ADVERTISEMENT

ಬಲಮುರಿ ಜಾತ್ರೆ: ಕಾಣದ ಭಕ್ತರ ಸಂಭ್ರಮ

ಅನ್ನದಾನ ಸ್ಥಗಿತ– ವಿವಿಧ ಪೂಜಾ ಕೈಂಕರ್ಯ ಸಾಗಿದವು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 13:24 IST
Last Updated 18 ಅಕ್ಟೋಬರ್ 2020, 13:24 IST
ನಾಪೋಕ್ಲು ಸಮೀಪದ ಬಲಮುರಿ ಕ್ಷೇತ್ರದ ಅಗಸ್ತ್ಯೇಶ್ವರ ದೇವಾಲಯದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಭಾನುವಾರ ಪಾಲ್ಗೊಂಡ ಭಕ್ತರು.
ನಾಪೋಕ್ಲು ಸಮೀಪದ ಬಲಮುರಿ ಕ್ಷೇತ್ರದ ಅಗಸ್ತ್ಯೇಶ್ವರ ದೇವಾಲಯದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಭಾನುವಾರ ಪಾಲ್ಗೊಂಡ ಭಕ್ತರು.   

ನಾಪೋಕ್ಲು: ತಲಕಾವೇರಿಯಲ್ಲಿ ಜರುಗಿದ ಕಾವೇರಿ ತೀಥೋಧ್ಬವದ ಮರು ದಿನ ಸಂಪ್ರದಾಯದಂತೆ ಕಾವೇರಿ ನದಿ ತೀರದ ಬಲಮುರಿ ಅಗಸ್ತ್ಯೇಶ್ವರ ಹಾಗೂ ಕಾವೇರಿ ಕಣ್ವಮುನೀಶ್ವರ ದೇವಾಲಯಗಳಲ್ಲಿ ತುಲಾ ಸಂಕ್ರಮಣದ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಆದರೆ ಪ್ರತಿ ವರ್ಷದಂತೆ ನಡೆಯುತ್ತಿದ್ದ ಅನ್ನಸಂತರ್ಪಣೆ ಈ ಬಾರಿ ನಡೆಯಲಿಲ್ಲ. ಭಕ್ತರ ಸಂಭ್ರಮ ಕಂಡು ಬರಲಿಲ್ಲ.

ಅಗಸ್ತ್ಯೇಶ್ವರ ದೇವಾಲಯದಲ್ಲಿ ಅರ್ಚಕ ಚಂದ್ರಶೇಖರ್ ಐತಾಳ್ ಅವರ ನೇತೃತ್ವದಲ್ಲಿ ಬೆಳಿಗ್ಗೆ 5 ಗಂಟೆಯಿಂದ ಧಾರ್ಮಿಕ ಕೈಂಕರ್ಯ ಆರಂಭಗೊಂಡಿದ್ದವು. ದೇವರಿಗೆ ಕರ್ಪೂರದ ಆರತಿ, ಕುಂಕುಮಾರ್ಚನೆ, ಮಹಾಪೂಜೆ ನೆರವೇರಿಸಲಾಯಿತು. ಬಳಿಕ ಭಕ್ತರು ತೀರ್ಥ ಪ್ರಸಾದ ಸ್ವೀಕರಿಸಿದರು.

ಕಾವೇರಿ ನದಿ ಎಡಭಾಗದಲ್ಲಿರುವ ಕಾವೇರಿ ಕಣ್ವ ಮುನೀಶ್ವರ ದೇವಾಲಯದಲ್ಲಿ ಬೆಳಿಗ್ಗೆಯಿಂದ ಪೂಜಾ ಕಾರ್ಯಕ್ರಮಗಳು ಪ್ರಾರಂಭಗೊಂಡು ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಮೊದಲು ಕಾವೇರಿ ಕಣ್ವ ಮುನೀಶ್ವರ ದೇವಾಲಯಕ್ಕೆಹಣ್ಣುಕಾಯಿ ಪೂಜೆ ಸಲ್ಲಿಸಿ ಅಲ್ಲಿಂದ ಅಗಸ್ತ್ಯೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ADVERTISEMENT

ಪ್ರತಿ ವರ್ಷ ಬಲಮುರಿ, ಮೂರ್ನಾಡು, ಪಾರಾಣೆ, ಬೇತ್ರಿ, ಹೊದ್ದೂರು, ನಾಪೋಕ್ಲು, ಕೊಂಡಂಗೇರಿ ಸುತ್ತಮುತ್ತಲು ಗ್ರಾಮಗಳಿಂದ ಭಕ್ತರು ಬಂದಿದ್ದರು.

ಕೊರೊನಾ ಹಿನ್ನೆಲೆಯಲ್ಲಿ ಭಾನುವಾರ ಭಕ್ತರ ಸಂಖ್ಯೆ ಕಡಿಮೆ ಇತ್ತು. ಹೆಚ್ಚಿನ ಭಕ್ತರು ಪೂಜಾ ಕೈಂಕರ್ಯ ಮುಗಿಸಿ ಹಿಂತಿರುಗಿದರು.

ಸ್ಥಳೀಯರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ತುಲಾ ಸಂಕ್ರಮಣದ ಸಂದರ್ಭದಲ್ಲಿ ಕಾವೇರಿ ಉಗಮ ಸ್ಥಾನ ತಲಕಾವೇರಿಗೆ ತೆರಳಲು ಸಾಧ್ಯವಾಗದ ಭಕ್ತರು ಬಲಮುರಿಗೆ ಬಂದು ಕಾವೇರಿ ತೀರ್ಥಸ್ನಾನ ಮಾಡಿ ಪುನೀತರಾದರು. ಕಾವೇರಿ ನದಿ ತೀರದಲ್ಲಿ ಕೇಶ ಮುಂಡನ, ಹಿರಿಯರಿಗೆ ಪಿಂಡ ಪ್ರಧಾನ ಕಾರ್ಯಗಳು ನಡೆದವು. ಕಣ್ವಮುನೀಶ್ವರ ದೇವಾಲಯದಲ್ಲಿ ಜಾತ್ರೆ ಅಂಗವಾಗಿ ವಿವಿಧ ಪೂಜಾ ಕಾರ್ಯ ನೆರವೇರಿದವು. ರುದ್ರಾಭಿಷೇಕ ,ಸತ್ಯನಾರಾಯಣ ಪೂಜೆ ಹಾಗೂ ಮಹಾ ಪೂಜೆಗಳಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಅಗಸ್ತ್ಯೇಶ್ವರ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕೊಂಗೀರಂಡ ಸಾಧು ತಮ್ಮಯ್ಯ, ಕಾರ್ಯದರ್ಶಿ ಪೊನ್ನಚ್ಚನ ಜಯ, ಕಾವೇರಿ ಕಣ್ವ ಮುನೀಶ್ವರ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ನೆರವಂಡ ಎಂ. ಅಪ್ಪಚ್ಚು, ಕಾರ್ಯದರ್ಶಿ ಚೆಯ್ಯಂಡ ಗಣಪತಿ ಹಾಗೂ ಆಡಳಿತ ಮಂಡಳಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.