ADVERTISEMENT

ಕಾಫಿನಾಡು: ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿ ಘೋಷಣೆ ಬಾಕಿ

ಸ್ಪರ್ಧೆಯಿಂದ ದೂರ ಉಳಿಯಲು ಜೆಡಿಎಸ್‌ ನಿರ್ಧಾರ

ಬಿ.ಜೆ.ಧನ್ಯಪ್ರಸಾದ್
Published 16 ನವೆಂಬರ್ 2021, 18:52 IST
Last Updated 16 ನವೆಂಬರ್ 2021, 18:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಚಿಕ್ಕಮಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಆಯ್ಕೆ ಬಹುತೇಕ ಮುಗಿದಿದ್ದು, ಅಧಿಕೃತ ಘೋಷಣೆ ಬಾಕಿ ಇದೆ. ಸ್ಪರ್ಧೆಯಿಂದ ಜೆಡಿಎಸ್ ದೂರ ಉಳಿಯುವುದು ನಿಚ್ಚಳವಾಗಿದೆ.

ಬಿಜೆಪಿಯಿಂದ ಎಂ.ಕೆ. ಪ್ರಾಣೇಶ್, ರವೀಂದ್ರ ಬೆಳವಾಡಿ, ನಿರಂಜನ್‌ ಆಕಾಂಕ್ಷಿಗಳ ಪಟ್ಟಿಯಲ್ಲಿ ಇದ್ದಾರೆ. ಪ್ರಾಣೇಶ್‌ ಅವರು ವಿಧಾನ ಪರಿಷತ್‌ ಉಪ ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಮತ್ತೊಮ್ಮೆ ಟಿಕೆಟ್‌ ಒಲಿಯುವ ಸಾಧ್ಯತೆ ಹೆಚ್ಚು ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಹಿಂದುಳಿದ ವರ್ಗದವರೊಬ್ಬರಿಗೆ ಈ ಬಾರಿ ಅವಕಾಶ ನೀಡಿ ಎಂದು ಕೋರಿದ್ದೇವೆ. ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ’ ಎಂದು ಬಿಜೆಪಿ ಟಿಕೆಟ್‌ ಆಕಾಂಕ್ಷಿ ರವೀಂದ್ರ ಬೆಳವಾಡಿ ತಿಳಿಸಿದರು.

ADVERTISEMENT

ಕಾಂಗ್ರೆಸ್‌ನಲ್ಲಿ ಎ.ವಿ. ಗಾಯತ್ರಿ ಶಾಂತೇಗೌಡ, ಡಾ.ಡಿ.ಎಲ್‌. ವಿಜಯಕುಮಾರ್, ಕೆ.ಬಿ. ಮಲ್ಲಿಕಾರ್ಜುನ್‌ ಆಕಾಂಕ್ಷಿಗಳಾಗಿದ್ದಾರೆ. ಗಾಯತ್ರಿ ಶಾಂತೇಗೌಡ ಅವರನ್ನು ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿದೆ, ಅಧಿಕೃತ ಘೋಷಣೆ ಬಾಕಿ ಇದೆ.

ಜೆಡಿಎಸ್‌ನಿಂದ ಕಣಕ್ಕಿಳಿಯಲು ಮೊದಲು ಆಸಕ್ತಿ ತೋರಿಸಿದ್ದ ರಂಜನ್‌ ಅಜಿತ್‌ ಕುಮಾರ್‌, ಈಗ ಮೌನವಾಗಿದ್ದಾರೆ. ಹೊಸಮುಖ ಪರಿಚಯಿಸುವ ಪ್ರಯತ್ನ ಕೈಗೂಡಿಲ್ಲ. ಬೇರೆ ಆಕಾಂಕ್ಷಿಗಳು ಇಲ್ಲ.

ಟಿಕೆಟ್‌ಗಾಗಿ ಯಾವ ಪಕ್ಷದಲ್ಲೂ ತೀವ್ರ ಪೈಪೋಟಿ ಇಲ್ಲ. ಕಾಫಿನಾಡಿನಲ್ಲಿ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಡಲಿದೆ.

***

ಅಭ್ಯರ್ಥಿ ಕಣಕ್ಕಿಳಿಸದಿರಲು ತೀರ್ಮಾನಿಸಲಾಗಿದೆ. ವರಿಷ್ಠರು ಸೂಚಿಸಿದ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುತ್ತೇವೆ. ಯಾರಿಗೆ ಬೆಂಬಲ ನೀಡಬೇಕು ಎಂಬುದು ನಿರ್ಧಾರವಾಗಿಲ್ಲ.

-ಎಸ್‌.ಎಲ್. ಭೋಜೇಗೌಡ, ಜೆಡಿಎಸ್ ಮುಖಂಡ – ವಿಧಾನ ಪರಿಷತ್‌ ಸದಸ್ಯ

***

ಆಕಾಂಕ್ಷಿಗಳ ಪಟ್ಟಿ ಕಳಿಸಿದ್ದೇವೆ. ಪಕ್ಷದ ಸಂಸದೀಯ ಮಂಡಳಿಯ ಸಭೆಯ ತೀರ್ಮಾನ ಕೈಗೊಳ್ಳಲಿದೆ. ಇನ್ನು ಎರಡು ದಿನಗಳಲ್ಲಿ ಅಭ್ಯರ್ಥಿ ಘೋಷಣೆಯಾಗಲಿದೆ.

-ಸಿ.ಟಿ. ರವಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ

***

ಟಿಕೆಟ್‌ ಸಿಗುವ ವಿಶ್ವಾಸ ಇದೆ. ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ಯಾರನ್ನೇ ಕಣಕ್ಕಿಳಿಸಿದರೂ ಗೆಲುವಿಗೆ ಶ್ರಮಿಸುತ್ತೇನೆ.

-ಎಂ.ಕೆ. ಪ್ರಾಣೇಶ್‌, ಆಕಾಂಕ್ಷಿ ಬಿಜೆಪಿ

***

ಪಕ್ಷ ಸೂಚಿಸಿದರೆ ಕಣಕ್ಕಿಳಿಯುತ್ತೇನೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು–ಸೋಲಿನ ಅನುಭವ ಇದೆ. ಚುನಾವಣೆಗೆ ತಯಾರಿ ಮಾಡುತ್ತೇನೆ.

-ಗಾಯತ್ರಿ ಶಾಂತೇಗೌಡ, ಆಕಾಂಕ್ಷಿ, ಕಾಂಗ್ರೆಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.