ADVERTISEMENT

ಖಾಸಗಿ ಕ್ಷೇತ್ರದಲ್ಲಿ ಬೇಕು ಮೀಸಲಾತಿ: ರಾಜಪ್ಪ ದಳವಾಯಿ ‍‍

‘ಸಮಕಾಲೀನ ಬಿಕ್ಕಟ್ಟುಗಳು ಮತ್ತು ಸವಾಲುಗಳು’ ವಿಚಾರ ಸಂಕಿರಣದಲ್ಲಿ ಅಭಿಮತ

​ಪ್ರಜಾವಾಣಿ ವಾರ್ತೆ
Published 31 ಮೇ 2025, 15:55 IST
Last Updated 31 ಮೇ 2025, 15:55 IST
<div class="paragraphs"><p> ಮಡಿಕೇರಿಯ ಬಾಲಭವನದಲ್ಲಿ ನಡೆದ ‘ಸಮಕಾಲೀನ ಬಿಕ್ಕಟ್ಟುಗಳು ಮತ್ತು ಸವಾಲುಗಳು’ ವಿಚಾರ ಸಂಕಿರಣವನ್ನು ಉದ್ಘಾಟಿಸಿ&nbsp;ಪ್ರಗತಿಪರ ಚಿಂತಕ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿದರು</p></div>

ಮಡಿಕೇರಿಯ ಬಾಲಭವನದಲ್ಲಿ ನಡೆದ ‘ಸಮಕಾಲೀನ ಬಿಕ್ಕಟ್ಟುಗಳು ಮತ್ತು ಸವಾಲುಗಳು’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಪ್ರಗತಿಪರ ಚಿಂತಕ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿದರು

   

ಮಡಿಕೇರಿ: ‘ಮೀಸಲಾತಿ ಬಗ್ಗೆ ಯೋಚಿಸುವುದು ಎಂದರೆ ಸಮಾನತೆ ಬಗ್ಗೆ ಯೋಚಿಸುವುದು ಎಂದರ್ಥ. ಸಮಾನತೆಯ ಪ್ರಮುಖ ಸಾಧನ ಮೀಸಲಾತಿ ‌ಎಂಬುದನ್ನು ಯಾರೂ ಮರೆಯಬಾರದು’ ಎಂದು ಲೇಖಕ ರಾಜಪ್ಪ ದಳವಾಯಿ ‍‍ಪ್ರತಿಪಾದಿಸಿದರು.

ಕರ್ನಾಟಕ ಮಾನವ ಬಂಧತ್ವ ವೇದಿಕೆ, ಮಹಿಳಾ ಬಂಧುತ್ವ ವೇದಿಕೆ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಇಲ್ಲಿನ ಬಾಲಭವನದಲ್ಲಿ ನಡೆದ ‘ಸಮಕಾಲೀನ ಬಿಕ್ಕಟ್ಟುಗಳು ಮತ್ತು ಸವಾಲುಗಳು’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ADVERTISEMENT

‘ಅಸಮಾನತೆ ಹೋಗಲಾಡಿಸಲು ಮೀಸಲಾತಿ ಬೇಕೇ ಬೇಕು. ಮೀಸಲಾತಿ ಎಂದರೆ ಅದು ಸಮಾನ ಹಂಚಿಕೆ. ಇಂತಹ ಮೀಸಲಾತಿ ಕುರಿತು ಜನಸಾಮಾನ್ಯರಲ್ಲಿ ವೈಜ್ಞಾನಿಕ ಅರಿವು ಮೂಡಿಸಲು ಕಾರ್ಯಾಗಾರಗಳನ್ನು ನಡೆಸಬೇಕು’ ಎಂದು ಹೇಳಿದರು.

