ADVERTISEMENT

₹1 ಕೋಟಿ ವೆಚ್ಚದಲ್ಲಿ ಹೈಟೆಕ್ ಮೀನು ಮಾರುಕಟ್ಟೆ ನಿರ್ಮಾಣ

ಕುಶಾಲನಗರ ಪುರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 6:31 IST
Last Updated 2 ಜುಲೈ 2025, 6:31 IST
ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು
ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು   

ಕುಶಾಲನಗರ: ಪಟ್ಟಣದ ಕಾವೇರಿ ಬಡಾವಣೆಯಲ್ಲಿ ಹತ್ತು ಸೇಂಟ್ ಜಾಗದಲ್ಲಿ ₹1 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಹಾಗೂ ಹೈಟೆಕ್ ಮಾದರಿಯ ಹಸಿ ಮೀನು ಮಾರುಕಟ್ಟೆ ನಿರ್ಮಾಣ ಮಾಡಲು ಮಂಗಳವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.

ಇಲ್ಲಿನ ನೂತನ ಪುರಸಭೆ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲ್ಲೂಕು ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಮಾತನಾಡಿ, ‘ಕುಶಾಲನಗರ, ಸೋಮವಾರಪೇಟೆಗಳಲ್ಲಿ ಸುಸಜ್ಜಿತ, ಹೈಟೆಕ್ ಎರಡು ಮೀನುಗಾರಿಕೆ ಮಾರುಕಟ್ಟೆ ನಿರ್ಮಾಣಕ್ಕೆ ಡಿಪಿಆರ್ ಸಲ್ಲಿಸಿದ್ದು, ₹2 ಕೋಟಿ ಅನುದಾನಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ’ ಎಂದು ಹೇಳಿದರು.

ಸದಸ್ಯ ತಿಮ್ಮಪ್ಪ ಮಾತನಾಡಿ, ‘ಜಾಗದ ದಾಖಲೆಗಳು ಯಾರ ಹೆಸರಿನಲ್ಲಿವೆ ಎಂಬುದನ್ನು ಮೊದಲು ಗುರುತಿಸಿ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಮೀನುಗಾರಿಕೆ ಇಲಾಖೆಗೆ ವರ್ಗಾಯಿಸಲು ಕ್ರಮ ಕೈಗೊಳ್ಳಬೇಕು’ ಎಂದರು.

ADVERTISEMENT

ಪಟ್ಟಣದಲ್ಲಿ ಯೋಜನೆ ಅನುಷ್ಠಾನಕ್ಕೆ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.

ಸೆಸ್ಕ್ ಅಧಿಕಾರಿ ‌ಸುಮೇಶ್ ಮಾತನಾಡಿ, ‘ಪಟ್ಟಣದ ಎಲ್ಲಾ ಹಳೆಯ ವಿದ್ಯುತ್ ಕಂಬಗಳ ಬದಲಾವಣೆ ಹಾಗೂ ಹೊಸದಾಗಿ ಕೇಬಲ್ ಅಳವಡಿಕೆ, ಹೊಸ ಬಡಾವಣೆಗಳಿಗೆ ಟಿಸಿ ಅಳವಡಿಕೆ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ₹10 ಕೋಟಿ ಡಿಪಿಆರ್ ಸಿದ್ದಪಡಿಸಲಾಗಿದೆ. ಶೀಘ್ರ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಜೊತೆಗೆ ಅಪಾಯಕಾರಿ ವಿದ್ಯುತ್ ಕಂಬಗಳನ್ನು ತ್ವರಿತವಾಗಿ ಬದಲಾವಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

‘ಯುಜಿಡಿಗೆ ಬಿಡುಗಡೆಯಾದ ಅನುದಾನ ಹಾಗೂ ಕಾಮಗಾರಿ ಬಗ್ಗೆ ತನಿಖೆ ನಡೆಸಬೇಕು ಎಂದು ಕೈಗೊಂಡ ನಿರ್ಣಯದ ಬಗ್ಗೆ ಏನು ಕ್ರಮ ಕೈಗೊಂಡಿದ್ದಿರಿ’ ಎಂದು ಸದಸ್ಯ ಆನಂದ್ ಕುಮಾರ್, ಪ್ರಕಾಶ್ ಅಧ್ಯಕ್ಷರನ್ನು ಪ್ರಶ್ನಿಸಿದರು.

‘ಸರ್ಕಾರದ ಹಣ ಪೋಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಸದಸ್ಯ ತಿಮ್ಮಪ್ಪ ಆಗ್ರಹಿಸಿದರು.

