ADVERTISEMENT

ಮಡಿಕೇರಿ | ಸಾಲ ನೀಡಿಕೆಯಲ್ಲಿ ಶೇ 104ರಷ್ಟು ಪ್ರಗತಿ: ಗಂಗಾಧರ ನಾಯಕ

ಬ್ಯಾಂಕಿಂಗ್‌ ವಲಯದ ಜಿಲ್ಲಾಮಟ್ಟದ ಸಲಹಾ ಸಮಿತಿ ಹಾಗೂ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 14:48 IST
Last Updated 21 ಜೂನ್ 2025, 14:48 IST
ಮಡಿಕೇರಿಯ ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬ್ಯಾಂಕಿಂಗ್‌ ವಲಯದ ಜಿಲ್ಲಾಮಟ್ಟದ ಸಲಹಾ ಸಮಿತಿ ಹಾಗೂ ಪ್ರಗತಿ ಪರಿಶೀಲನಾ ಸಭೆ ನಡೆಸಿದರು
ಮಡಿಕೇರಿಯ ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬ್ಯಾಂಕಿಂಗ್‌ ವಲಯದ ಜಿಲ್ಲಾಮಟ್ಟದ ಸಲಹಾ ಸಮಿತಿ ಹಾಗೂ ಪ್ರಗತಿ ಪರಿಶೀಲನಾ ಸಭೆ ನಡೆಸಿದರು   

ಮಡಿಕೇರಿ: ಕೊಡಗು ಜಿಲ್ಲಾ ಲೀಡ್‌ ಬ್ಯಾಂಕಿನ ವಾರ್ಷಿಕ ಸಾಲ ಮಂಜೂರಾತಿ ಕ್ಷೇತ್ರವು ಗುರಿ ಮೀರಿದ ಸಾಧನೆ ಮಾಡಿದೆ. ಶೇ 104ರಷ್ಟು ಪ್ರಗತಿ ಸಾಧಿಸಿರುವುದು ಮಾತ್ರವಲ್ಲ ಪ್ರಸಕ್ತ ಸಾಲಿಗೆ ಶೇ 16ರಷ್ಟು ಹೆಚುವರಿ ಗುರಿ ನಿಗದಿಪಡಿಸಿಕೊಂಡಿದೆ.

ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನಡೆಸಿದ ಬ್ಯಾಂಕಿಂಗ್‌ ವಲಯದ ಜಿಲ್ಲಾಮಟ್ಟದ ಸಲಹಾ ಸಮಿತಿ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಅಂಶಗಳು ಕಂಡ ಬಂದವು. ಲೀಡ್ ಬ್ಯಾಂಕಿನ ವ್ಯವಸ್ಥಾಪಕರಾದ ಗಂಗಾಧರ ನಾಯಕ ಅವರು ಒಟ್ಟು ಜಿಲ್ಲೆಯ ಬ್ಯಾಂಕಿನ ಚಿತ್ರಣವನ್ನು ಸಭೆಯ ಮುಂದಿಟ್ಟರು.

ಕಳೆದ ಸಾಲಿನಲ್ಲಿ ಒಟ್ಟು ₹ 6,593.84 ಕೋಟಿ ಸಾಲ ನೀಡಿಕೆ ಗುರಿ ಹೊಂದಲಾಗಿತ್ತು. ಮಾರ್ಚ್ ಅಂತ್ಯಕ್ಕೆ 6,903.25 ಸಾಲವನ್ನು ವಿವಿಧ ಕ್ಷೇತ್ರಗಳಲ್ಲಿ ವಿತರಿಸಲಾಯಿತು. ಒಟ್ಟಾರೆ, ಶೇ 104ರಷ್ಟು ಪ್ರಗತಿ ಸಾಧಿಸಿದ್ದೇವೆ ಎಂದು ಹೇಳಿದರು.

