ADVERTISEMENT

ಮಡಿಕೇರಿಯಲ್ಲಿ ‘ಹಸಿರು ಪಡೆ’ಗೆ ಚಾಲನೆ

‘ನಿತ್ಯ ಪರಿಸರ ಹಾಳು ಮಾಡುತ್ತಿದ್ದೇವೆ’: ಗಣ್ಯರ ನೋವು

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 12:53 IST
Last Updated 11 ನವೆಂಬರ್ 2019, 12:53 IST

ಮಡಿಕೇರಿ: ‘ಪ್ರತಿನಿತ್ಯ ಪರಿಸರ ಹಾಳು ಮಾಡುತ್ತಿದ್ದೇವೆ; ಮನೆಗಳನ್ನು ಸ್ವಚ್ಛಗೊಳಿಸಿ ತ್ಯಾಜ್ಯವನ್ನು ಬೀದಿಗೆ ಎಸೆಯುತ್ತಿದ್ದೇವೆ. ಇದು ಆಗಬಾರದು’ ಎಂದು ಗ್ರೀನ್‌ ಸಿಟಿ ಫೋರಂ ನೂತನ ಅಧ್ಯಕ್ಷ ಪಿ.ಕೃಷ್ಣಮೂರ್ತಿ ಎಚ್ಚರಿಸಿದರು.

ನಗರದ ಸಂತ ಜೋಸೆಫ್‌ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಸೋಮವಾರ ‘ಗ್ರೀನ್ ಸಿಟಿ ಫೋರಂ’ನಿಂದ ನಡೆದ ಹಸಿರು ಪಡೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮನುಷ್ಯರೇ ವ್ಯವಸ್ಥೆ ಕೆಡಿಸುತ್ತಿದ್ದಾರೆ. ಹೀಗಿರುವಾಗ ಮನುಷ್ಯರನ್ನು ಬುದ್ಧಿವಂತ ಎನ್ನಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ADVERTISEMENT

‘ಪರಿಸರ ಮಾಲಿನ್ಯ ಇಲಾಖೆ ಕೂಡ ತನ್ನ ಪಾಲಿನ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಇಲಾಖೆಯನ್ನು ಬಡಿದೆಬ್ಬಿಸುವ ಕೆಲಸವನ್ನು ಗ್ರೀನ್ ಸಿಟಿ ಫೋರಂ ಮಾಡಲಿದೆ. ಮಕ್ಕಳ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುವುದು’ ಎಂದು ಕೃಷ್ಣಮೂರ್ತಿ ಹೇಳಿದರು.

ಹಸಿರು ಪಡೆಗೆ ಚಾಲನೆ ನೀಡಿ ಮಾತನಾಡಿದ ಅಂತರರಾಷ್ಟ್ರೀಯ ಅಥ್ಲೀಟ್‌ ತೀತಮಾಡ ಅರ್ಜುನ್ ದೇವಯ್ಯ, ‘ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಗ್ರೀನ್ ಸಿಟಿ ಫೋರಂನ ಹಸಿರು ಪಡೆಗೆ ಸೇರಿ ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು’ ಎಂದು ಕರೆ ನೀಡಿದರು.

‘ಬಲವಂತವಾಗಿ ಯಾರೂ ಹಸಿರು ಪಡೆಗೆ ಸೇರಬೇಡಿ. ಇದರಿಂದ ಯಾವ ಪ್ರಯೋಜನ ಇಲ್ಲ. ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಮಹತ್ವದ ಕಾರ್ಯದಲ್ಲಿ ಸ್ವಯಂ ಪ್ರೇರಿತವಾಗಿ, ಇಷ್ಟಪಟ್ಟು ಸೇರಿ. ಮೊದಲು ತಾವು ಮತ್ತು ಪಾಲಕರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಅರ್ಜುನ್ ದೇವಯ್ಯ ಹೇಳಿದರು.

‘ಎಲ್ಲರಿಗೂ ಸೇನೆಗೆ ಸೇರಿ ಸೇವೆ ಮಾಡಲು ಸಾಧ್ಯವಿಲ್ಲ. ನಮ್ಮ ಪಾಲಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದಲ್ಲಿ ದೇಶ ಸೇವೆ ಮಾಡಿದ್ದಂತೆ. ಮನೆಯಲ್ಲಿರುವ ತ್ಯಾಜ್ಯವನ್ನು ಹಸಿ ಕಸ, ಒಣ ಕಸ ಮತ್ತು ಅಪಾಯಕಾರಿ ಕಸ ಎಂದು ಪ್ರತ್ಯೇಕ್ಷಿಸಬೇಕು’ ಎಂದು ಗ್ರೀನ್ ಸಿಟಿ ಫೋರಂ ಖಜಾಂಚಿ ಮೋಂತಿ ಗಣೇಶ್ ಹೇಳಿದರು.

ಸಂತ ಜೋಸೆಫರ ವಿದ್ಯಾಸಂಸ್ಥೆ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ರೋಸಿ, ಗ್ರೀನ್ ಸಿಟಿ ಫೋರಂ ಮಾಜಿ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಅಂಬೆಕಲ್ ನವೀನ್ ಕುಶಾಲಪ್ಪ, ನಿರ್ದೇಶಕರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ವ್ಯಾಂಡಮ್ ದಾಮೋದರ್, ಪ್ರಜ್ಞಾ ರಾಜೇಂದ್ರ. ಅಗಸ್ತ್ಯ ಮಧುಕರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.