ಜಲಮಂಡಳಿ ಕಾರ್ಯಪಾಲಕ ಎಂಜಿನಿಯರ್ ಉಮೇಶ್‌ಚಂದ್ರ ಮಾತನಾಡಿ, ‘ಯುಜಿಡಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಈಗ ಎಲ್ಲಾ ಮನೆಗಳಿಗೆ ಸಂಪರ್ಕ ನೀಡಿ ನಿರ್ವಹಣೆ ಮಾಡಬೇಕಾಗಿದೆ. ಅದಕ್ಕಾಗಿ ₹12.5 ಲಕ್ಷವನ್ನು ಪುರಸಭೆಯಿಂದ ನೀಡಬೇಕು’ ಎಂದು ಹೇಳಿದರು.

ಯುಜಿಡಿ‌ ಕಾಮಗಾರಿ ಸರಿಯಾಗಿ ನಡೆದಿಲ್ಲ ಎಂದು ಸದಸ್ಯರು ದೂರಿದರು. ಯುಜಿಡಿ ಯಶಸ್ವಿಯಾಗಿರುವ‌ ಪಟ್ಟಣಗಳಿಗೆ ಪುರಸಭೆಯಿಂದ ನಿಯೋಗ ತೆರಳಿ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳೋಣ’ ಎಂದು ಹೇಳಿದರು.

ಹಳೆ ಮನೆಗಳಿಗೆ ಎನ್.ಒ.ಸಿ ನೀಡುತ್ತಿಲ್ಲ ಎಂದು ಸದಸ್ಯ ಜಗದೀಶ್ ದೂರಿದರು.

‘ಲೈಸೆನ್ಸ್ ಪಡೆಯದ ಮನೆಗಳಿಗೆ ಎನ್.ಒ.ಸಿ. ನೀಡದಂತೆ ಸುಪ್ರೀಂ ಕೋರ್ಟ್ ಆದೇಶವಿದೆ’ ಎಂದು‌ ಮುಖ್ಯಾಧಿಕಾರಿ ಗಿರೀಶ್ ಹೇಳಿದರು.

ಸದಸ್ಯ ಜೈವರ್ಧನ್, ಆನಂದ್ ಕುಮಾರ್, ಅಮೃತ್ ರಾಜ್, ನವೀನ್, ಹರೀಶ್, ಪ್ರಕಾಶ್ ಮಾತನಾಡಿ, ಜನಸಾಮಾನ್ಯರಿಗೆ ತೊಂದರೆ‌‌ ಆಗದಂತೆ ಹಳೆಯ‌ ಮನೆಗಳಿಗೆ‌ ಎನ್‌ಒಸಿ ನೀಡಬೇಕು’ ಎಂದು ಒತ್ತಾಯಿಸಿದರು.

‘ಗೊಂದಿಬಸವನಹಳ್ಳಿಯಲ್ಲಿ ಒಣಗಿ ನಿಂತಿರುವ ಮರ ಬಿದ್ದರೆ ವಿದ್ಯುತ್ ಕಂಬಗಳಿಗೆ ಹಾನಿಯಾಗುತ್ತದೆ. ಇದರಿಂದ ಸಮಸ್ಯೆ ಎದುರಾಗಲಿದೆ. ಕೂಡಲೇ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು’ ಜಗದೀಶ್ ಹಾಗೂ ಪ್ರಕಾಶ್ ಒತ್ತಾಯಿಸಿದರು.

‘ಬೆಂಡೆ ಬೆಟ್ಟದಿಂದ‌ ಕಾಡಾನೆಗಳು ಗೊಂದಿಬಸವನಹಳ್ಳಿ ಕಡೆಗೆ ಬರುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಕಂದಕ ನಿರ್ಮಿಸಬೇಕು. ಮಂಗಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು’ ಸದಸ್ಯರಾದ ಪ್ರಕಾಶ್, ರೇಣುಕಾ ಒತ್ತಾಯಿಸಿದರು.

‘ದಂಡಿನಪೇಟೆ ಬಡಾವಣೆಯಲ್ಲಿ ವಿದ್ಯುತ್ ಕಂಬಗಳು ಹಾನಿಯಾಗಿ ಅಪಾಯವನ್ನು ಆಹ್ವಾನಿಸುತ್ತಿದ್ದರೂ ಅವುಗಳ ಬದಲಾವಣೆ ಮಾಡಿಲ್ಲ’ ಎಂದು ಸದಸ್ಯ ಆನಂದ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯರಾದ ಶಿವಕುಮಾರ್, ಜಯಲಕ್ಷ್ಮಮ್ಮ, ನವೀನ, ಹರೀಶ್, ರೂಪಾ ಮಾತನಾಡಿ, ‘ತಮ್ಮ ವಾರ್ಡ್‌ಗಳಲ್ಲಿನ ಹಳೆಯ ವಿದ್ಯುತ್ ಕಂಬಗಳನ್ನು ಬದಲಿಸಬೇಕು’ ಎಂದು ಒತ್ತಾಯಿಸಿದರು.

