ನಾಪೋಕ್ಲು: ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಈಗ ಹಬ್ಬದ ಸಡಗರ ಮನೆಮಾಡಿದೆ. ಊರ ದೇವಾಲಯಗಳಲ್ಲಿ ವಾರ್ಷಿಕ ಉತ್ಸವಗಳು ಜರುಗುತ್ತಿದ್ದು, ಗ್ರಾಮೀಣ ಜನರು ಹಬ್ಬದ ಸಂಭ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಲ್ಲಿನ ಬಹುತೇಕ ಗ್ರಾಮಗಳಲ್ಲಿ ಭಗವತಿ ದೇವಾಲಯಗಳಿದ್ದು, ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳೊಂದಿಗೆ ಉತ್ಸವಗಳು ಜರುಗುತ್ತಿವೆ. ದೇವರ ಅವಬೃತ ಸ್ನಾನ, ನೃತ್ಯಬಲಿ, ವಿವಿಧ ಕೋಲಗಳು, ಧಾರ್ಮಿಕ ಪೂಜಾ ವಿಧಿವಿಧಾನಗಳು ಜರುಗುತ್ತಿದ್ದು, ಗ್ರಾಮೀಣ ಜನರು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಿದ್ದಾರೆ.
ಸಮೀಪದ ಬಲ್ಲಮಾವಟಿ, ಕೊಳಕೇರಿ, ಹೊದ್ದೂರು, ಕುಂಜಿಲ ಗ್ರಾಮಗಳ ಭಗವತಿ ದೇವಾಲಯಗಳಲ್ಲಿ ಬೊಮ್ಮಂಜಕೇರಿ, ಪೊನ್ನುಮುತ್ತಪ್ಪ, ಕಕ್ಕುಂದಕಾಡು ವೆಂಕಟೇಶ್ವರ, ಮೂಟೇರಿ ಉಮಾಮಹೇಶ್ವರಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಉತ್ಸವಗಳು ಜರುಗಿವೆ. ಹಲವು ಗ್ರಾಮಗಳಲ್ಲಿ ದೇವರ ವಾರ್ಷಿಕ ಉತ್ಸವ ಒಂದು ವಾರಗಳ ಕಾಲ ಜರುಗುತ್ತವೆ. ದೀಪಾರಾಧನೆ, ಬೋಡ್ ಆಟ, ಭಗವತಿ ದೇವಿಯ ಉತ್ಸವ, ಭದ್ರಕಾಳಿ ಉತ್ಸವ, ಮೇಲೇರಿಗೆ ಅಗ್ನಿಸ್ಪರ್ಶ ಸೇರಿದಂತೆ ವಿವಿಧ ಕೋಲಗಳ ಉತ್ಸವದಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ.
ಸಮೀಪದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವರ ವಾರ್ಷಿಕ ಉತ್ಸವ ಮೇ ತಿಂಗಳ 3 ಮತ್ತು 4 ರಂದು ವಿಜೃಂಭಣೆಯಿಂದ ನಡೆಯಲಿದೆ. ಎತ್ತುಗಳ ಮೇಲೆ ಅಕ್ಕಿಯ ಚೀಲಗಳನ್ನಿರಿಸಿ, ಭಕ್ತರು ಹರಕೆ ಸಲ್ಲಿಸುವುದು ಹಲವಾರು ವರ್ಷಗಳಿಂದ ನಡೆದು ಬಂದ ಪದ್ಧತಿ. ಹನ್ನೆರಡು ಎತ್ತುಗಳ ಸಹಿತ ಭಕ್ತರು ದೇವಾಲಯದ ಸುತ್ತ ದುಡಿಕೊಟ್ ಪಾಟ್‌ನೊಂದಿಗೆ ಸಾಗುವ ಅಪೂರ್ವ ಕ್ಷಣಗಳನ್ನು ವೀಕ್ಷಿಸಲು ವಿವಿಧ ಗ್ರಾಮಗಳ ಭಕ್ತರು ಬರುತ್ತಾರೆ. ರಾತ್ರಿ ಜರುಗುವ ದೀಪಾರಾಧನೆ-ಅಂದಿಬೊಳಕ್, ಕರಿಬಾಳೆ, ಕುಟ್ಟಿಚಾತ, ನುಚ್ಚುಟ್ಟೆ ಕೋಲಗಳು ಇಲ್ಲಿನ ಆಕರ್ಷಣೆ. ಮರುದಿನ ಅಜ್ಜಪ್ಪ ಹಾಗೂ ವಿಷ್ಣುಮೂರ್ತಿ ಕೋಲಗಳು ಜರುಗುತ್ತವೆ. ಉತ್ಸವದಲ್ಲಿ ಸಹಸ್ರಾರು ಮಂದಿ ಪಾಲ್ಗೊಳ್ಳುತ್ತಾರೆ.
