ADVERTISEMENT

ಅರೆಭಾಷಿಕರ ಐನ್‌ಮನೆ ಸಂಸ್ಕೃತಿ ದಾಖಲಿಸಿ: ಶಾಸಕ ಡಾ.ಮಂತರ್‌ಗೌಡ

​ಪ್ರಜಾವಾಣಿ ವಾರ್ತೆ
Published 18 ಮೇ 2025, 6:46 IST
Last Updated 18 ಮೇ 2025, 6:46 IST
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮಕ್ಕಂದೂರು ಗ್ರಾಮದ ಕುಂಭಗೌಡ ಅವರ ಐನ್‍ಮನೆಯಲ್ಲಿ ಶನಿವಾರ ನಡೆದ ಅರೆಭಾಷಿಕರ ‘ಐನ್‍ಮನೆ’ ಕಾರ್ಯಕ್ರಮದಲ್ಲಿ ಶಾಸಕ ಡಾ.ಮಂತರ್‌ಗೌಡ ಅವರು ಮಾತನಾಡಿದರು
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮಕ್ಕಂದೂರು ಗ್ರಾಮದ ಕುಂಭಗೌಡ ಅವರ ಐನ್‍ಮನೆಯಲ್ಲಿ ಶನಿವಾರ ನಡೆದ ಅರೆಭಾಷಿಕರ ‘ಐನ್‍ಮನೆ’ ಕಾರ್ಯಕ್ರಮದಲ್ಲಿ ಶಾಸಕ ಡಾ.ಮಂತರ್‌ಗೌಡ ಅವರು ಮಾತನಾಡಿದರು   

ಮಡಿಕೇರಿ: ಒಂದೆಡೆ ಹಳೆಯ ಕಾಲದ ನಾಣ್ಯಗಳು, ಮತ್ತೊಂದೆಡೆ ಪಾರಂಪರಿಕ ಪರಿಕರಗಳು, ಅರೆಭಾಷೆ ಹಾಡುಗಳ ಕಲರವ... ಇವೆಲ್ಲವೂ ಅರೆಭಾಷಿಕರ ಐನ್‌ಮನೆ ಸಂಸ್ಕೃತಿಯನ್ನು ಧ್ವನಿಸಿದವು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮಕ್ಕಂದೂರು ಗ್ರಾಮದ ಕುಂಭಗೌಡ ಅವರ ಐನ್‍ಮನೆಯಲ್ಲಿ ಶನಿವಾರ ನಡೆದ ಅರೆಭಾಷಿಕರ ‘ಐನ್‍ಮನೆ’ ಕಾರ್ಯಕ್ರಮದಲ್ಲಿ ಇವೆಲ್ಲವೂ ಕಂಡು ಬಂದವು. ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಡಾ.ಮಂತರ್‌ಗೌಡ, ‘ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಅರೆಭಾಷಿಕರ ಐನ್‌ಮನೆ ಸಂಸ್ಕೃತಿ, ಸಂಪ್ರದಾಯದ ದಾಖಲೀಕರಣ ಮಾಡಬೇಕು’ ಎಂದು ಹೇಳಿದರು.

ಕುಂಭಗೌಡ ಅವರ ಕುಟುಂಬಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದು, ಅವರ ಐನ್‍ಮನೆಯನ್ನು ಸಂರಕ್ಷಿಸಬೇಕು. ಐತಿಹಾಸಿಕ ಐನ್‍ಮನೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದಾಗ ನಾಡಿನ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು. ಈ ಭಾಗಕ್ಕೆ ಉತ್ತಮ ರಸ್ತೆ ನಿರ್ಮಾಣಕ್ಕಾಗಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ, ‘ಅರೆಭಾಷೆ ಸಂಸ್ಕೃತಿ, ಸಂಸ್ಕಾರ ಕಲಿಸಲು ಐನ್‍ಮನೆ ಜಂಬರ ಸಹಕಾರಿಯಾಗಿದೆ. ಅರೆಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೂ ಸಹ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ ಅಬಕಾರಿ ಇಲಾಖೆ ಉಪ ಆಯುಕ್ತರಾದ ಸುಮಿತಾ ಕುಂಭಗೌಡ ಕುಶಾಲಪ್ಪ-ನಂಗಾರು ಮಾತನಾಡಿ, ‘ಅರೆಭಾಷಿಕರ ಐನ್‍ಮನೆಗೆ ತನ್ನದೇ ಆದ ಇತಿಹಾಸವಿದ್ದು, ಮನೆತನದ ಐನ್‍ಮನೆ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಇತಿಹಾಸವನ್ನು ತಿಳಿದುಕೊಳ್ಳಬೇಕು’ ಎಂದರು.

