ADVERTISEMENT

ಮಡಿಕೇರಿ ದಸರಾ | ಬೆಳಕಿನ ಹಣತೆಗಳಂತೆ ತೇಲಿದ ಮಂಟಪಗಳು

ಕೆ.ಎಸ್.ಗಿರೀಶ್
Published 25 ಅಕ್ಟೋಬರ್ 2023, 5:08 IST
Last Updated 25 ಅಕ್ಟೋಬರ್ 2023, 5:08 IST
ಕಾಲೇಜು ರಸ್ತೆಯಲ್ಲಿ ಮಂಗಳವಾರ ಸೇರಿದ್ದ ಅಪಾರ ಜನಸ್ತೋಮ
ಕಾಲೇಜು ರಸ್ತೆಯಲ್ಲಿ ಮಂಗಳವಾರ ಸೇರಿದ್ದ ಅಪಾರ ಜನಸ್ತೋಮ   

ಮಡಿಕೇರಿ: ನಗರದ ರಸ್ತೆಗಳಲ್ಲಿ ಮಂಗಳವಾರ ರಾತ್ರಿ ಬೆಳಕಿನ ಹಣತೆಗಳಂತೆ ತೇಲಿದ ದಶಮಂಟಪಗಳ ಅಂದವನ್ನು ಲಕ್ಷಾಂತರ ಮಂದಿ ಕಣ್ತುಂಬಿಕೊಂಡರು.

ಪ್ರವಾಹವೇ ನುಗ್ಗಿ ಬಂದಂತೆ ಮೈಸೂರು ದಸರೆ ಮುಗಿದ ಬಳಿಕ ಜನರು ತಂಡೋಪತಂಡವಾಗಿ ನಗರಕ್ಕೆ ಬಂದರು. ಎಲ್ಲಿ ನೋಡಿದರೂ ಅಲ್ಲಿ ಜನರೇ ಕಾಣುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಸಂಜೆಯಿಂದಲೇ ನಗರದೊಳಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದ್ದರೂ, ಅಪಾರ ಜನಸಂದಣಿಯ ಮಧ್ಯೆ ನಡೆದಾಡುವುದೇ ಕಷ್ಟಕರವಾಗಿ ಪರಿಣಮಿಸಿತ್ತು.

ಮಂಟಪಗಳಲ್ಲಿನ ಆಕೃತಿಗಳ ಚಲನವಲನದ ಚಮತ್ಕಾರಕ್ಕೆ ಅಪಾರ ಜನಸ್ತೋಮ ತಲೆದೂಗಿದರು. ಅಪೂರ್ವವಾದ ಬೆಳಕಿನ ವಿನ್ಯಾಸ, ವಿಸ್ಮಯಗೊಳಿಸುವ ಕಥಾಹಂದರ, ನೋಡಿದರೆ ನೋಡುತ್ತಲೇ ಇರಬೇಕೆನ್ನುವಂತೆ ಮಾಡಿತು.

ಮೊದಲಿಗೆ ಪೇಟೆ ಶ್ರೀರಾಮಮಂದಿರದ ಮಂಟಪವು ‘ವೈಕುಂಠ ದರ್ಶನ’ ಕಥಾವಸ್ತುವನ್ನು ಪ್ರದರ್ಶಿಸುತ್ತಾ ಸಾಗಿತು. ಕಾಲೇಜು ರಸ್ತೆಯಲ್ಲಿ ಈ ಅಪೂರ್ವ ದೃಶ್ಯವನ್ನು ಹಲವು ಮಂದಿ ಮನದಣಿಯೇ ನೋಡಿದರು.

ADVERTISEMENT

ನಂತರ, ದೇಚೂರು ಶ್ರೀರಾಮಮಂದಿರವು ‘ಮಧು ಕೈಟಬರ ವಧಾ’ ಪ್ರಸಂಗ, ದಂಡಿನ ಮಾರಿಯಮ್ಮ ದೇಗುಲ ಮಂಟಪ‍ವು ‘ಪರಶಿವನಿಂದ ಜಲಂಧರನ ಸಂಹಾರ’ದ ಕಥಾನಕ,  ಚೌಡೇಶ್ವರಿ ದೇಗುಲದ ಮಂಟಪವು ‘ಶ್ರೀ ಕಟೀಲ್ ಕ್ಷೇತ್ರ ಮಹಾತ್ಮೆ’ಯನ್ನು ಪ್ರದರ್ಶಿಸಿದವು.