ADVERTISEMENT

ಕೃಷಿ ಕ್ಷೇತ್ರದಲ್ಲಿ ಶೇ 99.36ರಷ್ಟು ಪ್ರಗತಿ ಸಾಧಿಸಿದ್ದರೆ, ಶಿಕ್ಷಣ ಕ್ಷೇತ್ರದಲ್ಲಿ ಶೇ 101ರಷ್ಟು ಪ್ರಗತಿ ಸಾಧಿಸಲಾಗಿದೆ. ಆದ್ಯತೇತರ ವಲಯದಲ್ಲಿ ಶೇ 117ರಷ್ಟು ಪ್ರಗತಿ ದಾಖಲಾಗಿದೆ. ಆದರೆ, ವಸತಿ ಕ್ಷೇತ್ರದಲ್ಲಿ ಶೇ 74ರಷ್ಟು ಪ್ರಗತಿ ಹೊಂದಲಾಗಿದೆ ಎಂದು ಅವರು ಅಂಕಿ ಅಂಶಗಳನ್ನು ಪ್ರಸ್ತಾಪಿಸಿದರು.

ಪ್ರಸಕ್ತ ಸಾಲಿಗೆ ಒಟ್ಟು ₹ 7,680.10 ಕೋಟಿಯಷ್ಟು ಸಾಲ ನೀಡಿಕೆಯ ಗುರಿ ಹೊಂದಲಾಗಿದೆ. ಈ ವರ್ಷದ ಪ್ರಗತಿ ಗಮನಿಸಿದರೆ ಒಟ್ಟಾರೆ ಶೇ 16ರಷ್ಟು ಹೆಚ್ಚು ಗುರಿ ಇಟ್ಟುಕೊಳ್ಳಲಾಗಿದೆ ಎಂದರು.

ಪ್ರಸಕ್ತ ಸಾಲಿಗೆ ವಸತಿ ಕ್ಷೇತ್ರದಲ್ಲಿ ಶೇ 48.58, ಶಿಕ್ಷಣ ಕ್ಷೇತ್ರದಲ್ಲಿ ಶೇ 42.24ರಷ್ಟು ಹೆಚ್ಚುವರಿ ಗುರಿ ಹೊಂದಲಾಗಿದೆ. ಕೃಷಿ ವಲಯಕ್ಕೆ ಶೇ 9.75ರಷ್ಟು ಹೆಚ್ಚು ಸಾಲ ನೀಡುವ ಗುರಿ ಇದೆ ಎಂದು ಹೇಳಿದರು.

ಆರ್‌ಬಿಐ ಅಧಿಕಾರಿ ಸೂರಜ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯ ವಲಯ ಮುಖ್ಯಸ್ಥರಾದ ಅರುಣ್ ಕುಲಕರ್ಣಿ, ಕರ್ನಾಟಕ ಗ್ರಾಮೀಣ ಬ್ಯಾಂಕಿನ ವಲಯ ಮುಖ್ಯಸ್ಥ ಉದಯಕುಮಾರ, ಎಸ್‌ಬಿಐ ಹೇಮಂತ್‌ ಅಧಿಕಾರಿ, ಕರ್ನಾಟಕ ಬ್ಯಾಂಕಿನ ಅರುಣ್‌ಕುಮಾರ್, ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ನಾಯಕ, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧಿಕಾರಿ ರಮೇಶ್ ಬಾಬು ಇತರ 23 ಬ್ಯಾಂಕಿನ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಭಾಗವಹಿಸಿದ್ದರು.

ಮಡಿಕೇರಿಯ ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನಡೆಸಿದ ಬ್ಯಾಂಕಿಂಗ್‌ ವಲಯದ ಜಿಲ್ಲಾಮಟ್ಟದ ಸಲಹಾ ಸಮಿತಿ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಹಾಗೂ ವಿವಿಧ ಬ್ಯಾಂಕಿನ ಅಧಿಕಾರಿಗಳು ಭಾಗವಹಿಸಿದ್ದರು

Highlights - ಶಿಕ್ಷಣ ಸಾಲಕ್ಕೆ ಹೆಚ್ಚಿನ ಆದ್ಯತೆ ನೀಡಲು ಸೂಚನೆ ವಿವಿಧ ವಲಯಗಳ ಪ್ರಗತಿ ಪರಿಶೀಲಿಸಿದ ಸಂಸದ ಎಲ್ಲ ಬ್ಯಾಂಕಿನ ಅಧಿಕಾರಿಗಳೂ ಸಭೆಯಲ್ಲಿ ಭಾಗಿ