ಕುಯ್ಯಂಗೇರಿ ನಾಡಿನ ಗ್ರಾಮಗಳಾದ ಪಾಲೂರು, ಹೊದ್ದೂರು, ಹೊದವಾಡ, ಕುಂಬಳದಾಳು,ಅರವತ್ತೋಕ್ಲು, ಬೆಟ್ಟಗೇರಿ, ಹೆರವನಾಡು, ಕಾರುಗುಂದ ಮತ್ತು ಕಡಿಯತ್ತೂರಿನ ಭಕ್ತರು ಪಾಲ್ಗೊಳ್ಳುವ ಈ ಉತ್ಸವದಲ್ಲಿ ಪಾರ್ವತಿ-ಪರಮೇಶ್ವರ ದೇವರ ನೃತ್ಯ ವಿಶೇಷವಾದುದು. ಈ ಉತ್ಸವದಲ್ಲಿ ನೃತ್ಯಗಳೇ ಪ್ರಧಾನ. ನೃತ್ಯಗಳ ಮೂಲಕ ಮಹಾಲಕ್ಷ್ಮಿಯನ್ನು ಪೂಜಿಸುವ ಉತ್ಸವವಿದು. ಕೈಕಾಡುಗ್ರಾಮದ ಮಕ್ಕೋಟು ಮಹಾಲಕ್ಷ್ಮಿ ಉತ್ಸವದಲ್ಲಿ ನೃತ್ಯಗಳೇ ಪ್ರಧಾನ. ಇಲ್ಲಿನ ಮಹಾಲಕ್ಷ್ಮಿ ದೇವಾಲಯದಲ್ಲಿ ಹದಿನೆಂಟು ವಿಧದ ನೃತ್ಯಗಳಲ್ಲಿ ಪಾಲ್ಗೊಂಡು ಭಕ್ತರನ್ನು ದೇವರನ್ನು ಸ್ತುತಿಸುತ್ತಾರೆ. ಪೀಲಿಯಾಟ್, ತೇಲಾಟ್, ಬಿಲ್ಲಾಟ್, ಕತ್ತಿಯಾಟ್, ಕೊಂಬಾಟ್, ಜೋಡಿಯಾಟ್, ಅಜ್ಜಿಯಾಟ್.. ಹೀಗೆ ಹದಿನೆಂಟು ವಿಧದ ದೇವರ ಕುಣಿತವನ್ನು ದೇವರ ಹೆಸರನ್ನು ಹೇಳುತ್ತಾ ಕೈಕಾಡು ಗ್ರಾಮದ ಮಕ್ಕೋಟು ಕೇರಿಯ ಗ್ರಾಮಸ್ಥರು ನೃತ್ಯ ಮಾಡುವುದು ಸಂಪ್ರದಾಯ.
ಇಲ್ಲಿನ ಪೊನ್ನುಮುತ್ತಪ್ಪ ದೇವಾಲಯದಲ್ಲಿ ವಾರ್ಷಿಕ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಉತ್ಸವಕ್ಕಾಗಿ ದೇವಾಲಯ ಸೇರಿದಂತೆ ರಸ್ತೆಯುದ್ಧಕ್ಕೂ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ತಿರುವಪ್ಪನೆ ಮತ್ತು ಮುತ್ತಪ್ಪನ್ ಕೋಲಗಳನ್ನು, ಬೊಳ್ಳಾಟಂ ಅನ್ನು ಭಕ್ತರು ಶ್ರದ್ಧಾಭಕ್ತಿಯಿಂದ ವೀಕ್ಷಿಸಿದರು. ಕಕ್ಕುಂದಕಾಡು ಲಕ್ಷ್ಮಿ ವೆಂಕಟೇಶ್ವರ ದೇವಾಲಯದ ವಾರ್ಷಿಕ ಉತ್ಸವ ಹಾಗೂ ಕೈಕಾಡು ಗ್ರಾಮದ ಮುಕ್ಕೋಟು ಮಹಾಲಕ್ಷ್ಮಿ ದೇವಾಲಯದಲ್ಲಿನ ಉತ್ಸವ ಗಮನ ಸೆಳೆದವು. ಕೈಕಾಡು ಗ್ರಾಮದ ಮಕ್ಕೋಟು ಮಹಾಲಕ್ಷ್ಮಿ ದೇವಾಲಯದ ಉತ್ಸವ, ಬಲತ್ತನಾಡಿನ ರಾಟೆ ಭಗವತಿ ಉತ್ಸವ ಹಾಗೂ ಯವಕಪಾಡಿಗ್ರಾಮದ ಪನ್ನಂಗಾಲ ತಮ್ಮೆ ಎರಡು ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ನಡೆಯುತ್ತವೆ.
