ADVERTISEMENT

‘ಸರ್ಕಾರದ ವೈಫಲ್ಯ ಮುಚ್ಚಿಹಾಕಲು ಕೋವಿಡ್‌ ನೆಪ’

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 13:55 IST
Last Updated 11 ಏಪ್ರಿಲ್ 2021, 13:55 IST
ಕುಶಾಲನಗರದಲ್ಲಿ ಕಾಂಗ್ರೆಸ್‌ ಮುಖಂಡ ಚಲುವರಾಯಸ್ವಾಮಿ ಮಾತನಾಡಿದರು
ಕುಶಾಲನಗರದಲ್ಲಿ ಕಾಂಗ್ರೆಸ್‌ ಮುಖಂಡ ಚಲುವರಾಯಸ್ವಾಮಿ ಮಾತನಾಡಿದರು   

ಕುಶಾಲನಗರ: ‘ಮತದಾರರು ಎಲ್ಲಿಯವರೆಗೆ ಮೋದಿಯನ್ನು ಅರ್ಥ ಮಾಡಿಕೊಳ್ಳದೆ ಬಿಜೆಪಿಗೆ ಮತ ಚಲಾಯಿಸುತ್ತಾರೋ ಅಲ್ಲಿಯವರೆಗೂ ದೇಶದ ಅಭಿವೃದ್ಧಿ ಅಸಾಧ್ಯ’ ಎಂದು ಮಡಿಕೇರಿ ನಗರಸಭಾ ಚುನಾವಣೆ ಉಸ್ತುವಾರಿ ಹೊತ್ತಿರುವ, ಕಾಂಗ್ರೆಸ್‌ ಮುಖಂಡ ಚಲುವರಾಯಸ್ವಾಮಿ ಹೇಳಿದರು.

‘ರಾಜ್ಯ ಮತ್ತು ಕೇಂದ್ರ ಸರ್ಕಾರ ಅಭಿವೃದ್ಧಿ ಹಿನ್ನಡೆ ವಿಚಾರವನ್ನು ಮುಚ್ಚಿಹಾಕಲು ಕೋವಿಡ್‌ನ ಕುಂಟುನೆಪ ಹೇಳುತ್ತಿದೆ. ಎರಡು ಅವಧಿಗೆ ನರೇಂದ್ರ ಮೋದಿ ಪ್ರಧಾನಿಯಾಗಲು ಅವಕಾಶ ಕೊಟ್ಟರೂ ಅಭಿವೃದ್ಧಿಯಲ್ಲಿ ಸಾಧನೆ ಮಾತ್ರ ಶೂನ್ಯ’ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಟೀಕಿಸಿದರು.

‘ಸುದೀರ್ಘ ಕಾಲ ದೇಶ ಕಾಂಗ್ರೆಸ್‌ನ ಭದ್ರಕೋಟೆ ಆಗಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ನಮಗೆ ಹಿನ್ನಡೆ ಆಗಿರಬಹುದು. ಆದರೆ, ಮತದಾರರಿಗೆ ಬಿಜೆಪಿ ನೀಡಿರುವ ಪೊಳ್ಳು ಭರವಸೆಗಳ ಬಗ್ಗೆ ಮತ್ತು ಸರ್ಕಾರದ ವೈಫಲ್ಯ ಅರಿವಾಗಿದೆ. ಮುಂದೆ ಕಾಂಗ್ರೆಸ್ ಪರ್ವ ಆರಂಭವಾಗಲಿದೆ’ ಎಂದು ಭವಿಷ್ಯ ನುಡಿದರು.

ADVERTISEMENT

‘ಅಂಗನವಾಡಿ ಕಾರ್ಯಕರ್ತರು ಸಮಾನ ಕೆಲಸಕ್ಕೆ ಸಮಾನ ವೇತನ ಕೇಳುವಾಗ ಸಾರಿಗೆ ನೌಕರರು ಕೇಳುವುದರಲ್ಲಿ ತಪ್ಪೇನಿದೆ‌?. ನೌಕರರ ಜೊತೆ ಸರ್ಕಾರ ಸೌಜನ್ಯದಿಂದ ವರ್ತಿಸುವುದನ್ನು ಕಲಿಯಬೇಕು’ ಎಂದರು.

ಮಾಜಿ ಶಾಸಕ ವಾಸು ಮಾತನಾಡಿ, ‘ಕಾಂಗ್ರೆಸ್ ಬಡವರಿಗೆ ನೀಡಿದ್ದ ಮೀಸಲಾತಿಯನ್ನು ತೆಗೆದುಹಾಕುವ ಮೂಲಕ ಬಿಜೆಪಿ ಸರ್ಕಾರಬಡವರ ವಿರೋಧಿ ಎಂಬುದು ಬಹಿರಂಗವಾಗಿದೆ’ ಎಂದು ಹೇಳಿದರು.

‘ಕಾವೇರಿ ನದಿ ಅಭಿವೃದ್ಧಿ ಆಗಬೇಕಾದರೆ ನದಿಗೆ ಸೇರುತ್ತಿರುವ ಕಲುಷಿತ ನೀರನ್ನು ತಡೆಗಟ್ಟ‌ಬೇಕು. ಕಲುಷಿತ ನೀರನ್ನು
ಶುದ್ಧೀಕರಣಗೊಳಿಸುವ ಯೋಜನೆ ಜಾರಿಗೆ ತರಬೇಕು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್, ಮುಖಂಡರಾದ ಎಚ್.ಎಸ್.ಚಂದ್ರಮೌಳಿ, ಮಂಜುಳಾರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.