ADVERTISEMENT

ಸೋಮವಾರಪೇಟೆ | ಯೋಜನೆ ತಲುಪದಿದ್ದರೆ ಅಧಿಕಾರಿಗಳೇ ಹೊಣೆ: ಜಿ.ಎಂ.ಕಾಂತರಾಜು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 6:13 IST
Last Updated 7 ಆಗಸ್ಟ್ 2025, 6:13 IST
ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸರ್ಕಾದ ಪಂಚಗ್ಯಾರಂಟಿ ಯೋಜನೆಗಳ ತಾಲ್ಲೂಕು ಮಟ್ಟದ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷ ಜಿ.ಎಂ.ಕಾಂತರಾಜು ಭಾಗವಹಿಸಿದ್ದರು
ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸರ್ಕಾದ ಪಂಚಗ್ಯಾರಂಟಿ ಯೋಜನೆಗಳ ತಾಲ್ಲೂಕು ಮಟ್ಟದ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷ ಜಿ.ಎಂ.ಕಾಂತರಾಜು ಭಾಗವಹಿಸಿದ್ದರು   

ಸೋಮವಾರಪೇಟೆ: ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡಬೇಕು. ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸರಿಯಾಗಿ ತಲುಪದಿದ್ದರೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರು. ಫಲಾನುಭವಿಗಳೊಂದಿಗೆ ತಾಳ್ಮೆ ಮತ್ತು ಸಂಯಮದಿಂದ ಕೆಲಸ ಮಾಡಿಕೊಡಬೇಕೆಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ.ಕಾಂತರಾಜು ಹೇಳಿದರು.

ಬುಧವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸರ್ಕಾದ ಪಂಚಗ್ಯಾರಂಟಿ ಯೋಜನೆಗಳ ತಾಲ್ಲೂಕು ಮಟ್ಟದ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದ ಆದೇಶದಂತೆ ಪಂಚ ಇಲಾಖೆಗಳು ಕಾರ್ಯಗತಗೊಳಿಸಿದ ಯೋಜನೆಗಳ ಕುರಿತ ಮಾಹಿತಿಗಳು ಹಾಗೂ ಫಲಾನುಭವಿಗಳೊಂದಿಗೆ ನಡೆಸಿದ ಮಾತುಕತೆಯ ವಿವರಗಳನ್ನು ಚಿತ್ರ ಸಹಿತ ನೀಡಬೇಕು. ಪ್ರಗತಿ ವರದಿ ಕುರಿತ ಯಶೋಗಾಥೆ ಎಂಬ ಕಿರುಹೊತ್ತಿಗೆಗೆ ಪ್ರತಿ ತಿಂಗಳು ಸಂಬಂಧಿಸಿದ ಇಲಾಖಾಧಿಕಾರಿಗಳು ಸಮಗ್ರ ಮಾಹಿತಿಯನ್ನು ನೀಡಬೇಕೆಂದರು.

ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಬಡ ಕುಟುಂಬದ ಸದಸ್ಯರು ಹೆಚ್ಚಿನ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ವೈದ್ಯಕೀಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಬಿಪಿಎಲ್ ಪಡಿತರ ಚೀಟಿಯ ಅರ್ಹತೆಯನ್ನು ಹೊಂದಿರುವವರು ಇದರ ಪ್ರಯೋಜನ ಪಡೆದುಕೊಳ್ಳಲು ಅವಕಾಶವಿದೆ. ತಾಲ್ಲೂಕಿನಲ್ಲಿ ಈಗಾಗಲೇ 5 ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಆಹಾರ ಇಲಾಖೆಯ ಶಿರಸ್ತೇದಾರ್‌ ರಮೇಶ್ ಸಭೆಗೆ ತಿಳಿಸಿದರು.

ADVERTISEMENT

ತಾಲ್ಲೂಕಿನಲ್ಲಿ ಕಾಳಸಂತೆಯಲ್ಲಿ ಅಕ್ಕಿ ಮಾರಾಟವಾಗುತ್ತಿರುವ ಕುರಿತು ದೂರುಗಳು ಬರುತ್ತಿದ್ದು, ಇದಕ್ಕೆ ಸಂಬಂದಿಸಿದಂತೆ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಭೆಯನ್ನು ಕರೆಯಬೇಕಿದೆ. ಆಹಾರ ಇಲಾಖೆಯ ಅಧಿಕಾರಿಗಳು ಕೂಡ ಪ್ರತಿ ತಿಂಗಳು ತಪಾಸಣೆಗೆ ತೆರಳಬೇಕೆಂದು ಅಧ್ಯಕ್ಷರು ಹೇಳಿದರು. ಆಹಾರ ಇಲಾಖೆ ನಿರೀಕ್ಷಕರು ಕಚೇರಿ ವೇಳೆಯಲ್ಲಿ ಸಮಯ ಪಾಲನೆ ಮಾಡುತ್ತಿಲ್ಲ. ಇದರ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ ಎಂದು ಇಲಾಖೆಯ ಶಿರಸ್ತೇದಾರ್ ಅವರಿಗೆ ಸೂಚನೆ ನೀಡಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಡಿಕೇರಿ ಘಟಕದ ಪ್ರಭಾರ ವ್ಯವಸ್ಥಾಪಕ ಈರಸಯ್ಯ ಸಮಿತಿ ಸಭೆಗೆ ಹಾಜರಾಗುತ್ತಿಲ್ಲ. ದೂರವಾಣಿ ಕರೆಯನ್ನು ಸ್ವೀಕರಿಸುತ್ತಿಲ್ಲ. ಇಲಾಖೆ ಕಾರ್ಯಕ್ರಮಗಳ ಕುರಿತು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರಿಗೂ ತಿಳಿಸುತ್ತಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಲು ತೀರ್ಮಾನಿಸಲಾಯಿತು.

ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಾವುದೇ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿಲ್ಲ. ಅಂಗನವಾಡಿಗಳಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಕುರಿತು ಸಂಶಯ ಇದೆ. ಕೆಲವು ಅಂಗನವಾಡಿಗಳಲ್ಲಿ ಹೆಚ್ಚು ಸಂಖ್ಯೆಯ ದಾಖಲಾತಿಯನ್ನು ತೋರಿಸುತ್ತಿದ್ದಾರೆ. ಇದರ ಬಗ್ಗೆ ತನಿಖೆ ಮಾಡಬೇಕೆಂದು ಸಮಿತಿ ಸದಸ್ಯರು ಸಭೆಗೆ ಮನವಿ ಮಾಡಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು ಇದ್ದರು. ಇದೇ ಸಂದರ್ಭ ವೈದ್ಯಕೀಯ ಪ್ರಕರಣಗಳಿಗೆ ಸಂಬಂಧಿಸಿದ ಸೌಲಭ್ಯ ಪಡೆಯಲು ಆಯ್ಕೆಯಾದ ಫಲಾನುಭವಿಗಳಿಗೆ ಆಹಾರ ಇಲಾಖೆ ವತಿಯಿಂದ ಕಾರ್ಡ್ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.