ADVERTISEMENT

ಕೊಡಗು | ಬೇಸಿಗೆಯಲ್ಲೇ ಮುಂಗಾರಿನ ಅನುಭವ; ಇಂದು ರೆಡ್‌ ಅಲರ್ಟ್ ಘೋಷಣೆ

ಕವಿದ ದಟ್ಟ ಮಂಜು, ಆವರಿಸಿರುವ ದಟ್ಟ ಮೋಡಗಳು, ಇಂದೂ ರೆಡ್‌ ಅಲರ್ಟ್ ಘೋಷಣೆ

​ಪ್ರಜಾವಾಣಿ ವಾರ್ತೆ
Published 21 ಮೇ 2025, 5:10 IST
Last Updated 21 ಮೇ 2025, 5:10 IST
ಮಡಿಕೇರಿಯಲ್ಲಿ ಮಂಗಳವಾರ ಸುರಿದ ಮಳೆಯಲ್ಲಿ ಜನರು ರೇನ್‌ಕೋಟ್ ಧರಿಸಿ ಸಂಚರಿಸಿದರು
ಮಡಿಕೇರಿಯಲ್ಲಿ ಮಂಗಳವಾರ ಸುರಿದ ಮಳೆಯಲ್ಲಿ ಜನರು ರೇನ್‌ಕೋಟ್ ಧರಿಸಿ ಸಂಚರಿಸಿದರು   

ಮಡಿಕೇರಿ: ಈ ಬಾರಿ ಬೇಸಿಗೆ ಅವಧಿ ಮುಗಿಯುವುದಕ್ಕೆ ಮುನ್ನವೇ ಕೊಡಗಿನ ಜನರಿಗೆ ಮುಂಗಾರಿನ ಅನುಭವವಾಗುತ್ತಿದೆ.

ನಗರದಲ್ಲಿ ಮಂಗಳವಾರ ನಸುಕಿನಿಂದಲೇ ದಟ್ಟ ಮಂಜು ಕವಿದಿತ್ತು. ಮುಂಗಾರಿನಲ್ಲಿ ಕವಿದ ಮಂಜಿನಂತೆ ಕಾಣುತ್ತಿತ್ತು. ಬೆಳಿಗ್ಗೆಯಾದೊಡನೆ ಮಳೆ ಬಿರುಸಾಗಿ ಸುರಿಯತೊಡಗಿತು.

ವಾತಾವರಣ ಸಂಪೂರ್ಣ ಶೀತಮಯವಾಗಿತ್ತು. ತಣ್ಣನೆಯ ಕುಳಿರ್ಗಾಳಿ ಬೀಸಿ ತಂಪಾಯಿತು. ಉಷ್ಣಾಂಶದಲ್ಲಿ ಇಳಿಕೆ ಕಂಡು ಬಂದಿತು. ಮುಂಗಾರಿನಂತೆ ಒಮ್ಮೆ ಬಿರುಸಾಗಿ, ಮತ್ತೊಮ್ಮೆ  ಜಿಟಿಜಿಟಿಯಾಗಿ ಸುರಿದ ಮಳೆಗೆ ಜನರೂ ಚಕಿತಗೊಂಡರು.

ADVERTISEMENT

ಕೃತ್ತಿಕಾ ಮಳೆ ತನ್ನ ಎಂದಿನ ಅಬ್ಬರವನ್ನು ಕಳೆದುಕೊಂಡು ಶಾಂತವಾಗಿ ಸುರಿಯುತ್ತಿದೆ. ಜಿಟಿಜಿಟಿ ಮಳೆಯಿಂದ ಜನರು ಮುಂಗಾರಿನಲ್ಲಿ ನಡೆದಾಡುವಂತೆ ಮೂಲೆಯಲ್ಲಿಟ್ಟಿದ್ದ ರೇನ್‌ಕೋಟ್‌ಗಳನ್ನು ಧರಿಸಿ, ಮುದುರಿ ಹೋಗಿದ್ದ ಕೊಡೆಗಳನ್ನು ಹೊರ ತೆಗೆದು ಮಳೆಗೆ ಹಿಡಿದು ನಡೆದರು.

