ಸಿದ್ದಾಪುರ: ಸಾಂಕ್ರಾಮಿಕ ರೋಗ ಹರಡುವ ಮುನ್ನವೇ ಕಸವಿಲೇವಾರಿ ಮಾಡಬೇಕೆಂದು ಸಿ.ಪಿ.ಐ.ಎಂ ಪಕ್ಷದ ಮುಖಂಡರಾದ ಡಾ.ಐ.ಆರ್ ದುರ್ಗಾಪ್ರಸಾದ್ ಒತ್ತಾಯಿಸಿದರು.
ಸಿ.ಪಿ.ಐ(ಎಂ) ಪಕ್ಷದಿಂದ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಸಿದ್ದಾಪುರ ಪಂಚಾಯಿತಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
‘ಸಿದ್ದಾಪುರದಲ್ಲಿ ಸೂಕ್ತ ಕಸವಿಲೇವಾರಿಯಾಗದೇ ಗ್ರಾಮಕ್ಕೆ ಬರುವವರನ್ನು ಕಸದ ರಾಶಿಗಳು ಸ್ವಾಗತಿಸುತ್ತಿವೆ. ಪಟ್ಟಣದ ವಿವಿಧ ಭಾಗಗಳಲ್ಲಿ ಕಸದ ರಾಶಿ ತುಂಬಿದ್ದು, ದುರ್ನಾತ ಬೀರುತ್ತಿದೆ. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಇದೆ. ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ವಹಿಸುತ್ತಿದೆ. ಗ್ರಾ.ಪಂ ಸಮರ್ಪಕವಾಗಿ ಕಸ ವಿಲೇವಾರಿ ಮಾಡಬೇಕು. ಕೆಲ ಸದಸ್ಯರು ತಮ್ಮ ಸ್ವಾರ್ಥಕ್ಕೆ ಕೆಲಸ ಮಾಡುತ್ತಿದ್ದು, ಪಂಚಾಯಿತಿ ಜನತೆಗೆ ಮೂಲ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿದೆ’ ಎಂದು ಆರೋಪಿಸಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಹೆಚ್.ಬಿ ರಮೇಶ್ ಮಾತನಾಡಿ, ಗ್ರಾ.ಪಂ. ನಿರ್ಲಕ್ಷ್ಯದಿಂದ ಪಟ್ಟಣದಲ್ಲಿ ಕಸದ ರಾಶಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಈ ಭಾಗದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನತೆ ಸಂಕಷ್ಟದಲ್ಲಿದ್ದಾರೆ. ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಬೇಕು. 2019ರ ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಈವರೆಗೂ ನಿವೇಶನ ನೀಡಿಲ್ಲ. ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಅನಿಲ್ ಕುಟ್ಟಪ್ಪ ಮಾತನಾಡಿ, ‘ಒಬ್ಬ ನೀರುಗಂಟಿ ಇಡೀ ಪಂಚಾಯಿತಿಯನ್ನು ನಿಯಂತ್ರಿಸುತ್ತಿದ್ದಾರೆ. ಗ್ರಾ.ಪಂ ಕೆಲ ಸದಸ್ಯರು ತಮ್ಮ ಲಾಭಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಕಾಲಹರಣ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರಾದ ಎನ್.ಡಿ ಕುಟ್ಟಪ್ಪನ್, ಅಬ್ದುಲ್ ರೆಹಮಾನ್, ವೈಜು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.