ADVERTISEMENT

ಕೊಡಗಿನಲ್ಲಿ ‘ಬೆಲೆ ಕುಸಿತ’ದ ಸಮರ

ಕಾಳುಮೆಣಸು, ಕಾಫಿ ಧಾರಣೆ ಕುಸಿತವೂ ಕ್ಷೇತ್ರದಲ್ಲಿ ಪ್ರಧಾನ ವಿಷಯ

ಅದಿತ್ಯ ಕೆ.ಎ.
Published 4 ಏಪ್ರಿಲ್ 2019, 19:45 IST
Last Updated 4 ಏಪ್ರಿಲ್ 2019, 19:45 IST
ಪ್ರತಾಪ ಸಿಂಹ
ಪ್ರತಾಪ ಸಿಂಹ   

ಮಡಿಕೇರಿ: ಕೊಡಗು ಜಿಲ್ಲೆಯಲ್ಲೂ ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು,ಬರೀ ರಾಷ್ಟ್ರೀಯ ವಿಚಾರಗಳು ಮಾತ್ರವಲ್ಲದೇ ಸ್ಥಳೀಯ ವಿಚಾರಗಳೂ ಚರ್ಚೆಯ ಮುನ್ನೆಲೆಗೆ ಬಂದಿವೆ. ಕ್ಷೇತ್ರದಲ್ಲಿ ಅವುಗಳೂ ಪ್ರಧಾನವಾಗಿ ಪ್ರಸ್ತಾಪ ಆಗುತ್ತಿವೆ.

ಕಾಂಗ್ರೆಸ್–ಜೆಡಿಎಸ್‌ ‘ಮೈತ್ರಿಕೂಟ’ದ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ಅವರೂ ಕಳೆದೊಂದು ವಾರದಿಂದ ಜಿಲ್ಲೆಯ ವಿವಿಧೆಡೆ ಪ್ರಚಾರ ನಡೆಸುತ್ತಿದ್ದಾರೆ. ರಾಷ್ಟ್ರೀಯ ವಿಷಯಗಳನ್ನು ಮಾತ್ರವಲ್ಲದೇ ಸ್ಥಳೀಯ ವಿಚಾರಗಳನ್ನೂ ಕಾಂಗ್ರೆಸ್‌ ಅಭ್ಯರ್ಥಿ ಕೈಗೆತ್ತಿಕೊಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಅವರು ಉತ್ತರ ಹಾಗೂ ದಕ್ಷಿಣ ಕೊಡಗು ಭಾಗದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಅಲ್ಲಲ್ಲಿ ನಡೆಯುವ ಸಭೆಗಳಲ್ಲಿ ಬಿಜೆಪಿ ಹಾಗೂ ಮೈತ್ರಿಕೂಟದ ಅಭ್ಯರ್ಥಿಗಳು ಪ್ರಸ್ತಾಪಿಸುತ್ತಿರುವ ವಿಷಯಗಳು ಆರೋಪ– ಪ್ರತ್ಯಾರೋಪಕ್ಕೆ ಮುನ್ನುಡಿ ಬರೆಯುತ್ತಿವೆ.

ADVERTISEMENT

ಬಿಜೆಪಿಯು, ಪ್ರಧಾನಿ ನರೇಂದ್ರ ಮೋದಿ ಹವಾ ಹಾಗೂ ರಾಷ್ಟ್ರೀಯತೆ ಮೇಲೆ ಮತ ಸೆಳೆಯುವ ಪ್ರಯತ್ನ ಮಾಡುತ್ತಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿ ಹಿಂದಿನ ಸಂಸದರು ‘ಕೊಡಗು ಅಭಿವೃದ್ಧಿಯನ್ನೇ ಮರೆತಿದ್ದಾರೆ’ ಎಂದು ಆರೋಪಿಸಿ ಜನರ ಮನಗೆಲ್ಲುವ ಕೆಲಸಕ್ಕೆ ಮುಂದಾಗಿದ್ದಾರೆ.

