ADVERTISEMENT

ನಟಿ ರಶ್ಮಿಕಾ ಮಂದಣ್ಣಗೆ ಸೂಕ್ತ ರಕ್ಷಣೆ ನೀಡಲು ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2025, 5:35 IST
Last Updated 8 ಮಾರ್ಚ್ 2025, 5:35 IST
ನಟಿ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ   

ಮಡಿಕೇರಿ: ವಿನಾಕಾರಣ ಟೀಕೆಗೆ ಗುರಿಯಾಗುತ್ತಿರುವ ಖ್ಯಾತ ಚಲನಚಿತ್ರ ನಟಿ, ಕೊಡಗು ಮೂಲದ ರಶ್ಮಿಕಾ ಮಂದಣ್ಣ ಅವರಿಗೆ ಸರ್ಕಾರ ಸೂಕ್ತ ರಕ್ಷಣೆಯನ್ನು ನೀಡಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.

ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಸೇರಿದ ರಶ್ಮಿಕಾ ಮಂದಣ್ಣ ಅವರು ತಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆ ಅನಾವರಣದ ಮೂಲಕ ಭಾರತೀಯ ಚಲನಚಿತ್ರೋದ್ಯಮದಲ್ಲಿ ಅಪಾರ ಯಶಸ್ಸನ್ನು ಸಾಧಿಸಿದ್ದಾರೆ. ಇವರ ಜನಪ್ರಿಯತೆ ಹಾಗೂ ಕಲಾಪ್ರತಿಭೆಯನ್ನು ಅರಿಯದವರು ವಿನಾಕಾರಣ ಟೀಕೆ ಮಾಡುವ ಮೂಲಕ ಮಾನಸಿಕ ಕಿರುಕುಳ ನೀಡಿರುವುದು ಘೋರ ಸ್ವರೂಪ ಮತ್ತು ಬೆದರಿಕೆಗೆ ಸಮವಾಗಿದೆ ಎಂದು ಅವರು ಆರೋಪಿಸಿದ್ದಾರೆ.

‘ರಶ್ಮಿಕಾ ಮಂದಣ್ಣ ಅವರು ಭಾರತೀಯ ಚಲನಚಿತ್ರ ರಂಗಕ್ಕೆ ದೊರೆತ ಅಪೂರ್ವ ಕೊಡುಗೆ ಹಾಗೂ ಶ್ರೇಷ್ಠ ನಟಿ. ಅವರ ಸ್ವಂತ ನಿರ್ಧಾರದ ಆಯ್ಕೆಗಳ ಸ್ವಾತಂತ್ರ್ಯದ ಹಕ್ಕನ್ನು ನಾವು ಗೌರವಿಸಬೇಕು. ಯಾರದ್ದೋ ಸೂಚನೆಯಂತೆ ಅಥವಾ ನಿರೀಕ್ಷೆಯಂತೆ ನಡೆದುಕೊಳ್ಳಬೇಕೆಂದು ಒತ್ತಾಯಿಸಬಾರದು. ಒಂದು ವೇಳೆ ಹೀಗೆ ಮಾಡಿದರೆ ಕೊಡವ ಫೋಬಿಯಾವನ್ನು ಪ್ರತಿಬಿಂಬಿಸುತ್ತದೆ, ಅಲ್ಲದೆ ಕೇವಲ ರಶ್ಮಿಕಾ ಅವರ ಸಮುದಾಯದ ಕಾರಣದಿಂದಾಗಿ ಗುರಿಪಡಿಸುತ್ತಿದ್ದಾರೆ ಎನ್ನುವ ಅರ್ಥ ಬರುತ್ತದೆ ಎಂದು ಟೀಕಿಸಿದ್ದಾರೆ.

ADVERTISEMENT

ಕಾವೇರಿ ನದಿಯನ್ನೇ ಬಹುವಾಗಿ ನೆಚ್ಚಿಕೊಂಡಿರುವ ಮಂಡ್ಯದ ಜನತೆಯನ್ನು ಪ್ರತಿನಿಧಿಸುವ ಶಾಸಕರು ಕಾವೇರಿ ಮಾತೆಯ ಪ್ರೀತಿಯ ಪುತ್ರಿ ಹಾಗೂ ಈ ಭಾಗದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರನ್ನು ಅಗೌರವದಿಂದ ಕಂಡಿರುವುದು ನಿಜಕ್ಕೂ ವಿಪರ್ಯಾಸ. ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವುದಾಗಿ ಮತ್ತು ಜನರನ್ನು ರಕ್ಷಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶಾಸಕರ ಅರ್ಥಹೀನ ಟೀಕಾ ಪ್ರಹಾರದ ಕಾರ್ಯವೈಖರಿ ಖಂಡನೀಯ ಎಂದೂ ಅವರು ಹೇಳಿದ್ದಾರೆ.

ಈ ಸಂಬಂಧ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿ ಕೇಂದ್ರ ಗೃಹ ಸಚಿವರು ಹಾಗೂ ರಾಜ್ಯ ಗೃಹ ಸಚಿವರಿಗೆ ಪತ್ರ ಬರೆದಿರುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.