ಕೊಡಗು ಜಿಲ್ಲೆಯ ಯುವ ವಿದ್ಯಾರ್ಥಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಅರೆಭಾಷೆ ಕುಟುಂಬಗಳ ಐನ್‍ಮನೆ ಕುರಿತು ಎ.ಕೆ.ಹಿಮಕರ ಅವರು ಮಾತನಾಡಿದರು. ಅರೆಭಾಷೆ ಸುಪ್ರಭಾತ ಸಿಡಿಯನ್ನು ಕೃಷಿಕರಾದ ಇಂದಿರಾ ದೇವಿಪ್ರಸಾದ್ ಸಂಪಾಜೆ ಅವರು ಬಿಡುಗಡೆ ಮಾಡಿದರು. ಕುಂಭಗೌಡ ಅವರ ಕುಟುಂಬ ಲಾಂಛನವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಜಯಪ್ರಕಾಶ್ ಪೆರುಮುಂಡ ಮತ್ತು ತಂಡದವರಿಂದ ಅರೆಭಾಷೆ ಹಾಡುಗಳ ಕಲರವ ನಡೆಯಿತು. ಆರ್‍ಜೆ ತ್ರಿಶೂಲ್ ಕಂಬಳನೊಟ್ಟಿಗೆ ನೀವು, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕುಂಭಗೌಡನ ಪಟ್ಟೆದಾರರಾದ ಕೆ.ಕೆ.ಓಂಕಾರಪ್ಪ, ಮಕ್ಕಂದೂರು ವ್ಯವಸ್ಥಾಯ ಸಹಕಾರ ಸಂಘದ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ಮಕ್ಕಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎನ್.ರಮೇಶ್, ಆನಂದ್ ಕರಂದ್ಲಾಜೆ, ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ನಿರ್ದೇಶಕ ಕೋಳುಮುಡಿಯನ ಅನಂತಕುಮಾರ್, ಮಕ್ಕಂದೂರು ಗೌಡ ಸಮಾಜದ ಅಧ್ಯಕ್ಷ ಲಕ್ಕಪ್ಪನ ಕೆ.ಹರೀಶ್, ಕಾರ್ಯಕ್ರಮ ಸಂಚಾಲಕರು ಹಾಗೂ ಅಕಾಡೆಮಿ ಸದಸ್ಯ ಸೂದನ ಎಸ್.ಈರಪ್ಪ, ಚಂದ್ರಶೇಖರ್ ಪೆರಾಲು, ತೇಜಕುಮಾರ್ ಕುಡೆಕಲ್ಲು, ಚಂದ್ರಾವತಿ ಬಡ್ಡಡ್ಕ, ಲತಾ ಪ್ರಸಾದ್ ಕುದ್ಪಾಜೆ, ಪಿ.ಎಸ್.ಕಾರ್ಯಪ್ಪ, ಡಾ.ನಿಡ್ಯಮಲೆ ಜ್ಞಾನೇಶ್, ಲೋಕೇಶ್ ಊರುಬೈಲು, ಸಂದೀಪ್ ಪುಳಕಂಡ, ವಿನೋದ್ ಮೂಡಗದ್ದೆ, ಮೋಹನ್ ಪೊನ್ನಚ್ಚನ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಭಿಕರು
ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿದ್ದ ಹಳೆಯ ನಾಣ್ಯಗಳು
ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕೆ ಇರಿಸಿದ್ದ ಪಾರಂಪರಿಕ ಪರಿಕರಗಳು

ಒಗ್ಗಟ್ಟಿನಿಂದ ಸಾಗಲು ವೀಣಾ ಅಚ್ಚಯ್ಯ ಕರೆ

ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ ‘ನಾನು ಅರುವತ್ತೊಕ್ಲು ಗ್ರಾಮದಲ್ಲಿ ಅರೆಭಾಷಿಕರ ಜೊತೆ ಚಿಕ್ಕಂದಿನಿಂದ ಬೆಳೆದು ಬಂದವಳು. ಹಿಂದೆ ಎಲ್ಲ ಜಾತಿಯವರೂ ಅತ್ಯಂತ ಅನ್ಯೋನ್ಯವಾಗಿ ಬದುಕುತ್ತಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿನ ಬೆಳವಣಿಗೆಗಳನ್ನು ಗಮನಿಸಿದಾಗ ಬೇಸರ ತರಿಸುತ್ತದೆ’ ಎಂದು ತಿಳಿಸಿದರು. ಇನ್ನಾದರೂ ಎಲ್ಲ ಜಾತಿಯ ಯುವ ತಲೆಮಾರು ಒಗ್ಗಟ್ಟಿನಿಂದ ಸಾಗಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.