ಮಡಿಕೇರಿ: ಜಾತಿವಾರು ಜನಗಣತಿಯಲ್ಲಿ ಕೊಡವರಿಗಾಗಿಯೇ ಪ್ರತ್ಯೇಕ ‘ಕೋಡ್’ ಮತ್ತು ‘ಕಲಂ’ ಹಾಗೂ ಮುಂಬರುವ ಕ್ಷೇತ್ರ ಪುನರ್‌ವಿಂಗಡನೆಯ ವೇಳೆ ಕೊಡವರಿಗಾಗಿಯೇ ಪ್ರತ್ಯೇಕ ಸಂಸದೀಯ ಮತ್ತು ವಿಧಾನಸಭಾ ಸ್ಥಾನಗಳಿಗೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ನಡೆಸುತ್ತಿರುವ ಮಾನವ ಸರಪಳಿ ಸೋಮವಾರ ಪೊನ್ನಂಪೇಟೆಯಲ್ಲಿ ನಡೆಯಿತು. ಇದುವರೆಗೂ ಈ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಎನ್‌ಸಿ ಬಿರುನಾಣಿ, ಕಡಂಗ, ಕಕ್ಕಬ್ಬೆ, ಟಿ.ಶೆಟ್ಟಿಗೇರಿ, ಬಾಳೆಲೆಯಲ್ಲಿ ಮಾನವ ಸರಪಳಿ ರಚಿಸಿದೆ.
ಪೊನ್ನಂಪೇಟೆಯಲ್ಲಿ ಮಾನವ ಸರಪಳಿ ರಚಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ‘ಜಾತಿಗಣತಿ ವೇಳೆ ಕೊಡವರಿಗೆ ಪ್ರತ್ಯೇಕ ಕೋಡ್ ಮತ್ತು ಕಲಂಅನ್ನು ಅಳವಡಿಸಬೇಕು. ಇದರಿಂದ ಸೂಕ್ಷ್ಮಾತಿಸೂಕ್ಷ್ಮ ಸಮುದಾಯ ಎನಿಸಿದ ಕೊಡವರ ಉಳಿವಿಗೆ ಸಹಕಾರಿಯಾಗುತ್ತದೆ’ ಎಂದು ಪ್ರತಿಪಾದಿಸಿದರು.
ಸಿಕ್ಕಿಂ ವಿಧಾನಸಭೆಯಲ್ಲಿ ಬೌದ್ಧ ಸನ್ಯಾಸಿಗಳಿಗಾಗಿಯೇ ‘ಸಂಘ’ ಎಂಬ ಮತಕ್ಷೇತ್ರ ನೀಡಲಾಗಿದೆ. ಇದೇ ರೀತಿ ಕೊಡವರಿಗಾಗಿಯೇ ಪ್ರತ್ಯೇಕವಾದ ಅಮೂರ್ತ ಮತ್ತು ವಿಶೇಷವಾದ ಸಂಸದೀಯ ಮತ್ತು ವಿಧಾನಸಭಾ ಸ್ಥಾನಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಕೊಡಗಿನಲ್ಲಿ ಇಂದು ನಗರೀಕರಣ ಮತ್ತು ಭೂ ಪರಿವರ್ತನೆ ಹೆಚ್ಚಿದೆ. ಎಲ್ಲೆಂದರಲ್ಲಿ ರೆಸಾರ್ಟ್‌ಗಳು ಸ್ಥಾಪನೆಯಾಗುತ್ತಿವೆ. ಹೊರಗಿನ ಹೂಡಿಕೆದಾರರನ್ನು ಆಕರ್ಷಿಸುವ ಕೆಲಸ ನಡೆಯುತ್ತಿದೆ. ಇಲ್ಲಿ ಕೊಡವರು ಸುರಕ್ಷಿತ ಆಗಬೇಕಾದರೆ ಕೊಡವ ಲ್ಯಾಂಡ್‌ಗೆ ಪೂರಕವಾದ ಜಾತಿಗಣತಿ ಸಹಕಾರಿಯಾಗಿದೆ ಎಂದು ಪ್ರತಿಪಾದಿಸಿದರು.
ಕೊಡವ ಸಮುದಾಯವು ಆದಿಮಸಂಜಾತ ಏಕ-ಜನಾಂಗೀಯ ಎಂಬುದನ್ನು ಯಾರೂ ಮರೆಯಬಾರದು. ಇಂತಹ ಕೊಡವರಿಗೆ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸ್ವ-ಆಡಳಿತ ಮತ್ತು ಸ್ವ-ನಿರ್ಣಯದ ಹಕ್ಕುಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಸೂರ್ಯ-ಚಂದ್ರ, ಗುರು-ಕಾರೋಣ, ಪವಿತ್ರ ಸಂವಿಧಾನ, ಜಲದೇವಿ ಕಾವೇರಿ, ಭೂ ದೇವಿ ಮತ್ತು ಪ್ರಕೃತಿ ದೇವಿಯ ಹೆಸರಿನಲ್ಲಿ ಬೇಡಿಕೆಗಳನ್ನು ಬೆಂಬಲಿಸುವ ಕುರಿತು ಪ್ರತಿಜ್ಞೆ ಸ್ವೀಕರಿಸಿದರು.
ಮುಂದಿನ ಮಾನವ ಸರಪಳಿ ಕಾರ್ಯಕ್ರಮವು ಜುಲೈ 7ರಂದು ನಾಪೋಕ್‌ನಲ್ಲಿ ನಡೆಯಲಿದೆ ಎಂದು ನಾಚಪ್ಪ ಪ್ರಕಟಿಸಿದರು.
ಮುಖಂಡರಾದ ರೇಖಾ ನಾಚಪ್ಪ, ಮತ್ರಂಡ ರಾಣಿ ರಾಜೇಂದ್ರ, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಬೊಟ್ಟಂಗಡ ಗಿರೀಶ್, ಅಪ್ಪೆಂಗಡ ನಾಲೆ, ಅಜ್ಜಿಕುಟ್ಟಿರ ಲೋಕೇಶ್, ಕಿರಿಯಮಾಡ ಶೆರಿನ್, ಕಾಂಡೇರ ಸುರೇಶ್, ಚೊಟ್ಟೆಯಂಡಮಾಡ ಉದಯ, ಮಾಣಿರ ಸಂಪತ್, ಆಲೆಮಾಡ ರೋಷನ್, ಚೇಂದಿರ ಅಪ್ಪಯ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.