ಸೋಮವಾರಪೇಟೆ: ಒಕ್ಕಲಿಗರ ಯುವ ವೇದಿಕೆ, ರಾಜ್ಯ ಮತ್ತು ಜಿಲ್ಲಾ ಅಮೆಚೂರ್ ಕಬಡ್ಡಿ ಅನೋಸಿಯೇಷನ್ ವತಿಯಿಂದ ಪಟ್ಟಣದ ಜಿಎಂಪಿ ಶಾಲಾ ಮೈದಾನದಲ್ಲಿ 3 ದಿನ ನಡೆದ ರಾಷ್ಟ್ರಮಟ್ಟದ ‘ಎ’ ಗ್ರೇಡ್ ಹೊನಲು ಬೆಳಕಿನ ‘ಒಕ್ಕಲಿಗರ ಕಪ್’ ಕಬಡ್ಡಿ ಪ್ರಶಸ್ತಿಯನ್ನು ಬೆಂಗಳೂರು ರೈಸಿಂಗ್ ಬುಲ್ಸ್ ತಂಡ ಗೆಲ್ಲುವ ಮೂಲಕ ನಗದು ₹ 2 ಲಕ್ಷ ಹಾಗೂ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಕಾಸರಗೋಡಿನ ಜೆ.ಕೆ.ಅಕಾಡೆಮಿ ತಂಡ ದ್ವಿತೀಯ ಸ್ಥಾನ ಪಡೆದು ₹ 1 ಲಕ್ಷ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ಪಡೆಯಿತು. ತೃತೀಯ ಸ್ಥಾನವನ್ನು ಬ್ಯಾಂಕ್ ಆಫ್ ಬರೋಡ, 4 ನೇ ಸ್ಥಾನವನ್ನು ಬಿಪಿಸಿಎಲ್ ತಂಡ ಪಡೆದು ತಲಾ ₹ 50 ಸಾವಿರ ನಗದು ಹಾಗೂ ಟ್ರೋಫಿಗಳನ್ನು ಪಡೆದುಕೊಂಡವು.
ಸೋಮವಾರ ಬೆಳಗಿನ ಜಾವ 3 ಗಂಟೆಗೆ ಆರಂಭವಾದ ರೋಚಕ ಫೈನಲ್‌ನಲ್ಲಿ ಸಮಬಲದ ಹೋರಾಟದಲ್ಲಿ 28-26 ಅಂಕಗಳ ಅಂತರದಲ್ಲಿ ವಿಜೇತ ತಂಡ ಗೆಲ್ಲುವ ಮೂಲಕ ನೆರೆದಿದ್ದ ಸಾವಿರಾರು ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡಿದರು.
ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಜೆ.ಕೆ.ಅಕಾಡೆಮಿ ಕಾಸರಗೋಡು ತಂಡ ಬಿಪಿಸಿಎಲ್ ತಂಡವನ್ನು 31-29 ಅಂಕಗಳ ಅಂತರದಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿತು. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರಿನ ರೈಸಿಂಗ್ ಬುಲ್ಸ್ ತಂಡ ಬ್ಯಾಂಕ್ ಆಫ್ ಬರೋಡ ತಂಡವನ್ನು 29-17 ಅಂತರದಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿತು.
ಮಹಿಳೆಯರಿಗಾಗಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಬೆಳಗಾವಿಯ ಜೈ ಮಹಾಕಾಳಿ ಮಹಿಳಾ ತಂಡ ಪಡೆಯಿತು. ಅಂತಿಮ ಟೂರ್ನಿಯಲ್ಲಿ ಆಳ್ವಾಸ್ ಕಾಲೇಜಿನ ತಂಡವನ್ನು ಮಣಿಸುವ ಮೂಲಕ ಪ್ರಥಮ ಬಹುಮಾನವಾಗಿ ₹ 50 ಸಾವಿರ ನಗದಿನೊಂದಿಗೆ ಆಕರ್ಷಕ ಟ್ರೋಫಿ ಪಡೆಯಿತು. ದ್ವಿತೀಯ ಬಹುಮಾನವನ್ನು ಆಳ್ವಾಸ್ ಕಾಲೇಜಿನ ತಂಡ ₹ 25 ಸಾವಿರ ನಗದಿನೊಂದಿಗೆ ಆಕರ್ಷಕ ಟ್ರೋಫಿ ಪಡೆಯಿತು.
ಬೆಸ್ಟ್ ರೈಡರ್ ಕಾಸರಗೋಡು ತಂಡದ ವಿಶ್ವರಾಜ್, ಬೆಸ್ಟ್ ಡಿಫೆಂಡರ್ ಬುಲ್ಸ್‌ನ ದೀಪಕ್, ಬೆಸ್ಟ್ ಆಲ್‌ರೌಂಡರ್ ಬುಲ್ಸ್‌ನ ಆಶಿಶ್ ಮಲ್ಲಿಕ್, ಮಹಿಳಾವಿಭಾಗದಲ್ಲಿ ಬೆಸ್ಟ್ ರೈಡರ್ ಬೆಳಗಾವಿ ಜಿಲ್ಲೆಯ ಜೈ ಮಹಾಕಾಳಿ ತಂಡದ ಅಮೂಲ್ಯ ಪಾಟೀಲ್, ಬೆಸ್ಟ್ ಕ್ಯಾಚರ್ ದಕ್ಷಿಣ ಕನ್ನಡ ತಂಡದ ಮಹಾಲಕ್ಷ್ಮಿ ಪಡೆದರು.
ಬಹುಮಾನ ದಾನಿಗಳಾದ ದಾನಿಗಳಾದ ಕಿರಗಂದೂರು ಎ.ಎನ್.ಪದ್ಮನಾಭ, ಯುವ ವೇದಿಕೆ ಅಧ್ಯಕ್ಷ ಸುರೇಶ್ ಚಕ್ರವರ್ತಿ ಗೌರವಾಧ್ಯಕ್ಷ ಬಿ.ಜೆ.ದೀಪಕ್, ರಾಜ್ಯ ಅಮೇಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಬಿ.ಸಿ.ಸುರೇಶ್, ಹಿರಿಯ ಕಬಡ್ಡಿ ಆಟಗಾರ ಮಂಜೂರು ತಮ್ಮಣಿ, ಎಸಿಎಫ್ ಗಾನಶ್ರೀ, ಯುವ ವೇದಿಕೆಯ ಪದಾಧಿಕಾರಿಗಳು ಬಹುಮಾನ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.