ADVERTISEMENT

ದಾಖಲೆ ಬರೆದ ಹಾರಂಗಿ ಜಲಾಶಯ

ಈ ವರ್ಷ ಹರಿದು ಬಂದ ನೀರು 70.75 ಟಿಎಂಸಿ ಅಡಿ

ರಘು ಹೆಬ್ಬಾಲೆ
Published 31 ಆಗಸ್ಟ್ 2018, 17:44 IST
Last Updated 31 ಆಗಸ್ಟ್ 2018, 17:44 IST
ಕುಶಾಲನಗರ ಸಮೀಪದ ಹಾರಂಗಿ ಜಲಾಶಯ
ಕುಶಾಲನಗರ ಸಮೀಪದ ಹಾರಂಗಿ ಜಲಾಶಯ   

ಕುಶಾಲನಗರ: ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಒಂದಾದ ಹಾರಂಗಿಗೆ ಈ ವರ್ಷದ ಆಗಸ್ಟ್ ಅಂತ್ಯಕ್ಕೆ 70.75 ಟಿಎಂಸಿ ಅಡಿ ದಾಖಲೆಯ ಪ್ರಮಾಣದ ನೀರು ಹರಿದು ಬಂದಿದೆ.

ಕೊಡಗು ಜಿಲ್ಲೆಯಲ್ಲಿ ಜೂನ್‌ನಲ್ಲಿ ವಾಡಿಕೆಯಂತೆ ಆರಂಭವಾದ ಮಳೆ ಜುಲೈ, ಆಗಸ್ಟ್‌ನಲ್ಲಿ ವ್ಯಾಪಕವಾಗಿ ಸುರಿಯಿತು. 58.49 ಟಿಎಂಸಿ ಅಡಿ ನೀರನ್ನು ನದಿಗೆ, 4.2 ಟಿಎಂಸಿ ಅಡಿ ನೀರನ್ನು ನಾಲೆಗೆ ಹರಿಯಬಿಡಲಾಗಿದೆ. ಕಳೆದ ವರ್ಷ ಇದೇ ಅವಧಿಗೆ 16 ಟಿಎಂಸಿಯಷ್ಟು ನೀರು ಜಲಾಶಯಕ್ಕೆ ಹರಿದು ಬಂದಿತ್ತು ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಧರ್ಮರಾಜ್ ತಿಳಿಸಿದ್ದಾರೆ.

1982ರಲ್ಲಿ ಹುಲುಗುಂದ ಗ್ರಾಮದ ಬಳಿ ಹಾರಂಗಿ ಹಾಗೂ ಹಟ್ಟಿಹೊಳೆಗೆ ಅಡ್ಡಲಾಗಿ ನಿರ್ಮಿಸಿದ್ದ ಈ ಜಲಾಶಯದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ನೀರು ಹರಿದಿದೆ.

ADVERTISEMENT

ಕ್ಷಣ ಕ್ಷಣಕ್ಕೂ ಏರಿದ್ದ ನೀರು: ಜಲಾಶಯಕ್ಕೆ ಆ.12ರಂದು 25,000 ಕ್ಯುಸೆಕ್ ಒಳಹರಿವು ಇತ್ತು. ನದಿಗೆ 38,000 ಕ್ಯುಸೆಕ್ ಹರಿಸಲಾಗಿತ್ತು.ಆ. 16ರಂದು ಬೆಳಿಗ್ಗೆ 6ರ ವೇಳೆಗೆ ಒಳಹರಿವು 65,000 ಕ್ಯುಸೆಕ್‌ಗೆ ಏರಿತ್ತು. ನಂತರ 7.30ಕ್ಕೆ 70,000 ಕ್ಯುಸೆಕ್, 10 ಗಂಟೆ ಸುಮಾರಿಗೆ 80,000 ಕ್ಯುಸೆಕ್, ಸಂಜೆ 5ರ ವೇಳೆಗೆ 85,000 ಕ್ಯುಸೆಕ್‌ಗೆ ಹೆಚ್ಚಳವಾಗಿತ್ತು. ಹಾರಂಗಿ ಹಿನ್ನೀರಿನಲ್ಲಿ ಮೊದಲ ಬಾರಿಗೆ ಬೆಟ್ಟಗಳು ಮುಳುಗಿ ನೀರಿನ ಬಣ್ಣವೇ ಬದಲಾಗಿದೆ.

ಧಾರಾಕಾರ ಮಳೆಗೆ ಬೆಟ್ಟಗಳ ತಪ್ಪಲಿನಿಂದ ಮಣ್ಣು ಕೊಚ್ಚಿಕೊಂಡು ಬಂದಿದ್ದು ಜಲಾಶಯದ ನೀರು ಕಂದು ಬಣ್ಣಕ್ಕೆ ತಿರುಗಿದೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಹೂಳು ಸಂಗ್ರಹವಾಗಿದೆ.
ಧರ್ಮರಾಜ್, ಎಇಇ, ಹಾರಂಗಿ ಜಲಾಶಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.