ADVERTISEMENT

ಕೋವಿಡ್: ವಿಶೇಷ ಮೀಸಲು ವಾರ್ಡ್ ಆರಂಭ

ಇಂದಿನಿಂದ ಪರೀಕ್ಷೆ ನಿರೀಕ್ಷೆ, ಮಾದರಿಗಳನ್ನು ಕಳುಹಿಸಬೇಕಿದೆ ಹಾಸನಕ್ಕೆ

​ಪ್ರಜಾವಾಣಿ ವಾರ್ತೆ
Published 28 ಮೇ 2025, 3:45 IST
Last Updated 28 ಮೇ 2025, 3:45 IST
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧನಾ ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ ಕೋವಿಡ್‌ ತೀವ್ರ ನಿಗಾ ಘಟಕ‌
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧನಾ ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ ಕೋವಿಡ್‌ ತೀವ್ರ ನಿಗಾ ಘಟಕ‌   

ಮಡಿಕೇರಿ: ಕೋವಿಡ್ ಪ್ರಕರಣದಲ್ಲಿ ದೇಶದಲ್ಲಿ ಹೆಚ್ಚುತ್ತಿರುವಂತೆಯೇ ಕೊಡಗಿನಲ್ಲೂ ಅಗತ್ಯ ಸಿದ್ಧತೆಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಜಂಟಿಯಾಗಿ ಮಾಡತೊಡಗಿವೆ.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆ (ಜಿಲ್ಲಾಸ್ಪತ್ರೆಯ)ಯ ಹಳೆಯ ಕಟ್ಟಡದ ವಾರ್ಡ್‌ವೊಂದನ್ನು ಕೋವಿಡ್‌ ರೋಗಿಗಳಿಗಾಗಿಯೇ ಮೀಸಲಿರಿಸಲಾಗಿದೆ. ರೋಗಿಗಳು ದಾಖಲಾದ ಕೂಡಲೇ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ನಿಯೋಜನೆ ಮಾಡಲೂ ನಿರ್ಧರಿಸಲಾಗಿದೆ.

ಸದ್ಯ, ಜಿಲ್ಲೆಯಲ್ಲಿ ಕೋವಿಡ್‌ ರೋಗಿಗಳು ಕಂಡು ಬಂದಿಲ್ಲ. ಆದಾಗ್ಯೂ ಎಲ್ಲ ಬಗೆಯ ಮುನ್ನಚ್ಚರಿಕೆಗಳನ್ನು ವಹಿಸಲಾಗುತ್ತಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಎ.ಜೆ.ಲೋಕೇಶ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಈಗಾಗಲೇ 3 ಸಾವಿರ ‍‍‍‍‍‍‍ಪಿಪಿಐ ಕಿಟ್‌ಗಳು ಹಾಗೂ 20 ಸಾವಿರ ಮಾಸ್ಕ್‌ಗಳು ಇವೆ. ಸದ್ಯ, ಯಾವುದೇ ಕೊರತೆಗಳಿಲ್ಲ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಂಗಳವಾರ ವಿಡಿಯೊ ಕಾನ್ಫರೆನ್ಸ್‌ ನಡೆಸಿ ಸಲಹೆ, ಸೂಚನೆಗಳನ್ನು ನೀಡಿದೆ. ಶಾಸಕ ಡಾ.ಮಂತರ್‌ಗೌಡ ಸಹ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕೈಗೊಂಡಿರುವ ಕ್ರಮಗಳನ್ನು ಕುರಿತು ಪರಿಶೀಲನೆ ನಡೆಸಿದರು.

ಪ‍ರೀಕ್ಷಾ ಕೇಂದ್ರ ಬದಲು

ಶಂಕಿತ ಕೋವಿಡ್ ರೋಗಿಗಳಿಂದ ಮೂಗು ಮತ್ತು ಗಂಟಲು ದ್ರವವನ್ನು ಪರೀಕ್ಷಿಸುವ ಕೇಂದ್ರವನ್ನು ಹಾಸನಕ್ಕೆ ಬದಲಿಸಲಾಗಿದೆ. ಈ ಮೊದಲು ಮಂಗಳೂರು ಕೇಂದ್ರಕ್ಕೆ ಕಳುಹಿಸಬೇಕಿತ್ತು. ಆರ್‌ಟಿಪಿಸಿಆರ್‌ ಕಿಟ್‌ಗಳು ಬುಧವಾರ ಜಿಲ್ಲೆಗೆ ಬರುವ ನಿರೀಕ್ಷೆ ಇದ್ದು, ಪರೀಕ್ಷೆ ಆರಂಭವಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಗಮನ ಸೆಳೆದಿದ್ದ ‘ಪ್ರಜಾವಾಣಿ’

ಪಕ್ಕದ ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದಾಗ್ಯೂ ಜಿಲ್ಲೆಯಲ್ಲಿ ಕೋವಿಡ್‌ಗೆಂದೇ ವಿಶೇಷ ವಾರ್ಡ್ ತೆರೆಯದಿರುವ ಕುರಿತು ‘ಪ‍್ರಜಾವಾಣಿ’ ಮೇ 26ರಂದು ‘ನಮ್ಮ ಜನ ನಮ್ಮ ಧ್ವನಿ’ ಅಂಕಣದಲ್ಲಿ ಗಮನ ಸೆಳೆದಿತ್ತು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧನಾ ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ ಕೋವಿಡ್‌ ತೀವ್ರ ನಿಗಾ ಘಟಕವನ್ನು ಸಿದ್ಧಪಡಿಸಿರುವುದು
ಮೇ 26ರಂದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.