ಪುರಸಭೆ ಉಪಾಧ್ಯಕ್ಷೆ ಪುಟ್ಟಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಕಂದಾಯ ಅಧಿಕಾರಿ ರಾಮು, ಆರೋಗ್ಯ ಅಧಿಕಾರಿ ಉದಯಕುಮಾರ್ ಪಾಲ್ಗೊಂಡಿದ್ದರು.

ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ.

ಪುರಸಭೆಯಲ್ಲಿ ಅನುಮೋದನೆಯಾದ ವಿಷಯಗಳು

*ಪುರಸಭೆ ವಾಣಿಜ್ಯ ಸಂಕೀರ್ಣಗಳ ಹರಾಜಿಗೆ ಟೆಂಡರ್ ಕರೆಯಲು ಒಪ್ಪಿಗೆ ಸೂಚಿಸಲಾಯಿತು.

*ಅಪರಾಧ ತಡೆಗೆ ಪೊಲೀಸ್ ಇಲಾಖೆ ಮನವಿ ಮೇರೆಗೆ ವಿವಿಧೆಡೆ ಸಿಸಿಟಿವಿ ಕ್ಯಾಮರಾ ಅಳವಡಿಕೆ ಗುಂಡೂರಾವ್ ಬಡಾವಣೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಂಜೂರಾಗಿರುವ 25 ಸೆಂಟ್ ಜಾಗದ ಜೊತೆಗೆ ಹೆಚ್ಚುವರಿಯಾಗಿ 25 ಸೆಂಟ್ ಜಾಗ ನೀಡಲು ಸಮ್ಮತಿ 

*ಪುರಸಭೆ ವ್ಯಾಪ್ತಿಯ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿಗೆ ಅನುಮೋದನೆ 

‘ನಾಲ್ಕು ತಿಂಗಳಲ್ಲಿ ₹88 ಲಕ್ಷ ವ್ಯತ್ಯಾಸ’

ಸಭೆ ಆರಂಭದಲ್ಲಿ ಕಳೆದ ಫೆಬ್ರುವರಿಯಿಂದ– ಮೇವರೆಗಿನ ಮಾಹೆಯ ಜಮಾ ಖರ್ಚಿನ ವರದಿಯಲ್ಲಿ ₹88 ಲಕ್ಷ ವ್ಯತ್ಯಾಸ ಕಂಡುಬಂದಿರುವ ಬಗ್ಗೆ ಸದಸ್ಯ ಡಿ.ಕೆ.ತಿಮ್ಮಪ್ಪ ಪ್ರಸ್ತಾಪಿಸಿ ಸ್ಪಷ್ಟೀಕರಣ ನೀಡುವಂತೆ ಒತ್ತಾಯಿಸಿದರು. ಈ ಬಗ್ಗೆ ಧ್ವನಿಗೂಡಿಸಿದ ಸದಸ್ಯರಾದ ಬಿ.ಜೈವರ್ಧನ್ ಹಾಗೂ ಅಮೃತ್ ರಾಜ್ ವರದಿಯ ಲೋಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಜೊತೆಗೆ ಜಮಾ ಖರ್ಚಿನ ವರದಿಯನ್ನು ಸರಿಪಡಿಸಿ ಮುಂದಿನ ಸಭೆಗೆ ಮಂಡಿಸಿದ ನಂತರವೇ ಜಮಾ ಖರ್ಚಿನ ವರದಿಗೆ ಅನುಮೋದನೆ ನೀಡುವುದಾಗಿ ವಿರೋಧ ಪಕ್ಷದ ಸದಸ್ಯರು ಹೇಳಿದರು.

‘ಲೆಕ್ಕಪತ್ರದಲ್ಲಿ ಆಗಿರುವ‌ ತಾಂತ್ರಿಕ ಲೋಪದೋಷವನ್ನು ಸರಿಪಡಿಸಿ ಸಭೆಗೆ ಮಂಡಿಸಲಾಗುವುದು’ ಎಂದು ಮುಖ್ಯಾಧಿಕಾರಿ ಗಿರೀಶ್ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.