ADVERTISEMENT

ರಾಜ್ಯಸರ್ಕಾರದ ವಿರುದ್ಧ ಬಿಜೆಪಿ ಕಿಡಿ

ಸೆ. 9ರಂದು ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾ ಬಿಜೆಪಿ ಮುಖಂಡರ ತಂಡ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 7:35 IST
Last Updated 7 ಸೆಪ್ಟೆಂಬರ್ 2025, 7:35 IST
ರವಿ ಕಾಳಪ್ಪ
ರವಿ ಕಾಳಪ್ಪ   

ಮಡಿಕೇರಿ: ರಾಜ್ಯಸರ್ಕಾರ ರೈತ ವಿರೋಧಿ, ಜನ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಆರೋಪಿಸಿದೆ.

ಈ ಕುರಿತು ಇಲ್ಲಿ ಶನಿವಾರ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರವಿಕಾಳಪ್ಪ, ಹಿರಿಯ ಮುಖಂಡರಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚುರಂಜನ್ ಜಂಟಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರವಿ ಕಾಳಪ್ಪ ಮಾತನಾಡಿ, ‘ಸೆ. 9ರಂದು ಬಿಜೆಪಿ ಮುಖಂಡರ ತಂಡವು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ’ ಎಂದು ಹೇಳಿದರು.

ADVERTISEMENT

ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯನ್ನು ಸರ್ಕಾರ ಲಘುವಾಗಿ ಪರಿಗಣಿಸಿದೆ. ಕಾಫಿ ಕೊಳೆಯುತ್ತಿದ್ದು, ದೊಡ್ಡ ಮಟ್ಟದಲ್ಲಿ ನಾಶವಾಗಿದೆ. ಆದರೆ, ಇಲ್ಲಿನ ಯಾವೊಬ್ಬ ಜನಪ್ರತಿನಿಧಿಯೂ ರೈತರ ನೋವನ್ನು ಆಲಿಸುವ ಕೆಲಸ ಮಾಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗೊಮ್ಮೆ ಈಗೊಮ್ಮೆ ಬಂದು ಸಭೆ ನಡೆಸುವುದನ್ನು ಬಿಟ್ಟರೆ ರೈತರಿಗೆ ಅನುಕೂಲವಾಗುವ ಕಾರ್ಯ ಮಾಡಿಲ್ಲ. ರೈತರ ಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ಹೇಳಿದರು.

‘ಈಗ ಬೆಳೆ ಹಾನಿ ತಂಡವನ್ನು ರಚಿಸಲಾಗಿದೆ. ಇಷ್ಟು ದಿನ ಸರ್ಕಾರ ಏನು ಮಾಡುತ್ತಿತ್ತು’ ಎಂದು ಪ್ರಶ್ನಿಸಿದ ಅವರು ‘ಇತ್ತೀಚಿನ ವರ್ಷಗಳಲ್ಲಿ ತೋಟ ನಿರ್ವಹಣಾ ವೆಚ್ಚ ಹಲವು ಪಟ್ಚು ಹೆಚ್ಚಾಗಿದೆ. ಈಗ ಮಳೆಯಿಂದ ಅಪಾರ ನಷ್ಟವೂ ಆಗಿದೆ. ಹಾಗಾಗಿ, ಪ್ರತಿ ರೈತರಿಗೂ ₹ 2 ಲಕ್ಷ ಪರಿಹಾರ ಕೊಡಬೇಕು’ ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಈಗ ಮಾಡಿರುವ ಜಿಎಸ್‌ಟಿ ಬದಲಾವಣೆಯಿಂದ ಜನಸಾಮಾನ್ಯರಿಗೆ ಅನುಕೂಲವಾಗಿದೆ. ಇದು ಜನಪರವಾಗಿದೆ ಎಂದು ಶ್ಲಾಘಿಸಿದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ಬಿ.ಕೆ.ಅರುಣಕುಮಾರ್, ಪಕ್ಷದ ನಗರ ಘಟಕದ ಅಧ್ಯಕ್ಷ ಉಮೇಶ ಸುಬ್ರಮಣಿ ಭಾಗವಹಿಸಿದ್ದರು.

