್ದೇವೆ... ವಿದ್ಯಾರ್ಥಿಗಳು ಕಾರ್ಮಿಕರು ಕಾಫಿ ಬೆಳೆಗಾರರು ಮಾತ್ರವಲ್ಲ ಪ್ರವಾಸಿಗರೂ ಸೇರಿದಂತೆ ಹಲವಾರು ಮಂದಿ ಹಿರಿಸಾವೆ ಬಿಳಿಗೇರಿ ಮತ್ತು ಚೆಟ್ಟಳ್ಳಿ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಾರೆ.
ತಾಕೇರಿ ಗ್ರಾಮದ ನಡುವಿನ ಹಿರಿಸಾವೆ
ಚೆಟ್ಟಳ್ಳಿ ರಸ್ತೆ ಸಂಚರಿಸಲು ಸಾಧ್ಯವಾಗದ ಸ್ಥಿತಿ ಇದೆ. ರಸ್ತೆ ಇಕ್ಕಟ್ಟಾಗಿರುವುದರಿಂದ ಸುಗಮ ಸಂಚಾರ ಕಷ್ಟವಾಗಿದೆ. ರಸ್ತೆ ಸರಿಪಡಿಸುವಂತೆ 2020ರಿಂದಲೂ ಅಧಿಕಾರಿಗಳಿಗೆ ಮನವಿ ಮಾಡುತ್ತಾ ಬರುತ್ತಿದ್ದೇವೆ. ಆದರೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ. 2023ರಲ್ಲಿ ಶಾಸಕ ಡಾ.ಮಂತರ್ ಗೌಡ ಅವರಲ್ಲಿ ಮನವಿ ಮಾಡಿದ್ದೇವೆ 
ಎಂ.ಎ.ಶ್ಯಾಮ್ ಪ್ರಸಾದ್ ಸೋಮವಾರಪೇಟೆ ಕಾಫಿ ಬೆಳೆಗಾರರ ಹೋರಾಟ ಸಮಿತಿಯ ವಕ್ತಾರ
₹10 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ ಹಿರಿಸಾವೆ ಬಿಳಿಗೇರಿ ಮತ್ತು ಚೆಟ್ಟಳ್ಳಿ ರಾಜ್ಯ ಹೆದ್ದಾರಿ ಎಂದು ಘೊಷಣೆ ಮಾತ್ರ ಆಗಿದೆ. ಇದು 3.5 ಮೀಟರ್ ಅಗಲ ಇದ್ದು ಅದನ್ನು 7 ಮೀಟರ್ ರಸ್ತೆಯನ್ನಾಗಿ ಮಾಡಬೇಕಿದೆ. ಈಗಾಗಲೇ ಶನಿವಾರಸಂತೆಯಿಂದ ಚಂಗಡಿಗಳ್ಳಿ ಮೂಲಕ ರಸ್ತೆ ಅಭಿವೃದ್ಧಿಯಾಗುತ್ತಿದೆ. ಪೂರ್ಣ ರಸ್ತೆ ಮೇಲ್ದರ್ಜೆಗೇರಿಸಲು ₹ 30 ಕೋಟಿ ಹಣ ಬೇಕಿದೆ. ತಕ್ಷಣಕ್ಕೆ ಕುಂಬೂರಿನಿಂದ ತಾಕೇರಿಯವರೆಗೆ ರಸ್ತೆ ದುರಸ್ಥಿ ಮತ್ತು ವಿಸ್ತರಣೆಗಾಗಿ ಸರ್ಕಾರಕ್ಕೆ ₹ 10 ಕೋಟಿಯ ಅಂದಾಜು ಪಟ್ಟಿ ಹೋಗಿದೆ. ಸರ್ಕಾರದಿಂದ ಹಣ ಬಂದಲ್ಲಿ ಮಾರ್ಚ್ ತಿಂಗಳ ನಂತರ ಕಾರ್ಯಯೋಜನೆಯಾಗಲಿದೆ
ವೆಂಕಟೇಶ್ ನಾಯಕ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.