ADVERTISEMENT

ಜ್ಞಾಪಕಶಕ್ತಿ ವೃದ್ಧಿಗೂ ಕ್ಯಾಲಿಗ್ರಫಿ ಹವ್ಯಾಸ ಸಹಕಾರಿ:

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 16:05 IST
Last Updated 3 ಮಾರ್ಚ್ 2021, 16:05 IST
ಮಡಿಕೇರಿಯ ಜ್ಯೋತಿ ಕ್ಯಾಲಿಗ್ರಫಿ ಸಂಸ್ಥೆಯ ಸಂಸ್ಥಾಪಕಿ ನಮಿತಾ ಆರ್. ರಾವ್ ಅವರು ಮಾತನಾಡಿದರು
ಮಡಿಕೇರಿಯ ಜ್ಯೋತಿ ಕ್ಯಾಲಿಗ್ರಫಿ ಸಂಸ್ಥೆಯ ಸಂಸ್ಥಾಪಕಿ ನಮಿತಾ ಆರ್. ರಾವ್ ಅವರು ಮಾತನಾಡಿದರು   

ಮಡಿಕೇರಿ: ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಉತ್ತೇಜಿಸಲು ಕ್ಯಾಲಿಗ್ರಫಿ ಬರವಣಿಗೆ ಹವ್ಯಾಸ ತುಂಬಾ ಸಹಕಾರಿ ಎಂದು ಮಡಿಕೇರಿಯ ಜ್ಯೋತಿ ಕ್ಯಾಲಿಗ್ರಫಿ ಸಂಸ್ಥೆಯ ಸಂಸ್ಥಾಪಕಿ ನಮಿತಾ ಆರ್. ರಾವ್ ಅವರು ಅಭಿಪ್ರಾಯಪಟ್ಟರು.

ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸ್ನಾತಕೋತ್ತರ ಇಂಗ್ಲಿಷ್‌ ವಿಭಾಗದ ವತಿಯಿಂದ ಈಚೆಗೆ ಆಯೋಜಿಸಿದ್ದ ಎರಡು ದಿನದ ಕ್ಯಾಲಿಗ್ರಫಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಇಂದಿನ ಪೀಳಿಗೆಯ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನವನ್ನು ಹೆಚ್ಚಾಗಿ ಅವಲಂಬಿತವಾಗಿದ್ದು, ಇದರಿಂದ ಭವಿಷ್ಯದಲ್ಲಿ ಅವರ ಬೌದ್ಧಿಕ ಸಾಮರ್ಥದ್ಯದಲ್ಲಿ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಕಲಾತ್ಮಕವಾಗಿ ಬರೆಯುವ ಶೈಲಿಯಿಂದ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಹೆಚ್ಚಾಗುವುದರೊಂದಿಗೆ ಜ್ಞಾಪಕಶಕ್ತಿ ವೃದ್ಧಿಗೂ ಕ್ಯಾಲಿಗ್ರಫಿ ಹವ್ಯಾಸ ಸಹಕಾರಿ ಎಂದು ತಿಳಿಸಿದರು.

ADVERTISEMENT

ಕಲಾತ್ಮಕ ಬರವಣಿಗೆಗೆ ಸಂಬಂಧಪಟ್ಟಂತೆ ಇಂದು ಎಲ್ಲವೂ ತಂತ್ರಜ್ಞಾನಮಯವಾಗಿ ಡಿಜಿಟಲೀಕರಣಗೊಂಡಿದ್ದು, ಬಹುತೇಕ ಅಕ್ಷರ ವಿನ್ಯಾಸಗಳು ಸಿದ್ಧರೂಪದಲ್ಲೇ ಸಿಗುತ್ತಿರುವುದು, ವಿದ್ಯಾರ್ಥಿಗಳಲ್ಲಿ ಸೃಜನಶೀಲ ಕೌಶಲ ಹೊರಬರದಂತೆ ತಡೆಯುತ್ತದೆ. ಈ ನಿಟ್ಟಿನಲ್ಲಿ ಕ್ಯಾಲಿಗ್ರಫಿಯನ್ನು ಹವ್ಯಾಸವಾಗಿ ವಿದ್ಯಾರ್ಥಿಗಳು ರೂಪಿಸಿಕೊಳ್ಳಬಹುದಲ್ಲದೆ, ಆಸಕ್ತಿಯಿದ್ದವರು ಇದನ್ನೊಂದು ವೃತ್ತಿಯಾಗಿಯೂ ಮುಂದುವರಿಸಬಹುದು ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಚೌರೀರ ಜಗತ್ ತಿಮ್ಮಯ್ಯ, ಬಹುಮುಖ ಪ್ರತಿಭೆ ಹೆಚ್ಚಿಸಲು ವಿದ್ಯಾರ್ಥಿಗಳು ವಿವಿಧ ರೀತಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು; ಕಾರ್ಯಾಗಾರದ ಸದುಪಯೋಗಪಡೆದುಕೊಳ್ಳಬೇಕು. ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ಕೂಡ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಉತ್ತೇಜನ ನೀಡುತ್ತಿದ್ದು, ವಿದ್ಯಾರ್ಥಿಗಳಿಗೆ ವಿಭಿನ್ಯ ಕೌಶಲ ಗಳಿಸಲು ಇದೊಂದು ಸುವರ್ಣಾವಕಾಶವಾಗಿದೆ ಎಂದು ತಿಳಿಸಿದರು.

ಕಾರ್ಯಾಗಾರದ ಸ್ಥೂಲ ವಿವರಣೆಯನ್ನು ನೀಡಿದ ಸ್ನಾತಕೋತ್ತರ ಇಂಗ್ಲಿಷ್‌ ವಿಭಾಗದ ಮುಖ್ಯಸ್ಥೆ ಡಾ.ನಯನಾ ಕಶ್ಯಪ್, ವಿದ್ಯಾರ್ಥಿಗಳು ಪಠ್ಯ ವಿಷಯಗಳನ್ನು ಕಲಿಯುವುದರೊಂದಿಗೆ ಪಠ್ಯೇತರ ಹವ್ಯಾಸಗಳನ್ನೂ ಬೆಳೆಸಿಕೊಂಡರೆ ಬೌದ್ಧಿಕ ಕೌಶಲ, ಏಕಾಗ್ರತೆ ವೃದ್ಧಿಸಲು ಸಹಕಾರಿಯಾಗುತ್ತದೆ ಎಂಬ ದೃಷ್ಟಿಯಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದರು.

ಕಾರ್ಯಾಗಾರದಲ್ಲಿ ಸ್ನಾತಕೋತ್ತರ ಇಂಗ್ಲಿಷ್‌ ವಿಭಾಗದ ಉಪನ್ಯಾಸಕರಾದ ನೂರ್ ಸಬಾ, ನೂರ್ ಹುದಾ, ಚಿಣ್ಣಪ್ಪ. ಬಿ.ಜಿ, ಸ್ನಾತಕೋತ್ತರ ಇಂಗ್ಲಿಷ್, ಎಂ.ಬಿ.ಎ ಪ್ರವಾಸೋದ್ಯಮ ಮತ್ತು ಎಂಕಾಂ ಹಾಗೂ ಪದವಿ ವಿದ್ಯಾರ್ಥಿಗಳೊಂದಿಗೆ ಉಪನ್ಯಾಸಕರು ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.