ಕಂಚಿ ಕಾಮಾಕ್ಷಿ ದೇಗುಲ ಮಂಟಪವು ‘ಶಿವನಿಂದ ತ್ರಿಪುರಾಸುರರ ವಧಾ’ ಪ್ರಸಂಗ, ಚೌಟಿ ಮಾರಿಯಮ್ಮ ದೇಗುಲದ ಮಂಟಪವು ‘ಕದಂಬ ಕೌಶಿಕೆ’ಯ ಕಥೆ, ಕೋದಂಡರಾಮ ದೇಗುಲವು ಮಣಿಕಂಠನಿಂದ ಮಹಿಷಿಯ ಶಾಪ ವಿಮೋಚನಾ ಪ್ರಸಂಗವನ್ನು ಅದ್ದೂರಿಯಾಗಿ ಪ್ರದರ್ಶಿಸಿ ಗಮನ ಸೆಳೆದವು.

ಕೋಟೆ ಮಾರಿಯಮ್ಮ ದೇಗುಲ ಮಂಟಪವು ಪಂಚಮುಖಿ ಆಂಜನೇಯನಿಂದ ಅಹಿರಾವಣ ಮಹಿರಾವಣರ ಸಂಹಾರ ಕಥಾವಸ್ತುವನ್ನು, ಕೋಟೆ ಗಣಪತಿ ದೇಗುಲವು ‘ಮಹಾ ಗಣಪತಿಯಿಂದ ಶತಮಾಹಿಷೆಯ ಸಂಹಾರ’ ಕಥಾ ವಸ್ತು, ಕರವಲೆ ಭಗವತಿ ದೇಗುಲವು ‘ಉಗ್ರ ನರಸಿಂಹನಿಂದ ಹಿರಣ್ಯಕಶ್ಯಪು ಸಂಹಾರ’ ಕಥಾವಸ್ತುವನ್ನು ತಮ್ಮ ತಮ್ಮ ಮಂಟಪಗಳಲ್ಲಿ ಪ್ರದರ್ಶಿಸಿ ಜನಮಾನಸವನ್ನು ಸೂರೆಗೈದವು.

ಗಾಂಧಿ ಮೈದಾನ, ಆಂಜನೇಯ ದೇವಾಲಯ, ಕೊಡವ ಸಮಾಜದ ಮುಂಭಾಗ, ಹೋಟೆಲ್ ಪಾಪ್ಯೂಲರ್ ಮುಂಭಾಗ, ವಿನೋದ್ ಮೆಡಿಕಲ್ಸ್ ಬಳಿ, ಕಾವೇರಿ ಕಲಾಕ್ಷೇತ್ರದ ಮುಂಭಾಗ, ಮೆಟ್ರೊ ಫ್ರೆಷ್ ಸಮೀಪ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗ, ನಗರ ಪೊಲೀಸ್ ಠಾಣೆ ಮುಂಭಾಗ, ಸಿಂದೂರ್ ಬಟ್ಟೆ ಮಳಿಗೆ ಮುಂಭಾಗ ಸೇರಿದಂತೆ ನಗರದ ಹಲವೆಡೆ ದಶಮಂಟಪಗಳು ತಮ್ಮ ತಮ್ಮ ಪ್ರದರ್ಶನಗಳ ರಸದೌತಣವನ್ನೇ ನೋಡಗರಿಗೆ ಉಣಬಡಿಸಿದವು.

ಎಲ್ಲೆಡೆ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಕೆಲವೆಡೆ ಪೊಲೀಸರು ಅಟ್ಟಣಿಗೆಯಲ್ಲಿ, ಕಟ್ಟಡಗಳ ಮೇಲ್ಭಾಗದಲ್ಲಿ ಹದ್ದಿನ ಕಣ್ಣಿಟ್ಟಿದ್ದು ಕಂಡು ಬಂತು.

ಇದಕ್ಕೂ ಮುನ್ನ ನಗರದ ಕೋಟೆ ಗಣಪತಿ, ಕೋಟೆ ಮಾರಿಯಮ್ಮ, ಕೋದಂಡ ರಾಮ, ಪೇಟೆ ಶ್ರೀ ರಾಮ ಮಂದಿರಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಶಾಸಕ ಡಾ.ಮಂತರ್‌ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಹಾಗೆಯೇ ಮಂಟಪಗಳನ್ನು ವೀಕ್ಷಿಸಿದರು.

ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಸಹ ದಶಮಂಟಪಗಳ ಶೋಭಾಯಾತ್ರೆಯ ವೈಭವವನ್ನು ವೀಕ್ಷಿಸಿದರು.

ಮಡಿಕೇರಿಯಲ್ಲಿ ಕೋಟೆ ಮಹಾಗಣಪತಿಯ ಮಂಟಪ‍ವನ್ನು  ಜನರು ವೀಕ್ಷಿಸಿದರು
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಮಡಿಕೇರಿಯಲ್ಲಿನ ದಶಮಂಟಪಗಳನ್ನು ಮಂಗಳವಾರ ವೀಕ್ಷಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.