ADVERTISEMENT

ಮಡಿಕೇರಿ | 'ಬೇಡಿಕೆ ಈಡೇರಿಕೆಗೆ ಶಾಸಕರನ್ನು ಭೇಟಿ ಮಾಡಲು ನಿರ್ಧಾರ'

ಅನುದಾನಿತ ಶಾಲೆಗಳ ಸುಮಾರು 112 ಮಂದಿ ಶಿಕ್ಷಕರು ಸಭೆಯಲ್ಲಿ ಭಾಗಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 4:26 IST
Last Updated 15 ಜೂನ್ 2025, 4:26 IST
ಮಡಿಕೇರಿಯ ಸಂತ ಮೈಕಲರ ಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆದ ಅನುದಾನಿತ ಪ್ರೌಢಶಾಲಾ ಕಾಲೇಜು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ನಾಗರಾಜು ಮಾತನಾಡಿದರು
ಮಡಿಕೇರಿಯ ಸಂತ ಮೈಕಲರ ಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆದ ಅನುದಾನಿತ ಪ್ರೌಢಶಾಲಾ ಕಾಲೇಜು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ನಾಗರಾಜು ಮಾತನಾಡಿದರು   

ಮಡಿಕೇರಿ: ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಾಸಕರನ್ನು, ಜಿಲ್ಲಾಧಿಕಾರಿಯನ್ನು ಭೇಟಿ ಮಾಡಲು ಹಾಗೂ ಸರ್ಕಾರಕ್ಕೆ ಪತ್ರ ಬರೆಯಲು ಇಲ್ಲಿನ ಸಂತ ಮೈಕಲರ ಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆದ ಅನುದಾನಿತ ಪ್ರೌಢಶಾಲಾ ಕಾಲೇಜು ನೌಕರರ ಸಂಘದ ಸಭೆ ನಿರ್ಧರಿಸಿತು.

ಒಂದು ವೇಳೆ ಬೇಡಿಕೆಗಳು ಈಡೇರಿಕೆಗೆ ಸ್ಪಂದನೆ ಸಿಗದೇ ಹೋದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಕುರಿತು ರಾಷ್ಟ್ರಪತಿಗೆ ಏಕೆ ಪತ್ರ ಬರೆಯಬಾರದು ಎನ್ನುವ ಕುರಿತೂ ಚರ್ಚೆ ನಡೆಯಿತು.

ಜಿಲ್ಲೆಯ ಅನುದಾನಿತ ಶಾಲೆಗಳ ಸುಮಾರು 112 ಮಂದಿ ಶಿಕ್ಷಕರು, ನೌಕರರು ಈ ಸಭೆಯಲ್ಲಿ ಭಾಗವಹಿಸಿದ್ದರು.

ADVERTISEMENT

ಈಗಾಗಲೇ ವೇತನ ತಾರತಮ್ಯ ಸೇರಿದಂತೆ ಹಲವು ಸಮಸ್ಯೆಗಳಿಂದ ಹಾಗೂ ತಾರತಮ್ಯಕ್ಕೆ ಒಳಗಾಗಿರುವ ಅನುದಾನಿತ ಶಾಲೆಗಳ ಶಿಕ್ಷಕರ ವೃತ್ತಿ ಬದುಕು ಅಪಾಯದಂಚಿನಲ್ಲಿ ಸಿಲುಕಿರುವ ಕುರಿತು ಹಲವು ಮಂದಿ ತಮ್ಮ ಆತಂಕವನ್ನು ಹೊರಹಾಕಿದರು.

ರಾಜ್ಯದಲ್ಲಿ ಕೊಡಗು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ಅನುದಾನಿತ ಶಾಲೆಗಳ ಕೊಡುಗೆಯೂ ಕಾರಣವಾಗಿವೆ ಎಂದು ಸಭೆ ಪ್ರತಿಪಾದಿಸಿತು.

