ADVERTISEMENT

ಮೋದಿ ಹೆಸರಿನಲ್ಲೇ ಚುನಾವಣೆ ಭವಿಷ್ಯಕ್ಕೆ ಅಪಾಯಕಾರಿ: ಕಲ್ಲಡ್ಕ ಪ್ರಭಾಕರ್ ಭಟ್

‘ನಮ್ಮಲ್ಲಿ ವ್ಯಕ್ತಿಪೂಜೆ ಇಲ್ಲ’

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 9:31 IST
Last Updated 20 ಏಪ್ರಿಲ್ 2019, 9:31 IST
ಕಲ್ಲಡ್ಕ ಪ್ರಭಾಕರ್‌ ಭಟ್‌
ಕಲ್ಲಡ್ಕ ಪ್ರಭಾಕರ್‌ ಭಟ್‌   

ಮಡಿಕೇರಿ: ‘ಬಿಜೆಪಿ ಅಭ್ಯರ್ಥಿಗಳು, ಬರೀ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿರುವುದು ಭವಿಷ್ಯದಲ್ಲಿ ಅಪಾಯಕಾರಿ ಆಗಲಿದೆ’ ಎಂದು ಆರ್‌ಎಸ್‌ಎಸ್‌ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ್‌ ಭಟ್‌ ಇಲ್ಲಿ ಶನಿವಾರ ಎಚ್ಚರಿಸಿದರು.

ನಗರದಲ್ಲಿ ನಡೆದ ‘ಸ್ನೇಹ ಮಿಲನ’ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದು ರಾಷ್ಟ್ರಮಟ್ಟದ ಚುನಾವಣೆಯಾದರೂ ಮೋದಿಯನ್ನೇ ತೋರಿಸಿ ಮತ ಕೇಳುತ್ತಿರುವುದು ಒಳ್ಳೆಯ ಪ್ರಕ್ರಿಯೆ ಅಲ್ಲ. ಆರ್‌ಎಸ್‌ಎಸ್‌ನ ಸ್ವಯಂ ಸೇವಕರು ಎಂದೂ ವ್ಯಕ್ತಿಪೂಜೆ ಮಾಡುವುದಿಲ್ಲ’ ಎಂದು ಹೇಳಿದರು.

‘ಮೋದಿ ಅವರು ಕಳೆದ 65 ವರ್ಷಗಳಲ್ಲಿ ಆಗದ ಕೆಲಸಗಳನ್ನು ಐದು ವರ್ಷದಲ್ಲಿ ಮಾಡಿದ್ದಾರೆ. ಎಲ್ಲ ಹಂತದಲ್ಲೂ ಸಾಧನೆ ತೋರಿದ್ದಾರೆ. ಹಾಗಾಗಿಯೇ ಮೋದಿಗೆ ವೋಟು ಕೊಡಿಯೆಂದು ಬಿಜೆಪಿ ಅಭ್ಯರ್ಥಿಗಳು ಕೇಳುತ್ತಿದ್ದಾರೆ. ನೈಜವಾಗಿ ಅಭ್ಯರ್ಥಿಗಳು ತಮ್ಮ ಸಾಧನೆಯ ಆಧಾರದಲ್ಲಿ ಮತಯಾಚಿಸಬೇಕಿತ್ತು. ಮೋದಿ ಸಾಧನೆ ಎದುರು ಅಭ್ಯರ್ಥಿಗಳು ಗೌಣವಾಗಿದ್ದಾರೆ’ ಎಂದು ಪ್ರಭಾಕರ್‌ ಭಟ್‌ ನುಡಿದರು.

ADVERTISEMENT

‘ಮೋದಿ ಅವರು ಕ್ಷೇತ್ರದ ಅಭಿವೃದ್ಧಿಗೆಂದು ಸಂಸದರು ಏನು ಕೇಳಿದರೂ ನೀಡುತ್ತಿದ್ದರು. ಅದನ್ನು ಸಂಸದರು ಬಳಕೆ ಮಾಡಿಕೊಳ್ಳಬೇಕಿತ್ತು. ಕೆಲವರು ಆ ಸಾಧನೆ ಮಾಡಿರಲೂಬಹುದು. ಆದರೆ, ಮೋದಿ ಹೆಸರು ಮಾತ್ರ ಬಳಸಿಕೊಳ್ಳುತ್ತಿರುವುದು ಅಪಾಯಕಾರಿ’ ಎಂದು ಪುನರುಚ್ಚರಿಸಿದರು.

‘ಬಿಜೆಪಿಗಾದರೂ ನರೇಂದ್ರ ಮೋದಿ ಇದ್ದಾರೆ. ಉಳಿದವರಿಗೆ ಅವರೂ ಇಲ್ಲ’ ಎಂದು ‘ಮಹಾಮೈತ್ರಿ’ ಕುರಿತೂ ಲೇವಡಿ ಮಾಡಿದರು.

‘ಸರ್ಜಿಕಲ್‌ ಸ್ಟ್ರೈಕ್‌’ ಗೌರವ ಮೋದಿಗೆ ಸಿಗುತ್ತಿರುವುದು ವಿರೋಧ ಪಕ್ಷಗಳಿಗೆ ತಲೆನೋವಾಗಿದೆ. ಪ್ರಪಂಚದಲ್ಲೇ ಭಾರತಕ್ಕೆ ಹೆಸರು ತಂದುಕೊಟ್ಟಿರುವ ಮೋದಿಗೆ ಅಲ್ಲದೇ ಬೇರೆ ಯಾರಿಗೆ ಆ ಗೌರವ ಸಿಗಬೇಕು ಎಂದ ಅವರು, 1971ರಲ್ಲಿ ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶದ ಪರವಾಗಿ ಇಂದಿರಾ ಗಾಂಧಿ ಹೋರಾಟಕ್ಕೆ ಇಳಿದಿದ್ದರು. ಅದರಲ್ಲಿ ಗೆಲುವು ಸಿಕ್ಕಿತ್ತು. ಅಂದು ಇದೇ ಕಾಂಗ್ರೆಸ್‌ ಮುಖಂಡರು ಇಂದಿರಾ ಅವರನ್ನು ದುರ್ಗೆಯೆಂದು ಬಣ್ಣಿಸಿ ಕುಣಿದಾಡಿರಲಿಲ್ಲವೇ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.