ಕಾಂಗ್ರೆಸ್‌ಗೆ ‘ಅಸ್ತ್ರ’: ಕಳೆದೆರಡು ವರ್ಷದಿಂದ ಕಾಳುಮೆಣಸು ಹಾಗೂ ಕಾಫಿ ಧಾರಣೆ ಪಾತಾಳಕ್ಕೆ ಇಳಿದಿದ್ದು,ಅದಕ್ಕೆ ‘ಕೇಂದ್ರ ಸರ್ಕಾರದ ಆಮದು– ರಫ್ತು ನೀತಿಯೇ ಕಾರಣ’ವಾಗಿದೆ. ಸಂಸದ ಪ್ರತಾಪ ಸಿಂಹಅವರು ಸಂಬಾರು ಮಂಡಳಿಯ ಸದಸ್ಯರಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿಜಯಶಂಕರ್‌ ಅವರು ಪ್ರಧಾನ ಅಸ್ತ್ರವನ್ನು ಪ್ರಯೋಗಿಸುತ್ತಿದ್ದಾರೆ. ಇದು ಎಷ್ಟರಮಟ್ಟಿಗೆ ಪ್ರಭಾವ ಬೀರಿ ಲಾಭ ತರಲಿದೆ ಎಂಬುದು ಫಲಿತಾಂಶದ ಬಳಿಕವಷ್ಟೇ ತಿಳಿಯಲಿದೆ.

ಪ್ರಯೋಜನಕ್ಕೆ ಬಾರದ ಆದೇಶ: ಕಾಳುಮೆಣಸು ಧಾರಣೆ ಪಾತಾಳಕ್ಕೆ ಇಳಿದ ಬಳಿಕ ಮಧ್ಯ ಪ್ರವೇಶಿಸಿದ್ದ ಕೇಂದ್ರ ಸರ್ಕಾರವು 2017ರ ಡಿಸೆಂಬರ್‌ನಲ್ಲಿ ಕನಿಷ್ಠಆಮದುದರ (ಪ್ರತಿ ಕೆ.ಜಿ ಕಾಳುಮೆಣಸಿಗೆ ₹ 500) ನಿಗದಿಗೊಳಿಸಿ ಆದೇಶ ಹೊರಡಿಸಿತ್ತು. ಆದೇಶದ ಬಳಿಕ ಕೆಲವು ದಿನ ಧಾರಣೆ ಏರಿದ್ದರೂ ಬಳಿಕ ಕುಸಿದ ದರ ಮೇಲೆದ್ದಿಲ್ಲ ಎಂಬುದು ಕಾಫಿ ನಾಡಿನ ರೈತರಿಗೆ ನೋವು ತರಿಸಿದೆ.

ಒಂದು ವರ್ಷದಿಂದ ಪ್ರತಿ ಕೆ.ಜಿ. ಕಾಳುಮೆಣಸಿಗೆ ಬರೀ ₹ 280ರಿಂದ ₹ 300ರ ಒಳಗೇ ಧಾರಣೆ ಸುತ್ತು ಹಾಕುತ್ತಿದೆ. ರೈತರು ಧಾರಣೆ ಏರದೇ ಕಂಗಾಲಾಗಿದ್ದಾರೆ. ಇನ್ನೂ ಕಾಫಿ ಬೆಲೆಯೂ ಕೊಡಗು ಬೆಳೆಗಾರರ ಜೇಬು ತುಂಬಿಸುತ್ತಿಲ್ಲ. ವಿಜಯಶಂಕರ್‌ ಅವರು ಇದನ್ನೇ ಬಲವಾದ ಅಸ್ತ್ರ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಮುಖಂಡರೂ ಹೋದ ಕಡೆಯೆಲ್ಲಾ ಈ ವಿಚಾರವನ್ನೂ ಹೇಳುತ್ತಿದ್ದಾರೆ.

‘ಕೊಡಗಿಗೆ ರೈಲು ಯೋಜನೆ ತಂದೇ ತರುತ್ತೇನೆ ಎಂದಿದ್ದ ಪ್ರತಾಪ ಸಿಂಹ ಅವರು ಎಲ್ಲಿಗೆ ರೈಲಿಗೆ ತಂದಿದ್ದಾರೆ’ ಎಂಬ ಪ್ರಶ್ನೆಯನ್ನೂ ವಿಜಯಶಂಕರ್‌ ಮುಂದಿಡುತ್ತಿದ್ದಾರೆ.