ಸಮೀಪದ ಪಾಲೂರು ಗ್ರಾಮದ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಉತ್ಸವ ಈಚೆಗೆ ಮುಕ್ತಾಯಗೊಂಡಿತು.
ಮಡಿಕೇರಿ: ತಾಲ್ಲೂಕಿನ ಬಿಳಿಗೇರಿ ಗ್ರಾಮದ ಅರ್ಧನಾರೀಶ್ವರ ದೇವಾಲಯದ ವಾರ್ಷಿಕೋತ್ಸವವು ಏ. 27ರಿಂದ ಮೇ 1ರವರೆಗೆ ನಡೆಯಲಿದೆ. ಉತ್ಸವದ ಅಂಗವಾಗಿ ಏ. 27ರ ಬೆಳಿಗ್ಗೆ 6.30ಕ್ಕೆ ಬೊಟ್ಲಪ್ಪ ದೇವಾಲಯದಿಂದ ತೀರ್ಥ ತರುವುದು ಗಣಪತಿ ಹೋಮ ದೇವರಿಗೆ ಅಭಿಷೇಕ ಮಹಾಪೂಜೆ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 6 ಗಂಟೆಗೆ ದೇವರ ಭಂಡಾರ ತರುವುದು ದೇವರು ಬಲಿಬರುವುದು ಅಂದಿಬೆಳಕು ಅನ್ನಸಂತರ್ಪಣೆ ನಡೆಯಲಿದೆ. ಏ.28ರಂದು ಬೆಳಿಗ್ಗೆ 5 ಗಂಟೆಗೆ ದೇವರು ನೃತ್ಯ ಬಲಿ ಬರುವುದು 10 ಗಂಟೆಗೆ ಹಬ್ಬದ ಕಟ್ಟು ಮುರಿಯುವುದು ಮಹಾಪೂಜೆ ದೇವರ ನೆರಪು ಬಲಿ ಬರುವುದು ವಸಂತ ಪೂಜೆ ದೇವರ ಶಯನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4 ಗಂಟೆಗೆ ದೇವರ ಜಳಕ ಕಾರ್ಯ ನಡೆಯಲಿದೆ.
ಬಳಿಕ ದೇವರ ನೃತ್ಯ ಬಲಿ ನಡೆಯಲಿದ್ದು ನಂತರ ಅನ್ನಸಂತರ್ಪಣೆ. ಏ.29ರಂದು ಬೆಳಿಗ್ಗೆ 10 ಗಂಟೆಗೆ ಶುದ್ಧ ಕಲಶ ಮಹಾಪೂಜೆ ಅನ್ನಸಂತರ್ಪಣೆ. ಏ.30ರಂದು ಸಂಜೆ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ತೋತಬರುವುದು ಮೇಲೇರಿಗೆ ಅಗ್ನಿ ಸ್ಪರ್ಶ ನಡೆಯಲಿದೆ. ಮೇ 1ರಂದು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗೆ 10 ಗಂಟೆಯಿಂದ ಮೇಲೇರಿ ಹಾಗೂ ಅಜ್ಜಪ್ಪ ದೈವದ ಕೋಲ ಮಧ್ಯಾಹ್ನ 2.30ಕ್ಕೆ ದೇವರಿಗೆ ಬೇಟೆಯ ಸಾಂಪ್ರದಾಯಿಕ ಆಚರಣೆ ನಡೆಯಲಿದೆಯೆಂದು ದೇವಸ್ಥಾನ ಆಡಳಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.