ಇದೇ ರೀತಿಯ ವಾತಾವರಣ ಬಹುತೇಕ ಜಿಲ್ಲೆಯಾದ್ಯಂತ ಕಂಡು ಬಂತು. ವಿರಾಜಪೇಟೆಯಲ್ಲಂತೂ ದಿನವಿಡೀ ಜಿಟಿಜಿಟಿಯಾಗಿ ಸುರಿಯಿತು. ಕುಶಾಲನಗರದಲ್ಲಿ ತುಂತುರು ಮಳೆಯಾಯಿತು. ಸುಂಟಿಕೊಪ್ಪ, ನಾಪೋಕ್ಲು ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಯಿತು. 

ಭಾರತೀಯ ಹವಾಮಾನ ಇಲಾಖೆ ಮೊದಲೇ ಭಾರಿ ಮಳೆ ಬೀಳುವ ಮುನ್ಸೂಚನೆ ನೀಡಿ ರೆಡ್‌ ಅಲರ್ಟ್ ಘೋಷಿಸಿತ್ತು. ಆದರೆ, ರೆಡ್‌ ಅಲರ್ಟ್‌ನಂತೆ ಭಾರಿ ಮಳೆ ಬೀಳದೇ ಹೋದರೂ ಮೋಡಗಳು ಭಾರಿ ಮಳೆ ಬೀಳುವಂತೆ ಕವಿದಿದ್ದವು. 

ಮುಂಗಾರು ಮಳೆಯು ಈ ಬಾರಿ ಸಾಕಷ್ಟು ಮುಂಚಿತವಾಗಿಯೇ ಪ್ರವೇಶಿಸುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಆದರೆ, ಈಗ ಇನ್ನೂ ಮುಂಚಿತವಾಗಿಯೇ ಮಳೆಯಾಗುತ್ತಿದೆ. 

ಬೇಸಿಗೆ ಬಿಸಿಲೂ ಈ ಬಾರಿ ಸಾಕಷ್ಟಿತ್ತು. ಏ‍ಪ್ರಿಲ್ ತಿಂಗಳಿನಲ್ಲಿ ವಾಡಿಕೆ ಮಳೆ ಸುರಿದರೂ, ಮೇ ತಿಂಗಳ ಮೊದಲ ಎರಡು ವಾರಗಳಲ್ಲಿ ವಾಡಿಕೆ ಮಳೆಯಾಗಿರಲಿಲ್ಲ. ಮೇ ತಿಂಗಳ ಮೊದಲ 13 ದಿನಗಳಲ್ಲಿ ಶೇ 44ರಷ್ಟು ಕೊರತೆ ಎದುರಾಗಿತ್ತು. ಇದರಿಂದ ಜಿಲ್ಲೆಯ ಬೆಳೆಗಾರರು, ರೈತರಲ್ಲಿ ಆತಂಕವೂ ಮನೆ ಮಾಡಿತ್ತು. ಈಗ ಸುರಿಯುತ್ತಿರುವ ಮಳೆ ಹಾಗೂ ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯು ಕೊಂಚ ಸಮಾಧಾನ ಮೂಡಿಸಿದೆ.

ಭಾರತೀಯ ಹವಾಮಾನ ಇಲಾಖೆಯು ಮೇ 21ರಂದೂ ಭಾರಿ ಮಳೆ ಬೀಳುವ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಿದೆ. 

ಮಡಿಕೇರಿಯಲ್ಲಿ ಮಂಗಳವಾರ ನಸುಕಿನಲ್ಲಿ ದಟ್ಟ ಮಂಜು ಕವಿದಿತ್ತು
ಮಡಿಕೇರಿಯಲ್ಲಿ ಮಂಗಳವಾರ ನಸುಕಿನಲ್ಲಿ ದಟ್ಟ ಮಂಜು ಕವಿದಿತ್ತು

ಮೇ ತಿಂಗಳ ಮೊದಲ 13 ದಿನದಲ್ಲಿ ಶೇ 44ರಷ್ಟು ಮಳೆ ಕೊರತೆ ಕೊಂಚ ಸಮಾಧಾನ ತಂದ ಈಗ ಬೀಳುತ್ತಿರುವ ಮಳೆ ಮುಂಗಾರಿನ ಅನುಭವ ನೀಡಿದ ಮಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.