ಸಿಂಹ ಅಭಿವೃದ್ಧಿಯ ನೋಟ: ಕೊಡಗು ಬಿಜೆಪಿಯ ಭದ್ರಕೋಟೆ. ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಶಾಸಕರು ಹಾಗೂ ಸಂಸದರು ತಮ್ಮೆಲ್ಲ ವೈಮನಸ್ಸು ಬದಿಗಿಟ್ಟು ಪ್ರಚಾರಕ್ಕೆ ಧುಮುಕಿದ್ದಾರೆ. ಇಬ್ಬರು ಶಾಸಕರೂ ಪ್ರತಾಪ ಸಿಂಹ ಅವರೊಂದಿಗೆಒಟ್ಟಾಗಿ ಪ್ರಚಾರ ನಡೆಸುತ್ತಿದ್ದಾರೆ.

‘ನಾನು ಸಂಸದನಾಗುವ ಮೊದಲು ಮೈಸೂರು ವಿಮಾನ ನಿಲ್ದಾಣ ಜಾನುವಾರು ಮೇಯುವ ತಾಣವಾಗಿತ್ತು. ಈಗ ಸುಸಜ್ಜಿತ ವಿಮಾನ ನಿಲ್ದಾಣವಾಗಿದೆ. ಅದೂ ಸಹ ಕೊಡಗಿನ ಜನರಿಗೆ ಅನುಕೂಲವಾಗಿದೆ. ಮೈಸೂರು–ಮಡಿಕೇರಿಗೆ ನಾಲ್ಕುಪಥದ ರಸ್ತೆ ನಿರ್ಮಾಣ ಹಾಗೂ ಮೈಸೂರಿನಿಂದ ಕುಶಾಲನಗರಕ್ಕೆ ರೈಲು ಮಾರ್ಗಕ್ಕೆ ಅನುಮೋದನೆ ಸಿಕ್ಕಿದೆ. ಪ್ರಕೃತಿ ವಿಕೋಪದ ವೇಳೆ ಕೇಂದ್ರವೇ ಹೆಚ್ಚಿನ ಅನುದಾನ ನೀಡಿದೆ’ ಎಂದು ಪ್ರಸ್ತಾಪಿಸುತ್ತಲೇ ತಮ್ಮ ಮತ ಬ್ಯಾಂಕ್‌ಗೆ ಕೈಹಾಕಿದ್ದಾರೆ ಬಿಜೆಪಿ ಅಭ್ಯರ್ಥಿ. ಕೆಲವು ಕೊಡವ ಸಮಾಜದಲ್ಲಿ ನಡೆದ ಸಭೆಯಲ್ಲಿ ಪ್ರತಾಪ ಸಿಂಹ ವಿರುದ್ಧ ಆಕ್ರೋಶ ವ್ಯಕ್ತವಾಗಿವೆ ಎಂದು ಮೂಲಗಳು ತಿಳಿಸಿವೆ.

ತಾರಾ ಪ್ರಚಾರಕರು ಬಂದಿಲ್ಲ: ಮಾರ್ಚ್ 31ರಂದು ಗೋಣಿಕೊಪ್ಪಲಿನಲ್ಲಿ ನಡೆದಿದ್ದ ಬಿಜೆಪಿ ಪ್ರಚಾರ ಸಭೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಂದಿದ್ದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಸಿಂಹ ಪರ ಪ್ರಚಾರಕ್ಕೆ ಬರುವ ಸಾಧ್ಯತೆಗಳಿವೆ.

ಮೈತ್ರಿಕೂಟದ ಅಭ್ಯರ್ಥಿ ಪರವಾಗಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಅಡಗೂರು ಎಚ್. ವಿಶ್ವನಾಥ್‌, ಕೊಡಗು ಉಸ್ತುವಾರಿ ಎಚ್‌.ಎಸ್‌.ಮಹದೇವಪ್ಪ ಒಂದು ಸುತ್ತಿನ ಪ್ರಚಾರ ನಡೆಸಿ ತೆರಳಿದ್ದಾರೆ. ಅದನ್ನು ಹೊರತು ‍ಪಡಿಸಿದರೆ ಕೊಡಗಿನತ್ತ ತಾರಾ ಪ್ರಚಾರಕರ ಸುಳಿವಿಲ್ಲ.

ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಸಚಿವರಾದ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ ಅವರು ಪ್ರಚಾರಕ್ಕೆ ಬರುವ ಸಾಧ್ಯತೆಗಳಿವೆ ಎಂದು ಮುಖಂಡರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.