ADVERTISEMENT

ಸ್ತನ್ಯಪಾನ ಸಪ್ತಾಹ: ಸೊಪ್ಪಿನ ರಸ ಬಿಡಿ, ಎದೆಹಾಲು ಕುಡಿಸಿ

ಆಗಸ್ಟ್ 1ರಿಂದ 7ರವರೆಗೆ ಕೊಡಗು ಜಿಲ್ಲೆಯಲ್ಲಿ ಸ್ತನ್ಯಪಾನ ಸಪ್ತಾಹ

ಕೆ.ಎಸ್.ಗಿರೀಶ್
Published 6 ಆಗಸ್ಟ್ 2025, 4:32 IST
Last Updated 6 ಆಗಸ್ಟ್ 2025, 4:32 IST
   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರತಿ ವರ್ಷ ಸರಾಸರಿ 6,500 ಹೆರಿಗೆಗಳಾದರೆ, ಅದರಲ್ಲಿ ಪ್ರತಿ ವರ್ಷ ಸರಾಸರಿ 50–55 ನವಜಾತ ಶಿಶುಗಳು ಮೃತಪಟ್ಟಿವೆ.

ಶಿಶು ಬದುಕುಲು, ರೋಗಗಳಿಂದ ಪಾರಾಗಲು, ದೈಹಿಕವಾಗಿ, ಮಾನಸಿಕವಾಗಿ ಉತ್ತಮ ರೀತಿಯಲ್ಲಿ ಬೆಳವಣಿಗೆಯಾಗಲು ಹುಟ್ಟಿನಿಂದ 2 ವರ್ಷದವರೆಗೂ ನಿರಂತರವಾಗಿ ಸ್ತನ್ಯಪಾನ ಮಾಡಿಸಲೇಬೇಕು ಎಂದು ವೈದ್ಯರು ಹೇಳುತ್ತಾರೆ.

ಅದರಲ್ಲೂ ಮುಖ್ಯವಾಗಿ, ನವಜಾತ ಶಿಶುಗಳಿಗೆ ವಿವಿಧ ಬಗೆಯ ಸೊಪ್ಪಿನ ರಸ ಕುಡಿಸುವ ಪರಿಪಾಠ ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ಇದೊಂದು ಸಾಮಾಜಿಕ ಪಿಡುಗು ಎಂದೇ ಮಕ್ಕಳ ಆರೋಗ್ಯ ಅಧಿಕಾರಿ ಡಾ.ಮಧುಸೂದನ್ ಹೇಳುತ್ತಾರೆ.

ADVERTISEMENT

ಮಗು ಹೆಚ್ಚು ಅಳುತ್ತಿದ್ದರೆ, ಹಾಲು ಕುಡಿಯದೇ ಹೋದರೆ, ಅನಾರೋಗ್ಯ ಉಂಟಾದರೆ ಎದೆಹಾಲಿನ ಬದಲಿಗೆ ವಿವಿಧ ಬಗೆಯ ಸೊಪ್ಪಿನ ರಸಗಳನ್ನು ಕುಡಿಸುವುದು ಜಿಲ್ಲೆಯಲ್ಲಿ ಅಧಿಕ. ಇದರಿಂದ ಮಗುವಿಗೆ ಸೋಂಕು ಉಂಟಾಗಿ, ಕಾಯಿಲೆಗಳಿಗೆ ತುತ್ತಾಗುತ್ತದೆ. ಹಾಗಾಗಿ, ಈ ಪರಿಪಾಠವನ್ನು ಬಿಡಬೇಕು ಎಂದು ಅವರು ಹೇಳುತ್ತಾರೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ 6 ತಿಂಗಳವರೆಗೆ ಎದೆಹಾಲು ಕುಡಿಸುವವರ ಪ್ರಮಾಣ ಶೇ 61ರಷ್ಟು ಮಾತ್ರ. ಬಹಳಷ್ಟು ತಾಯಂದಿರು ಎದೆಹಾಲಿನ ಬದಲಿಗೆ ಬೇರೆ, ಬೇರೆ ಬಗೆಯ ಹಾಲು ಕುಡಿಸುತ್ತಾರೆ. ಇದರಿಂದ ಮಗು ಕಾಯಿಲೆಗಳಿಗೆ ತುತ್ತಾಗಿ ಸಾವು ಸಂಭವಿಸಬಹುದು.