ಮುಂಬರುವ ದಿನಗಳಲ್ಲಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಾಸಕರಿಗೆ, ಜಿಲ್ಲಾಧಿಕಾರಿಗೆ ಹಾಗೂ ಸರ್ಕಾರಕ್ಕೆ ಪತ್ರ ಬರೆಯಲು ಸಭೆ ನಿರ್ಧರಿಸಿತು.

ಸಂಘದ ಅಧ್ಯಕ್ಷ ಪ್ರಭುಕುಮಾರ್, ಪ್ರಧಾನ ಕಾರ್ಯದರ್ಶಿ ಎಸ್‌.ನಾಗರಾಜು, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಶಿವಪ್ರಕಾಶ್, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ವೆಂಕಟ್‌ನಾಯಕ, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಗಿಡ್ಡಯ್ಯ, ಸಹಶಿಕ್ಷಕ ಸಂಘದ ಅಧ್ಯಕ್ಷ ರವಿಕೃಷ್ಣ, ಉಪಾಧ್ಯಕ್ಷ ಮೆಹಬೂಬ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್‌.ಜಿ.ಕುಮಾರ್ ಭಾಗವಹಿಸಿದ್ದರು.

ವಿರಾಜಪೇಟೆಯ 15, ಸೋಮವಾರಪೇಟೆಯಲ್ಲಿ 13, ಮಡಿಕೇರಿಯಲ್ಲಿ 8ಕ್ಕೂ ಅಧಿಕ ಅನುದಾನಿತ ಶಾಲೆಗಳಿದ್ದು, ಅವುಗಳಲ್ಲಿ 300–400 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ.

ಮೂರು ತಾಲ್ಲೂಕುಗಳಿಂದ 26 ಅನುದಾನಿತ ಶಾಲೆಗಳು 300–400 ನೌಕರರು ಕಾರ್ಯನಿರ್ವಹಣೆ

ನಾವು ಯಾವುದೇ ಅಧಿಕಾರಿಯನ್ನಾಗಲಿ ಅಥವಾ ಸರ್ಕಾರವನ್ನಾಗಲೀ ದೂಷಿಸುತ್ತಿಲ್ಲ. ನಾವು ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆ

-ಎಸ್‌.ನಾಗರಾಜು ಅನುದಾನಿತ ಪ್ರೌಢಶಾಲಾ ಕಾಲೇಜು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ

ಮುಚ್ಚುತ್ತಿರುವ ಶಾಲೆಗಳ ಕುರಿತು ಸಭೆ ಕಳವಳ ಅನುದಾನಿತ ಶಾಲೆಗಳ ಶಿಕ್ಷಕರು ನೌಕರರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತ ಚರ್ಚೆ ಸಭೆಯಲ್ಲಿ ನಡೆಯಿತು. ಮುಖ್ಯವಾಗಿ ಅನುದಾನಿತ ಶಾಲೆಗಳು ಮುಚ್ಚುತ್ತಿರುವ ಕುರಿತು ಸಭೆ ತೀವ್ರ ಕಳವಳ ವ್ಯಕ್ತಪಡಿಸಿತು. ನಾಡಿನ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣ ನೀಡುವಿಕೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಅನದಾನಿತ ಶಾಲೆಗಳು ಇಂದು ವಿದ್ಯಾರ್ಥಿಗಳ ಕೊರತೆಯಿಂದ ಬಾಗಿಲು ಮುಚ್ಚುವಂತಹ ಸ್ಥಿತಿಗೆ ತಲುಪಿವೆ. ಇಲ್ಲಿ ಕೆಲಸ ಮಾಡುತ್ತಿರುವ ನೌಕರರ ಬದುಕು ಈಗ ಬೀದಿಗೆ ಬರುವಂತಾಗಿದೆ ಎಂದು ಸಭೆ ತನ್ನ ಅಸಮಾಧಾನ ಹೊರಹಾಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.