Cut-off box - ಹಣಕಾಸು ಸಾಕ್ಷರತೆ ಮೂಡಿಸಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ ‘ಕೊಡಗು ಜಿಲ್ಲೆಯಲ್ಲಿ ಜನರಲ್ಲಿ ಹಣಕಾಸು ಸಾಕ್ಷರತೆ ಮೂಡಿಸುವುದು ಪ್ರಮುಖ ಆದ್ಯತೆಯ ವಿಷಯವಾಗಬೇಕು’ ಎಂದು ಹೇಳಿದರು. ಪ್ರತಿಕ್ರಿಯಿಸಿದ ಲೀಡ್ ಬ್ಯಾಂಕ್ ಮ್ಯಾನೇಜರ್ ಗಂಗಾಧರನಾಯಕ ಇದಕ್ಕಾಗಿಯೇ ನಾವು ಹಣಕಾಸು ಸಾಕ್ಷರತಾ ಶಿಬಿರಗಳನ್ನು ಆಯೋಜಿಸುತ್ತಿದ್ದೇವೆ ಎಂದು ವಿವಿಧ ತಾಲ್ಲೂಕುಗಳಲ್ಲಿ ಆಯೋಜಿಸಿರುವ ಶಿಬಿರಗಳ ಸಂಖ್ಯೆಯನ್ನು ಪ್ರಸ್ತಾಪಿಸಿದರು. ಪ್ರತಿಕ್ರಿಯಿಸಿದ ಯದುವೀರ್ ಜಿಲ್ಲೆಯಲ್ಲಿ ಹಾಡಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇಲ್ಲಿರುವವರಿಗೆ ಹಣಕಾಸು ಸಾಕ್ಷರತೆ ಕಡಿಮೆ. ಇನ್ನು ಮುಂದೆ ಹಾಡಿಗಳಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಬೇಕು ಎಂದು ಸೂಚನೆ ನೀಡಿದರು. ಹಣ ಉಳಿತಾಯ ಸಾಲದ ಬಳಕೆ ಬ್ಯಾಂಕ್ ಖಾತೆ ತೆರೆಯುವ ಕುರಿತು ಮಾತ್ರವಲ್ಲ ಬಹಳ ಮುಖ್ಯವಾಗಿ ಇಂದು ನಡೆಯುತ್ತಿರುವ ಡಿಜಿಟಲ್ ವಂಚನೆ ಕುರಿತೂ ಶಿಬಿರದಲ್ಲಿ ಅರಿವು ಮೂಡಿಸಬೇಕು ಎಂದು ನಿರ್ದೇಶನ ನೀಡಿದರು.

Cut-off box - ‘ಕನ್ನಡ ಕಲಿಯಿರಿ ಬಳಸಿರಿ’ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಭೆಯಲ್ಲಿ ಬ್ಯಾಂಕಿನ ಅಧಿಕಾರಿಗಳ ಕನ್ನಡ ಕಲಿಯಬೇಕು ಮತ್ತು ಅದನ್ನು ಬಳಕೆ ಮಾಡಬೇಕು ಎಂದು ಸೂಚಿಸಿದರು. ಹೊಸ ಭಾಷೆಯೊಂದನ್ನು ಕಲಿತರೆ ಅದು ನಮ್ಮ ಮನೋಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರಿಂದ ಬ್ಯಾಂಕಿನ ಅಧಿಕಾರಿಗಳಿಗೆ ವೈಯಕ್ತಿಕವಾಗಿ ಲಾಭವಾಗುತ್ತದೆ. ಹಾಗಾಗಿ ಎಲ್ಲರೂ ಮೊದಲು ಈ ನೆಲದ ಭಾಷೆ ಕಲಿಯಿರಿ ಅದನ್ನು ಬಳಸಿರಿ ಎಂದು ನಿರ್ದೇಶನ ನೀಡಿದರು. ಬ್ಯಾಂಕುಗಳು ತಮ್ಮ ವ್ಯವಹಾರದ ಗುರಿಯ ಜೊತೆಗೆ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು. ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.