ನಂತರ ಅವರು, ಸ್ವಾತಂತ್ರ್ಯಪೂರ್ವದಲ್ಲಿ ಮೈಸೂರು ಸಂಸ್ಥಾನ ಹಾಗೂ ಕೊಲ್ಲಾಪುರದಲ್ಲಿ ಜಾರಿಗೆ ಬಂದ ಮೀಸಲಾತಿಯ ಇತಿಹಾಸ ಕುರಿತು ಮಾತನಾಡಿದರು.

ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ, ‘ಸದ್ಯ ಇರುವ ಮೀಸಲಾತಿಗೆ ಶೇ 50ರ ಮಿತಿಯನ್ನು ತೆಗೆಯುವ ಹಾಗೂ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಜಾರಿಗೆ ತರುವ ಅಗತ್ಯ ಇದೆ’ ಎಂದು ಪ್ರತಿಪಾದಿಸಿದರು.

‘ಜಾತಿ ಗಣತಿ ಎಂದರೆ ಅದು ಕೇವಲ ತಲೆಎಣಿಕೆ ಮಾತ್ರವಲ್ಲ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ. ಇಂತಹ ಸಮೀಕ್ಷೆ ವೈಜ್ಞಾನಿಕವಾಗಿಲ್ಲ ಎಂಬುದು ಸುಳ್ಳು’ ಎಂದು ಹೇಳಿದರು.

‘ಕೆಲವರು ಗಣತಿದಾರರು ನಮ್ಮ ಮನೆಗೆ ಬಂದಿಲ್ಲ. ಹಾಗಾಗಿ, ವರದಿ ಬೇಡ ಎನ್ನುತ್ತಿದ್ದಾರೆ. ಗಣತಿಯಿಂದ ಬಿಟ್ಟು ಹೋಗಿರುವವರು ಈಗಲೂ ಮಾಹಿತಿ ಕೊಡಿ. ಕೆಲವರ ಗಣತಿ ನಡೆದಿಲ್ಲ ಎಂಬ ಮಾತ್ರಕ್ಕೆ ಇಡೀ ವರದಿಯನ್ನೇ ಕಸದ ಬುಟ್ಟಿಗೆ ಎಸೆಯಬೇಕಾ’ ಎಂದು ಪ್ರಶ್ನಿಸಿದರು.

‘ಒಕ್ಕಲಿಗರು ಮತ್ತು ಲಿಂಗಾಯತರ ಸಂಖ್ಯೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ರಾಜಕಾರಣಿಗಳು ವಿರೋಧಿಸುತ್ತಾರೆ. ಆದರೆ, ಆ ಸಮುದಾಯಗಳಿಗೆ ನೀಡಲಾಗುತ್ತಿರುವ ಮೀಸಲಾತಿಯ ಪ್ರಮಾಣ ಹೆಚ್ಚಾಗಲಿದೆ ಎಂಬುದನ್ನು ಅವರು ಗಮನಿಸಬೇಕು. ಕೇವಲ ರಾಜಕೀಯ ಕಾರಣಕ್ಕೆ ವಿರೋಧಿಸಬಾರದು. ಸಂಖ್ಯೆಯನ್ನು ಬಿಟ್ಟು ಮೀಸಲಾತಿ ಹೆಚ್ಚಿಸುವ ಕಡೆಗೆ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

