ADVERTISEMENT

ಅನಗತ್ಯ ರಾಸಾಯನಿಕ ಗೊಬ್ಬರ ಹಾಕದಿರಿ: ಡಾ. ಚಂದ್ರಶೇಖರ್

ಕಾಫಿ ಮಂಡಳಿ ಅಧಿಕಾರಿಗಳು, ಬೆಳೆಗಾರರ ನಡುವೆ ಸಂವಾದ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 6:08 IST
Last Updated 31 ಜನವರಿ 2023, 6:08 IST
ನಾಪೋಕ್ಲುವಿನಲ್ಲಿ ಸೋಮವಾರ ಕಾಫಿ ಮಂಡಳಿ ಹಾಗೂ ಬೆಳೆಗಾರರ ನಡುವೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕಾಫಿ ಮಂಡಳಿಯ ಉಪನಿರ್ದೇಶಕ ಡಾ.ಚಂದ್ರಶೇಖರ್ ಮಾತನಾಡಿದರು.
ನಾಪೋಕ್ಲುವಿನಲ್ಲಿ ಸೋಮವಾರ ಕಾಫಿ ಮಂಡಳಿ ಹಾಗೂ ಬೆಳೆಗಾರರ ನಡುವೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕಾಫಿ ಮಂಡಳಿಯ ಉಪನಿರ್ದೇಶಕ ಡಾ.ಚಂದ್ರಶೇಖರ್ ಮಾತನಾಡಿದರು.   

ನಾಪೋಕ್ಲು: ‘ಬೆಳೆಗಾರರು ತಜ್ಞರ ಶಿಫಾರಸ್ಸು ಇಲ್ಲದೇ ತಮ್ಮ ಕಾಫಿ ತೋಟಗಳಿಗೆ ರಾಸಾಯನಿಕ ಗೊಬ್ಬರ ಹಾಕಬಾರದು’ ಎಂದು ಕಾಫಿ ಮಂಡಳಿಯ ಉಪನಿರ್ದೇಶಕ ಡಾ. ಚಂದ್ರಶೇಖರ್ ತಿಳಿಸಿದರು.

ನಾಪೋಕ್ಲುವಿನಲ್ಲಿ ಸೋಮವಾರ ನಡೆದ ಕಾಫಿ ಮಂಡಳಿ ಹಾಗೂ ಬೆಳೆಗಾರರ ನಡುವಿನ ಸಂವಾದದಲ್ಲಿ ಅವರು ಮಾತನಾಡಿದರು.

‘ಕಾಫಿ ತೋಟಗಳಿಗೆ ಅನಾವಶ್ಯಕ ರಾಸಾಯನಿಕ ಗೊಬ್ಬರ ಬಳಕೆಯನ್ನು ಮೊದಲು ತಪ್ಪಿಸಬೇಕು. ಕಾಫಿ ಗಿಡಗಳ ನಿರ್ವಹಣೆ ಸರಿ ಇಲ್ಲದಿದ್ದರೆ ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ಎಲ್ಲರೂ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು’ ಎಂದರು.

ADVERTISEMENT

‘ಮುಂದಿನ ದಿನಗಳಲ್ಲಿ ರೈತರ ತೋಟಗಳಿಗೆ ಭೇಟಿ ನೀಡಿ ಮಣ್ಣು ಪರೀಕ್ಷೆ ಮಾಡುವುದು ಹಾಗೂ ಬೆಳೆಗಾರರಿಗೆ ಮತ್ತು ಕಾರ್ಮಿಕರಿಗೆ ಕಾಫಿ ಗಿಡಗಳ ನಿರ್ವಹಣೆ ಕುರಿತು ತರಬೇತಿ ನೀಡಲಾಗುವುದು’ ಎಂದು ಹೇಳಿದರು.

ಭಾರತೀಯ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ.ಸಣ್ಣುವಂಡ ಕಾವೇರಪ್ಪ ಮಾತನಾಡಿ, ‘ಕಾಫಿ ಬೆಳೆಗಾರರು ವರ್ಷವಿಡೀ ಕಷ್ಟಪಟ್ಟು ದುಡಿದು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ ವ್ಯಾಪಾರಿಗಳಿಂದ ಶೋಷಣೆಗೊಳಗಾಗುತ್ತಿದ್ದಾರೆ. ಇದನ್ನು ತಪ್ಪಿಸುವಲ್ಲಿ ಮಂಡಳಿ ಕಾರ್ಯೋನ್ನುಖರಾಗಬೇಕು’ ಎಂದರು.

‘ಕಾಫಿ ಗಿಡಗಳ ಚಿಗುರು ಗಸಿ ಮಾಡುವ ಸಂದರ್ಭ ಬೆಳಗಾರರಿಗೆ ಹಾಗೂ ಕಾರ್ಮಿಕರಿಗೆ ತರಬೇತಿ ನೀಡುವ ಅಗತ್ಯವಿದೆ. ಈ ಬಗ್ಗೆ ಕ್ರಮ ಕೈಗೊಳ್ಳಿ’ ಎಂದೂ ಒತ್ತಾಯಿಸಿದರು.

ಕಾಫಿ ಬೆಳೆಗಾರ ಉದಯಶಂಕರ್ ಮಾತನಾಡಿ, ‘ಭಾರತದಲ್ಲಿ ಕೃಷಿಯಿಂದಾಗಿ ಆರ್ಥಿಕ ಸ್ಥಿತಿ ಸುಸ್ಥಿತಿಯಲ್ಲಿದೆ. ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಮಂಡಳಿ ಹಾಗೂ ಸರ್ಕಾರ ಕ್ರಮ ಕೈಗೊಳ್ಳಬೇಕು. ಉತ್ಪನ್ನಕ್ಕೆ ತಕ್ಕ ದರ ದೊರೆತದಲ್ಲಿ ಬೆಳೆಗಾರರಿಗೆ ಸಾಲದ ಅಗತ್ಯವಿಲ್ಲ. ಕಾಫಿ ಮಂಡಳಿಯ ಅಸ್ತಿತ್ವಕ್ಕಾಗಿ ಕಾಫಿ ಉತ್ಪಾದನೆ ಹೆಚ್ಚಿಸುವಂತೆ ಅಧಿಕಾರಿಗಳು ಪ್ರೇರೇಪಿಸುತ್ತಿದ್ದಾರೆ. ಅದು ಬಿಟ್ಟು ರೈತರ ಕಷ್ಟಗಳಿಗೆ ಸ್ಪಂದಿಸಿ’ ಎಂದರು.

ಅಧಿಕಾರಿಗಳಾದ ಅಜಿತ್‌ಕುಮಾರ್ ರಾವತ್, ಮಂಜುನಾಥ್ ರೆಡ್ಡಿ ಇದ್ದರು. ಬೆಳೆಗಾರರಾದ ಜಿನ್ನು ನಾಣಯ್ಯ, ಶಿವಾಚಾರ್ಯಂಡ ಜಗದೀಶ್, ಕಿಶೋರ್, ಕಾಂಡಂಡ ವಿಶ ಪೂವಯ್ಯ, ಕುಲ್ಲೇಟ್ಟೀರ ಆರುಣಬೇಬ, ಅಜಿತ್ ನಾಣಯ್ಯ, ಪಾಡಿಯಮ್ಮಂಡ ಮನು ಮಹೇಶ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.