ADVERTISEMENT

ಕಾಂಗ್ರೆಸ್‌: ಮಹಿಳಾ ಬ್ಲಾಕ್‌ಗೆ ಅಧ್ಯಕ್ಷರ ನೇಮಕ

‌ಮಡಿಕೇರಿ: ಕಾಂಗ್ರೆಸ್‌ ಬಲವರ್ಧನೆಗೆ ಸುರಯ್ಯ ಅಬ್ರಾರ್ ಕರೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 16:28 IST
Last Updated 22 ಜನವರಿ 2020, 16:28 IST

ಮಡಿಕೇರಿ: ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಹಿಳಾ ಘಟಕದ ನೂತನ ಬ್ಲಾಕ್ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.

ಮಡಿಕೇರಿ ಬ್ಲಾಕ್ ಅಧ್ಯಕ್ಷರಾಗಿ ಟಿ.ಕೆ.ಮೀನಾಕ್ಷಿ, ಸೋಮವಾರಪೇಟೆ ಶೀಲಾ ಡಿಸೋಜ, ವಿರಾಜಪೇಟೆ ತೋರೆರ ಪೊನ್ನಕ್ಕಿ ಗಣೇಶ್, ನಾಪೋಕ್ಲು ರಾಜೇಶ್ವರಿ ಹಾಗೂ ಕುಶಾಲನಗರ ಬ್ಲಾಕ್ ಅಧ್ಯಕ್ಷರಾಗಿ ಸುನೀತಾ ಮಂಜುನಾಥ್ ಆಯ್ಕೆಯಾಗಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್‌ನ ಜಿಲ್ಲಾ ಅಧ್ಯಕ್ಷೆ ಸುರಯ್ಯ ಅಬ್ರಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ADVERTISEMENT

ಮಹಿಳಾ ಕಾಂಗ್ರೆಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಮಿನಾಜ್ ಪ್ರವೀಣ್, ಗಾಯತ್ರಿ ನರಸಿಂಹ, ಕಾರ್ಯದರ್ಶಿಯಾಗಿ ಉದಯ ಚಂದ್ರಿಕಾ, ಜುಲೆಕಾಬಿ ಹಾಗೂ ನಗರಾಧ್ಯಕ್ಷೆಯಾಗಿ ಫ್ಯಾನ್ಸಿ ಪಾರ್ವತಿ ಆಯ್ಕೆಯಾಗಿದ್ದಾರೆ. ಪ್ರೇಮಾ ಕೃಷ್ಣಪ್ಪ, ಮುಮ್ತಾಜ್ ಬೇಗಂ, ಸಿಂಧೂ ಹಾಗೂ ಮಂಜುಳಾ ಅವರನ್ನು ಜಿಲ್ಲಾ ಸಮಿತಿಗೆ ನೇಮಕ ಮಾಡಲಾಯಿತು.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ, ‘ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್, ಸ್ವಾತಂತ್ರ್ಯದ ನಂತರ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಮಹಿಳಾ ಕಾಂಗ್ರೆಸ್ಸಿಗರಿಗೆ ಆದರ್ಶವಾಗಬೇಕು. ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಮಹಿಳೆಯರು ಪ್ರಧಾನ ಪಾತ್ರ ವಹಿಸಬೇಕು. ಜನಪರ ಹೋರಾಟಗಳ ಮೂಲಕ ಗಮನ ಸೆಳೆಯಬೇಕು’ ಎಂದು ಸಲಹೆ ನೀಡಿದರು.

ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಸುರಯ್ಯ ಅಬ್ರಾರ್ ಮಾತನಾಡಿ, ‘ಮಹಿಳಾ ಬ್ಲಾಕ್ ಕಾಂಗ್ರೆಸ್‌ನ ನೂತನ ಅಧ್ಯಕ್ಷರು ಬೂತ್ ಮಟ್ಟದಿಂದಲೇ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು. ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಾ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಬೇಕು’ ಎಂದು ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ, ಸದಸ್ಯ ಟಿ.ಪಿ.ರಮೇಶ್, ಜಿಲ್ಲಾ ವಕ್ತಾರ ಟಿ.ಇ.ಸುರೇಶ್ ಉಪಸ್ಥಿತರಿದ್ದರು. ಪ್ರಮುಖರಾದ ಪ್ರೇಮಾ ಕೃಷ್ಣಪ್ಪ ಪ್ರಾರ್ಥಿಸಿದರು. ಮಿನಾಜ್ ಪ್ರವೀಣ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.