‘ಜಾತಿಗೆ ಸಾಮಾಜಿಕ, ಆರ್ಥಿಕ ಆಯಾಮ ಇದೆ. ಪ್ರತಿಯೊಬ್ಬರ ಹೃದಯ ಪರಿವರ್ತನೆ ಆದಾಗ ಸಾಮಾಜಿಕ ಸಮಾನತೆ ಸಿಗುತ್ತದೆ. ಆರ್ಥಿಕವಾಗಿ ಸಮಾನತೆ ಬಂದರೂ ಒಂದಷ್ಟು ಜಾತಿ ಕಡಿಮೆಯಾಗುತ್ತದೆ. ಜಾತಿ ಬಿಟ್ಟು ಮದುವೆಯಾದರೆ ಖಂಡಿತ ಜಾತಿ ನಾಶವಾಗುತ್ತದೆ. ಮೀಸಲಾತಿ ಇರುವುದು ಜಾತಿ ವಿನಾಶಕ್ಕೆ’ ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ವಿಚಾರ ಸಂಕಿರಣ ಉದ್ಘಾಟಿಸಿದ ಪ್ರಗತಿಪರ ಚಿಂತಕ ಪ್ರೊ.ಕಾಳೇಗೌಡ ನಾಗವಾರ, ‘ಪ್ರಸ್ತುತ ಸಮಾಜದಲ್ಲಿ ಅವಿವೇಕ ತುಂಬಿ ತುಳುಕುತ್ತಿದೆ. ಇವುಗಳನ್ನು ಮೀರಿ, ಕವಿವಾಣಿಯಂತೆ ಸರ್ವಜನಾಂಗದ ಶಾಂತಿಯ ತೋಟದಂತೆ ಎಲ್ಲರೂ ಒಂದಾಗಿ ಬಾಳುವ ವಾತಾವರಣ ಸೃಷ್ಟಿಯಾಗಬೇಕಾಗಿದೆ’ ಎಂದು ತಿಳಿಸಿದರು.

ವಿಚಾರ ಸಂಕಿರಣದ ಗೌರವ ಸಂಚಾಲಕ ರಮಾನಾಥ ಬೇಕಲ್ ಆರಂಭದಲ್ಲಿ ಸಂವಿಧಾನ ಪೀಠಿಕೆ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಮಾನವೀಯ ಬಂಧುತ್ವ ವೇದಿಕೆಯ ಮಂಗಳೂರು ವಿಭಾಗೀಯ ಸಂಚಾಲಕ ಕೆ.ಎಸ್.ಸತೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಮಾನವೀಯ ಬಂಧುತ್ವ ವೇದಿಕೆಯ ರಾಜ್ಯ ಮಹಿಳಾ ಸಂಚಾಲಕರಾದ ಲೀಲಾ ಸಂಪಿಗೆ ವಹಿಸಿದ್ದರು. ಸಂಘಟನೆಯ ಜಿಲ್ಲಾ ಸಂಚಾಲಕ ಜೆ.ಎಸ್.ಜನಾರ್ಧನ್, ಮಹಿಳಾ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕರಾದ ಕಾವೇರಿ, ಸ್ವಾಗತ ಸಮಿತಿ ಸಂಚಾಲಕ ನೆರವಂಡ ಉಮೇಶ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಭಿಕರು

Highlights - ಸಂವಿಧಾನ ಪೀಠಿಕೆ ವಾಚಿಸಿ ಕಾರ್ಯಕ್ರಮ ಆರಂಭ ಹಲವು ವಿಷಯಗಳನ್ನು ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ನಡೆಯಿತು ಪ್ರಶ್ನೋತ್ತರ

Cut-off box - ವೈದ್ಯರಂತೆ ಎಲ್ಲರೂ ಕಾರ್ಯನಿರ್ವಹಿಸಿ; ಮಂತರ್‌ಗೌಡ ಶಾಸಕ ಡಾ.ಮಂತರ್‌ಗೌಡ ಮಾತನಾಡಿ ‘ತಮ್ಮ ಬಳಿ ಬರುವ ರೋಗಿಗಳ ಜಾತಿ ವಿಚಾರಿಸದೇ ಅವರ ರೋಗ ಅರಿತು ಚಿಕಿತ್ಸೆ ನೀಡುತ್ತಾರೆ. ಹಾಗೆಯೇ ಎಲ್ಲರೂ ಎಲ್ಲ ಸಂದರ್ಭದಲ್ಲೂ ನಡೆದುಕೊಂಡರೆ ಜಾತಿ ದೂರವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು. ‘ಜಾತಿ ನೋಡಿ ಸಹಾಯ ಮಾಡಬೇಡಿ. ಅವರ ಕಷ್ಟ ನೋಡಿ ಸಹಾಯ ಮಾಡಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.