ADVERTISEMENT

ಕುಂಭದ್ರೋಣ ಮಳೆ, ಬಿರುಸಿನ ಗಾಳಿ; ನಾಳೆ ರಜೆ

ಕೊಡಗಿಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು, ಮಳೆ ಹಾನಿ ಪ್ರದೇಶಗಳ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 15:49 IST
Last Updated 25 ಜೂನ್ 2025, 15:49 IST
ಎನ್‌ಡಿಆರ್‌ಎಫ್ ತಂಡವು ಬುಧವಾರ ಕೊಡಗು ಜಿಲ್ಲೆಯ ಸಂಭಾವ್ಯ ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು
ಎನ್‌ಡಿಆರ್‌ಎಫ್ ತಂಡವು ಬುಧವಾರ ಕೊಡಗು ಜಿಲ್ಲೆಯ ಸಂಭಾವ್ಯ ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಒಂದೇ ಸಮನೆ ಸುರಿಯುತ್ತಿರುವ ಮಳೆ, ಬೀಸುತ್ತಿರುವ ಬಿರುಸಿನ ಗಾಳಿ ನಿಂತಿಲ್ಲ. ಕುಶಾಲನಗರ ಹೊರತುಪಡಿಸಿ ಉಳಿದೆಲ್ಲ ಕಡೆ ಭಾರಿ ಮಳೆ ಸುರಿದಿದೆ. ಇನ್ನಷ್ಟು ಭಾರಿ ಮಳೆ ಬೀಳುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ‘ರೆಡ್‌ ಅಲರ್ಟ್’ ಘೋಷಿಸಿದೆ. ಹೀಗಾಗಿ, ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿದೆ.

ಉತ್ತರ ಮತ್ತು ದಕ್ಷಿಣ ಕೊಡಗಿನ ಎಲ್ಲೆಡೆ ವ್ಯಾಪಕ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಎಲ್ಲ ನದಿ, ತೊರೆಗಳು ಮತ್ತೊಮ್ಮೆ ಉಕ್ಕಿ ಹರಿಯಲಾರಂಭಿಸಿವೆ. ನದಿ ತೀರದಲ್ಲಿ ಪ್ರವಾಹದ ಅತಂಕ ಮನೆಮಾಡಿದೆ.

ದಕ್ಷಿಣ ಕೊಡಗಿನಲ್ಲಿ ಲಕ್ಷ್ಮಣ ತೀರ್ಥ ನದಿ ತುಂಬಿ ಹರಿಯುತ್ತಿದ್ದು, ಶ್ರೀಮಂಗಲದ ಬಳಿ ಅಡಿಕೆ ತೋಟಗಳಿಗೆ ನೀರು ನುಗ್ಗಿದೆ. ಯವಕಾಪಾಡಿ ಗ್ರಾಮದ ಚೆಂಗಪ್ಪ ಅವರ ವಾಸದ ಮನೆಯ ಶೀಟ್‌ಗಳು ಭಾರಿ ಗಾಳಿ, ಮಳೆಗೆ ಹಾರಿ ಹೋಗಿವೆ. ಮತ್ತೊಂದೆಡೆ ನಾಪೋಕ್ಲು ವ್ಯಾಪ್ತಿಯಲ್ಲಿ ಕಾವೇರಿ ನದಿಯೂ ಭೋರ್ಗರೆಯುತ್ತಿದೆ. ಮಳೆ ನಿಲ್ಲದೇ ಹೋದಲ್ಲಿ ಪ್ರವಾಹ ಸೃಷ್ಟಿಯಾಗುವ ಭೀತಿ ನಿವಾಸಿಗಳಲ್ಲಿದೆ.

ADVERTISEMENT

ಇನ್ನೊಂದೆಡೆ, ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣವೂ ನಿರಂತರವಾಗಿ ಹೆಚ್ಚುತ್ತಿದೆ. ಬುಧವಾರ ಸಂಜೆ 10 ಸಾವಿರ ಕ್ಯುಸೆಕ್‌ನಷ್ಟು ನೀರನ್ನು ನದಿಗೆ ಹರಿಸಲಾಗುತ್ತಿತ್ತು. ಮಳೆ ಮುಂದುವರಿದಿರುವುದರಿಂದ ಇನ್ನಷ್ಟು ಹೆಚ್ಚಿನ ನೀರು ನದಿಗೆ ಬರುವ ನಿರೀಕ್ಷೆ ಇದೆ.

ಎನ್‌ಡಿಆರ್‌ಎಫ್ ತಂಡವು ಬುಧವಾರ ಕೊಡಗು ಜಿಲ್ಲೆಯ ಸಂಭಾವ್ಯ ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು

ಸನ್ನದ್ಧ ಸ್ಥಿತಿಯಲ್ಲಿ ಎನ್‌ಡಿಆರ್‌ಎಫ್

ಎನ್‌ಡಿಆರ್‌ಎಫ್‌ನ ಸಹಾಯಕ ಕಮಾಂಡೆಂಟ್ ಕಿರಣ್ ಕುಮಾರ್ ಅವರು ತಂಡದ ಸನ್ನದ್ಧ ಸ್ಥಿತಿಯನ್ನು ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಆರ್.ಎಂ. ಅನನ್ಯ ವಾಸುದೇವ ಅವರೊಡನೆ ಸಮಾಲೋಚನೆ ನಡೆಸಿದ ಅವರು ಭೂಕುಸಿತದ ಅಪಾಯ ಇರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಂದು ಜಿಲ್ಲೆಗೆ ಸಚಿವ ಭೋಸರಾಜು ಭೇಟಿ

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಅವರು ಜೂನ್ 26ರಂದು ಜಿಲ್ಲೆಗೆ ಬಂದು ಮಳೆ ಹಾನಿ ಪ್ರದೇಶಗಳನ್ನು ವೀಕ್ಷಿಸಲಿದ್ದಾರೆ. ಬೆಳಿಗ್ಗೆ 11.30ಕ್ಕೆ ಕುಶಾಲನಗರಕ್ಕೆ ಬಂದ ಬಳಿಕ ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಯಾಗಿರುವ ವಿವಿಧ ಪ್ರದೇಶ ವೀಕ್ಷಿಸಿ ಸಂಜೆ 5 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಮಳೆ ಹಾನಿಯ ಕುರಿತು ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.