ಜನಿಸಿದ ಒಂದು ಗಂಟೆಯ ಒಳಗೆ ಎದೆಹಾಲು ಕುಡಿಸುವುದರಿಂದ ನ್ಯೂಮೊನಿಯಾ, ಅತಿಸಾರ ಹಾಗೂ ಅಪೌಷ್ಟಿಕತೆಯಿಂದ ಮಗುವನ್ನು ರಕ್ಷಿಸಬಹುದು. 6 ತಿಂಗಳವರೆಗೂ ಪ್ರತಿ 2 ಗಂಟೆಗಳಿಗೆ ಒಮ್ಮೆಯಾದರೂ ಎದೆ ಹಾಲು ಕುಡಿಸಬೇಕು. ನಂತರ 2 ವರ್ಷದವರೆಗೆ ಹಾಲು ಕುಡಿಸಲೇಬೇಕು ಎಂದು ಮಧುಸೂದನ್ ಹೇಳುತ್ತಾರೆ.

ಆದರೆ, ಇತ್ತೀಚಿನ ದಿನಗಳಲ್ಲಿ ಸೌಂದರ್ಯ ಹಾಳಾಗುತ್ತದೆ ಎಂಬ ಕಾರಣಕ್ಕೆ 2 ವರ್ಷದವರೆಗೂ ತಾಯಂದಿರು ತಮ್ಮ ಮಕ್ಕಳಿಗೆ ಹಾಲು ಕುಡಿಸುತ್ತಿಲ್ಲ. ಮೂಢನಂಬಿಕೆಯಿಂದ ಜನಿಸಿದ ಮೊದಲ ಒಂದು ಗಂಟೆಯೊಳಗೆ ಹಾಲು ಕುಡಿಸುತ್ತಿಲ್ಲ. ಸಣ್ಣಪುಟ್ಟ ಅನಾರೋಗ್ಯಕ್ಕೂ ಸೊಪ್ಪಿನ ರಸ ಕುಡಿಸುತ್ತಾರೆ. ಇವುಗಳಿಂದ ಶಿಶುಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ ಎಂದು ಹೇಳುತ್ತಾರೆ.

ಸ್ತನ್ಯಪಾನ ಸಪ್ತಾಹ: ಪ್ರತಿ ವರ್ಷ ಆಗಸ್ಟ್ 1ರಿಂದ 7ರವರೆಗೆ ಸ್ತನ್ಯಪಾನ ಸಪ್ತಾಹವನ್ನು 120ಕ್ಕೂ ಹೆಚ್ಚು ರಾಷ್ಟ್ರಗಳಲ್ಲ ನಡೆಸಲಾಗುತ್ತದೆ. 1991ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಯೂನಿಸೆಫ್ ಈ ಸಪ್ತಾಹ ಆಚರಿಸುತ್ತಿವೆ. ತಾಯಿಯ ಎದೆಹಾಲು ಪ್ರಕೃತಿದತ್ತವಾದ ದೇವರ ಕೊಡುಗೆಯಾಗಿದ್ದು ಎದೆಹಾಲಿನಿಂದ ಮಗುವಿನ ಆರೋಗ್ಯ ಮತ್ತು ಬೆಳವಣಿಗೆ ಜೊತೆಗೆ ಭವಿಷ್ಯದ ವ್ಯಕ್ತಿಯಾಗಿ ರೂಪಿಸುವ ಚೈತನ್ಯ ಶಕ್ತಿ ಅಡಗಿದ್ದು ಮಗು ಜನಿಸಿದ ಆರು ತಿಂಗಳ ಕಾಲ ವಿಶೇಷ ಎದೆ ಹಾಲುಣಿಸುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಸಪ್ತಾಹ ಆಚರಿಸಲಾಗುತ್ತಿದೆ.

‘ತಾಯಿಯ ಹಾಲು ನೀಡುವುದರಲ್ಲಿ ಹೂಡಿಕೆ ಮಾಡಿದರೆ ಮಕ್ಕಳ ಆರೋಗ್ಯಕರ ಭವಿಷ್ಯಕ್ಕಾಗಿ ಹೂಡಿಕೆ ಮಾಡಿದಂತೆ’ ಎಂಬುದು ಈ ವರ್ಷದ ಘೋಷವಾಕ್ಯ. ಈ ಸಪ್ತಾಹದಲ್ಲಿ ಕೊಡಗು ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸ್ತನ್ಯಪಾನದ ಮಹತ್ವವನ್ನು ಜನರಿಗೆ ಮನವರಿಕೆ ಮಾಡಲು ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.