ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದ ಜನಜೀವನ ಹೈರಣಾಗಿದೆ. ಬಿರುಸಿನ ಗಾಳಿ ನಿಂತಿದ್ದರೂ, ಶೀತಗಾಳಿ ನಿಂತಿಲ್ಲ. ಬೀಸುತ್ತಿರುವ ಕುಳಿರ್ಗಾಳಿಯು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಗುರುವಾರ ಬೆಳಿಗ್ಗೆಯಿಂದ ರಾತ್ರಿಯವರೆಗೂ ಮಳೆ ನಿಯಂತ್ರಣದಲ್ಲಿದ್ದರೂ, ರಾತ್ರಿ ಜೋರಾಗಿಯೇ ಮಳೆ ಸುರಿಯಿತು. ರಾತ್ರಿ ಆರಂಭವಾದ ಮಳೆ ಶುಕ್ರವಾರ ಬೆಳಿಗ್ಗೆಯವರೆಗೂ ಜಿಲ್ಲೆಯಾದ್ಯಂತ ಸುರಿಯಿತು. ಇದರಿಂದ ಶುಕ್ರವಾರ ದಿನವಿಡೀ ವಿಪರೀತ ಚಳಿಯಿಂದ ಜನರು ಬೇಸಿಗೆಯಲ್ಲೇ ನಡುಗುವಂತಾಯಿತು.
ಮತ್ತೊಂದೆಡೆ ರಾತ್ರಿ ಸುರಿದ ಮಳೆಯಿಂದ ನದಿ, ತೊರೆಗಳಲ್ಲಿ ನೀರಿನ ಹರಿವನ್ನು ಇನ್ನಷ್ಟು ಹೆಚ್ಚಿಸಿತು. ಎಲ್ಲೆಡೆ ಜಲಧಾರೆಗಳು ಭೋರ್ಗರೆಯುತ್ತಿದ್ದು, ಮಳೆಗಾಲದಲ್ಲಿ ಮತ್ತೆಂತಹ ಸ್ವರೂಪ ಪಡೆದುಕೊಳ್ಳಬಹುದೋ ಎಂಬ ಆತಂಕವನ್ನು ಹೆಚ್ಚಿಸಿದೆ.
ಮಳೆ ಹೆಚ್ಚಾಗಿರುವುದರಿಂದ ಈಗಾಗಲೇ ಮಡಿಕೇರಿ ತಾಲ್ಲೂಕಿನ ಕಾವೇರಿ ನದಿ ಪಾತ್ರದಲ್ಲಿರುವ ಹೊದ್ದೂರು, ಮೂರ್ನಾಡು, ಕಡಗದಾಳು ಹಾಗೂ ಸೂಕ್ಷ್ಮ ಪ್ರದೇಶಗಳಾದ ಮಕ್ಕಂದೂರು, ಗಾಳಿಬೀಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಮಾರು 342 ಕುಟುಂಬಗಳಿಗೆ ಎಚ್ಚರಿಕೆ ನೋಟಿಸ್ ನೀಡಲಾಗಿದೆ.
ಕಳೆದ ಕೆಲವು ದಿನಗಳಿಂದ ವಿದ್ಯುತ್ ಇಲ್ಲದೇ ಪರದಾಡುತ್ತಿದ್ದ ನಾಪೋಕ್ಲು ಹೋಬಳಿಯ ಕೆಲವೆಡೆ ವಿದ್ಯುತ್ ಸಂಪರ್ಕ ಸಾಧ್ಯವಾಗಿದೆ. ಇನ್ನೂ ಅನೇಕ ಕಡೆ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ. ಮಡಿಕೇರಿ ನಗರ ಸೇರಿದಂತೆ ಹಲವೆಡೆ ವಿದ್ಯುತ್ ವ್ಯತ್ಯಯ ಮುಂದುವರಿದಿದೆ.
ಇಡೀ ನಗರದಲ್ಲಿ ಬೀಸುತ್ತಿರುವ ಶೀತಗಾಳಿಯಿಂದ ರಕ್ಷಿಸಿಕೊಳ್ಳಲು ಜನರು ಸ್ವೆಟರ್, ಕಂಬಳಿಗಳ ಮೊರೆ ಹೋಗಿದ್ದಾರೆ. ಹಲವು ಮಂದಿ ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುವಂತಾಗಿದೆ.
ವಿರಾಜಪೇಟೆ ಹೋಬಳಿಯ ಮೈತಾಡಿ ಗ್ರಾಮದ ಗೌರಮ್ಮ ಅವರ ವಾಸದ ಮನೆಯ ಗೋಡೆ ಕುಸಿದು ಭಾಗಶಃ ಹಾನಿಯಾಗಿದೆ. ಸೋಮವಾರಪೇಟೆ ತಾಲ್ಲೂಕಿನ ತಾಕೇರಿ ಗ್ರಾಮದ ನಿವಾಸಿ ಎಂ.ಟಿ.ರಘು ಅವರ ಹಸು ಮಳೆಯಿಂದ ವಿದ್ಯುತ್ ಕಂಬ ಬಿದ್ದು ಮೃತಪಟ್ಟಿದೆ. ಅತ್ತೂರ್ ನಲ್ಲೂರು ಗ್ರಾಮದ ಕೆಂಪಮ್ಮ ಅವರ ಮನೆಯ ಮೇಲೆ ಮರ ಬಿದ್ದು ಹೆಂಚುಗಳು ಹಾನಿಯಾಗಿವೆ. ಕುಶಾಲನಗರ ಹೋಬಳಿಯ 6ನೇ ಹೊಸಕೋಟೆ ಗ್ರಾಮದ ಎಚ್.ಜೆ.ಶಾಂತರಾಜು ಅವರ ವಾಸದ ಮನೆಯ ಗೋಡೆ ಬಿದ್ದು ಭಾಗಶಃ ಹಾನಿಯಾಗಿದೆ.
ಇದರಿಂದ ಶಿಥಿಲ ಕಟ್ಟಡದಲ್ಲಿ ವಾಸಿಸುವವರಲ್ಲಿ ಮತ್ತಷ್ಟು ಆತಂಕ ಹೆಚ್ಚಿದೆ
ಬಿಸಿಲಿಗಾಗಿ ಕಾತರಿಸುತ್ತಿರುವ ಜನ ಸಮೂಹ ಎಲ್ಲೆಡೆ ಶೀತ ಗಾಳಿ ದಟ್ಟವಾಗಿ ಮುಸುಕಿರುವ ಮೋಡಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.