ಕುಶಾಲನಗರ: ಭದ್ರಾ ಅಭಯಾರಣ್ಯದಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶವನ್ನು ಗುರುತಿಸಿ, ರೈಲ್ವೆ ಕಂಬಿಗಳನ್ನು ಅಳವಡಿಸಿ, ಸೆರೆ ಹಿಡಿದ ಕಾಡಾನೆಗಳನ್ನು ಆ ಜಾಗದಲ್ಲಿ ಬಿಡುವ ಸಾಫ್ಟ್ ರಿಲೀಸ್ ಯೋಜನೆಯಂತೆ ಕೊಡಗಿನಲ್ಲಿಯಲ್ಲಿಯೂ ಪಕ್ಕದ ಮೂರು ಜಿಲ್ಲೆಗಳಿಗೆ ಅನುಕೂಲವಾಗುವಂತೆ ಸಾಫ್ಟ್ ರಿಲೀಸ್ ಯೋಜನೆಗೆ ವಿರಾಜಪೇಟೆ ಕ್ಷೇತ್ರದ ಶಾಸಕರ ನೇತ್ರತ್ವದಲ್ಲಿ ಮುಖ್ಯಮಂತ್ರಿ, ಅರಣ್ಯ ಸಚಿವರೊಂದಿಗೆ ಈಗಾಗಲೇ ಚರ್ಚೆ ನಡೆದಿದೆ.
ಅರಣ್ಯ ಇಲಾಖೆ ಮೂಲಕ ಆ ಯೋಜನೆ ಕಾರ್ಯಗತಗೊಳಿಸಲು ಈಗಾಗಲೇ ಚಿಂತಿಸಲಾಗಿದೆ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.
ಹಾರಂಗಿ ಸಾಕಾನೆ ಶಿಬಿರದಲ್ಲಿ ಆಯೋಜಿಸಿದ್ದ ವಿಶ್ವ ಆನೆ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವದಲ್ಲಿ 4 ಲಕ್ಷ 15 ಸಾವಿರದಷ್ಟು ಆನೆಗಳಿವೆ. ಭಾರತದಲ್ಲಿ 27 ಸಾವಿರದಷ್ಟಿವೆ. ದೇಶದಲ್ಲೇ ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಕಾಡಾನೆಗಳಿವೆ. ಅದರಲ್ಲಿಯೂ ರಾಜ್ಯದ 7 ಜಿಲ್ಲೆಗಳಲ್ಲಿ ಕಾಡಾನೆಗಳ ಸಂಖ್ಯೆ ಹೆಚ್ಚಿದೆ.
2016 ಅಂಕಿ ಅಂಶಗಳ ಪ್ರಕಾರ ವಿಶ್ವದಲ್ಲಿ 1 ಲಕ್ಷ 10 ಸಾವಿರದಷ್ಟು ಆನೆಗಳ ಸಂತತಿಯು ಕಡಿಮೆಯಾಗಿರುವುದು ಆತಂಕಕಾರಿಯಾಗಿದೆ. ಪ್ರಕೃತಿಯಲ್ಲಿ ಕಾಡಾನೆಗಳು ವಹಿಸುವ ಪಾತ್ರ ಮುಖ್ಯವಾಗಿರುತ್ತದೆ. ಆನೆ ಹಾಗೂ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರೋಪಾಯಗಳನ್ನು ಕಂಡು ಹಿಡಿಯುವುದು ಬಹು ಮುಖ್ಯ. ಅದರ ಜೊತೆಯಲ್ಲಿ ಆನೆಗಳ ಸಂರಕ್ಷಣೆಗೆ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ.ನೆಹರು ಮಾತನಾಡಿ, ಕಾಡಾನೆಗಳ ರಕ್ಷಣೆ ಕೇವಲ ಇಲಾಖೆ ಅಥವಾ ಸರ್ಕಾರದ ಜವಾಬ್ದಾರಿಯಲ್ಲ. ಇಲ್ಲಿ ಕಾಡಂಚಿನ ಜನರು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಬಹು ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಡಿಕೇರಿ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಅಭಿಷೇಕ್, ತಿತಿಮತಿ ವಿಭಾಗದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಕೆ.ಗೋಪಾಲ್, ವನ್ಯಜೀವಿ ವಿಭಾಗದ ಉಪ ಸಂರಕ್ಷಣಾ ಅಧಿಕಾರಿ ಕಾರ್ಯಪ್ಪ, ನಿವೃತ್ತ ಪಶುವೈದ್ಯಾಧಿಕಾರಿ ಡಾ.ಚಿಟ್ಟಿಯಪ್ಪ, ಸೋಮವಾರಪೇಟೆ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಶಶಿಧರ್, ವಿವಿಧ ವಲಯಗಳ ಅರಣ್ಯಾಧಿಕಾರಿಗಳು ಇದ್ದರು.
ಆನೆ ಹಬ್ಬದ ಅಂಗವಾಗಿ ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೆ ಆನೆಗಳ ಸಂರಕ್ಷಣೆ, ಪರಿಸರ, ಪ್ರಕೃತಿಯ ಬಗ್ಗೆ ಉಪನ್ಯಾಸ ನಡೆಯಿತು.
ಆನೆ ಹಬ್ಬ ದಿನದ ಅಂಗವಾಗಿ ಹಾರಂಗಿ ಶಿಬಿರದಲ್ಲಿರುವ ಸಾಕಾನೆಗಳಾದ ಲಕ್ಷ್ಮಣ, ಏಕದಂತ,ರಾಮ, ವಿಗ್ರಮ,ಈಶ್ವರ, ಕರ್ಣ ಆನೆಗಳನ್ನು ಸಿಂಗಾರ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಮುನ್ನ ಸಾಕಾನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ವಿವಿಧ ಬಗೆಯ ಆಹಾರಗಳನ್ನು ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.