ರೈತ ವಿರೋಧಿ ಸರ್ಕಾರ

ಅಪ‍್ಪಚ್ಚುರಂಜನ್ ಬಿಜೆಪಿ ಮುಖಂಡ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ ‘ರಾಜ್ಯದಲ್ಲಿರುವುದು ಅಕ್ಷರಶಃ ರೈತ ವಿರೋಧಿ ಸರ್ಕಾರ’ ಎಂದು ಕಿಡಿಕಾರಿದರು.‌ ರಾಜ್ಯಸರ್ಕಾರ ಯಾವುದೇ ಸವಲತ್ತುಗಳನ್ನು ರೈತರಿಗೆ ಕೊಡುತ್ತಿಲ್ಲ. ಹಿಂದೆ ಬಿಜೆಪಿ ಇದ್ದಾಗ ಮಳೆಹಾನಿಗೆ ತಕ್ಷಣವೇ ಸಾಕಾಗುವಷ್ಟು ಪರಿಹಾರ ಕೊಟ್ಟಿದ್ದೆವು‌. ಈ ಸರ್ಕಾರ ಒಂದು ಚುಕ್ಕಾಣಿ ಸಹ ಕೊಡಲಿಲ್ಲ ಕಾಫಿ ಬೆಳೆಗಾರರನ್ನೂ ನಿರ್ಲಕ್ಷ್ಯ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಧರ್ಮಸ್ಥಳದ ವಿರುದ್ಧ ಸುಮಾರು 2 ವರ್ಷಗಳಿಂದಲೂ ಷಡ್ಯಂತ್ರ ನಡೆಯುತ್ತಿದ್ದರೂ ಸರ್ಕಾರ ಸುಮ್ಮನಿತ್ತು. ಎಸ್‌ಐಟಿಯಿಂದ ಸಂಪೂರ್ಣ ತನಿಖೆ ಸಾಧ್ಯವೇ ಇಲ್ಲ. ಈ ಪ್ರಕರಣವನ್ನು ಕೂಡಲೇ ರಾಷ್ಟ್ರೀಯ ಭದ್ರತಾ ದಳ (ಎನ್‌ಐಎ) ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ)ಕ್ಕೆ ತನಿಖೆಗಾಗಿ ನೀಡಬೇಕು ಎಂದು ಒತ್ತಾಯಿಸಿದರು.

ನಿಜವಾಗಿ ಬೂಕರ್ ಸಿಕ್ಕಿದ್ದು ದೀಪಾ ಅವರಿಗೆ; ಕೆ.ಜಿ.ಬೋಪಯ್ಯ

ಸೆ. 9ರಂದು ನಡೆಯಲಿರುವ ಚಾಮುಂಡಿಬೆಟ್ಟ ಚಲೋ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೊಡಗಿನಿಂದಲೂ ಜನರು ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಜಿ.ಬೋಪಯ್ಯ ಹೇಳಿದರು. ‘ನಿಜವಾಗಿಯೂ ಬೂಕರ್ ಸಿಕ್ಕಿರುವುದು ಕೊಡಗಿನ ದೀಪಾ ಭಾಸ್ತಿ ಅವರಿಗೆ. ಆದರೆ ಅವರನ್ನೆ ಬಿಟ್ಟು ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಲಾಗಿದೆ. ದೀಪಾ ಅವರನ್ನೂ ಪರಿಗಣಿಸಬೇಕಿತ್ತು’ ಎಂದು ಹೇಳಿದರು. ಹಿಂದೂ ಸಂಸ್ಕೃತಿ ಆಚಾರ ವಿಚಾರದ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ. ಮೆರವಣಿಗೆಗೆ 1500 ಧ್ವನಿವರ್ಧಕಕ್ಕೆ ₹150 ಕಸ ಸಂಗ್ರಹಣೆಗೆ ₹ 500 ಹೀಗೆ ದುಬಾರಿ ದರ ಪಡೆಯಲಾಗುತ್ತಿದೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕದ ಬಳಕೆ ಮೇಲೆ ನಿಷೇಧ ಹೇರಲಾಗಿದೆ. ಆದರೆ ನಸುಕಿನ 4.30ಯಿಂದಲೇ ಹಲವು ಪ್ರಾರ್ಥನಾ ಮಂದಿರದಲ್ಲಿ ದೊಡ್ಡಮಟ್ಟದ ಧ್ವನಿವರ್ಧಕದ ಬಳಕೆಯಾಗುತ್ತಿದೆ ಇದರ ವಿರುದ್ಧ ಕ್ರಮ ಏಕಿಲ್ಲ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.